ಗುರುವಾರ , ಆಗಸ್ಟ್ 18, 2022
25 °C

ಚುನಾವಣೆಗಳು ಮುಗಿದರೆ, ತೈಲ ದರ ಏರಿಕೆಯಾಗಲಿದೆ ಎಂದು ಮೊದಲೇ ಹೇಳಿದ್ದೆ: ರಾಹುಲ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಚುನಾವಣೆಗಳು ಮುಗಿಯುತ್ತಿದ್ದಂತೆ ಪೆಟ್ರೋಲ್ ಹಾಗೂ ಡೀಸೆಲ್‌ ದರ ಏರಿಕೆಯಾಗಲಿದೆ ಎಂದು ಮೊದಲೇ ತಿಳಿಸಿದ್ದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ತೈಲ ದರ ಏರಿಕೆಯನ್ನು ವಿರೋಧಿಸಿ ರಾಹುಲ್‌ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸಂಸದರು ದೆಹಲಿಯ ವಿಜಯ್‌ ಚೌಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಹಿಂದೆಂದೂ ಕಂಡಿರದಷ್ಟು ಏರಿಕೆಯಾಗಿವೆ ಎಂದು ಕಿಡಿಕಾರಿರುವ ರಾಹುಲ್, 'ಕಳೆದ 10 ದಿನಗಳಲ್ಲಿ ಒಂಬತ್ತು ಬಾರಿ ತೈಲ ದರ ಹೆಚ್ಚಿಸಲಾಗಿದೆ. ಸರ್ಕಾರವು ದರ ಏರಿಕೆ ನಿಲ್ಲಿಸಬೇಕು. ತೈಲ ಬೆಲೆ ಏರಿಕೆಯಿಂದ ಬಡ ಮತ್ತು ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ' ಎಂದು ಒತ್ತಾಯಿಸಿದ್ದಾರೆ.

'ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಸರ್ಕಾರವು ಸಾವಿರಾರು ಕೋಟಿ ಸಂಗ್ರಹಿಸುತ್ತಿದೆ. ಇದರ ವಿರುದ್ಧ ಕಾಂಗ್ರೆಸ್ ದೇಶವ್ಯಾಪಿ ಪ್ರತಿಭಟನೆ ನಡೆಸುತ್ತಿದೆ' ಎಂದಿದ್ದಾರೆ. ಹಾಗೆಯೇ, 'ಚುನಾವಣೆಗಳು ಮುಗಿಯುತ್ತಿದ್ದಂತೆ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಲಿದೆ. ನಿಮ್ಮ ಟ್ಯಾಂಕ್‌ಗಳನ್ನು ತುಂಬಿಸಿಕೊಳ್ಳಿ ಎಂದು ಮೊದಲೇ ಹೇಳಿದ್ದೆ' ಎಂದೂ ನೆನಪಿಸಿದ್ದಾರೆ.

ಕಾಂಗ್ರೆಸ್‌ ಸಂಸದರು, ಫಲಕಗಳನ್ನು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ನಾಯಕ ಅಧೀರ್‌ ರಂಜನ್ ಚೌಧರಿ ಅವರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಇಂದು (ಮಾ.31, ಗುರುವಾರ) ಪ್ರತಿ ಲೀಟರ್‌ ಪೆಟ್ರೋಲ್, ಡೀಸೆಲ್ ದರ 80 ಪೈಸೆಯಷ್ಟು ಏರಿಕೆಯಾಗಿದೆ. ಇದರಿಂದ ತೈಲ ದರವು ಕಳೆದ 10 ದಿನಗಳಲ್ಲಿ ₹ 6.40 ಪೈಸೆಯಷ್ಟು ಹೆಚ್ಚಳವಾಗಿದೆ.

ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾ ವಿಧಾನಸಭೆಗಳಿಗೆ ಇತ್ತಿಚೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ದರ ಏರಿಕೆ ಕುರಿತು ರಾಹುಲ್ ಪ್ರಸ್ತಾಪಿಸಿದ್ದರು. ಮಾರ್ಚ್‌ 5 ರಂದು ಟ್ವಿಟರ್‌ನಲ್ಲಿ ಪೆಟ್ರೋಲ್ ಬಂಕ್ ಚಿತ್ರವೊಂದನ್ನು ಹಂಚಿಕೊಂಡಿದ್ದ ಅವರು, 'ಕೂಡಲೇ ನಿಮ್ಮ ಪೆಟ್ರೋಲ್ ಟ್ಯಾಂಕ್‌ಗಳನ್ನು ಭರ್ತಿ ಮಾಡಿಕೊಳ್ಳಿ. ಮೋದಿ ಸರ್ಕಾರದ ಚುನಾವಣಾ ಕೊಡುಗೆ ಸದ್ಯದಲ್ಲೇ ಕೊನೆಯಾಗಲಿದೆ' ಎಂದು ಬರೆದುಕೊಂಡಿದ್ದರು.

ಈ ಐದು ವಿಧಾನಸಭೆ ಚುನಾವಣೆಗಳ ಫಲಿತಾಂಶ ಮಾರ್ಚ್ 10ರಂದು ಪ್ರಕಟವಾಗಿತ್ತು. ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಮತ್ತು ಗೋವಾದಲ್ಲಿ ಬಿಜೆಪಿ ಸರ್ಕಾರ ರಚಿಸಿದೆ. ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷ (ಎಎಪಿ) ಅಧಿಕಾರಕ್ಕೇರಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು