ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ ಸಿಎಂ ಸ್ಥಾನದ ವಿಚಾರದಲ್ಲಿ ಒಂದೆರಡು ದಿನಗಳಲ್ಲಿ ನಿರ್ಧಾರ: ವೇಣುಗೋಪಾಲ್

Last Updated 29 ಸೆಪ್ಟೆಂಬರ್ 2022, 14:02 IST
ಅಕ್ಷರ ಗಾತ್ರ

ನವದೆಹಲಿ: ರಾಜಸ್ಥಾನ ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ಒಂದೆರಡು ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಗುರುವಾರ ಹೇಳಿದ್ದಾರೆ.

ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಬಿಕ್ಕಟ್ಟು ಶಮನಗೊಳಿಸಲು ಸರಣಿ ಮಾತುಕತೆಗಳ ಬಳಿಕ ವೇಣುಗೋಪಾಲ್ ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಯಾರೆಲ್ಲ ಸ್ಪರ್ಧಿಸುತ್ತಾರೆ ಎಂಬುದು ನಾಳೆ (ಶುಕ್ರವಾರ) ಅಂತಿಮವಾಗಲಿದೆ. ಆ ಬಳಿಕ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನ ನೈತಿಕ ಹೊಣೆ ಹೊತ್ತುಕೊಂಡಿರುವ ಮುಖ್ಯಮಂತ್ರಿ ಅಶೋಕ್ ಗೆಹಲೋತ್, ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದರು.

ಅಲ್ಲದೆ ಸೋನಿಯಾ ಗಾಂಧಿ ಅವರ ಜೊತೆ ಚರ್ಚೆ ನಡೆಸಿದ್ದ ಗೆಹಲೋತ್, ಕ್ಷಮೆಯಾಚಿಸಿದ್ದರು. ತಾವು ಪಕ್ಷದ ಶಿಸ್ತಿನ ಸಿಪಾಯಿ ಎಂದು ಹೇಳಿಕೊಂಡಿರುವ ಅವರು ಸಿಎಂ ಆಗಿ ಮುಂದುವರಿಯಬೇಕೇ ಎಂಬುದನ್ನು ಹೈಕಮಾಂಡ್‌ ನಿರ್ಧರಿಸಲಿದೆ ಎಂದು ಹೇಳಿದ್ದರು.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಗೆಹಲೋತ್ ಸ್ಪರ್ಧಿಸುತ್ತಾರೆ ಎಂದು ವರದಿಯಾದ ಬೆನ್ನಲ್ಲೇ ರಾಜಸ್ಥಾನದ ನೂತನ ಸಿಎಂ ಸ್ಥಾನಕ್ಕೆ ಸಚಿನ್ ಪೈಲಟ್ ಎಂದು ಘೋಷಿಸಲು ಹೈಕಮಾಂಡ್ ಒಲವು ತೋರಿತ್ತು.

ಈ ನಡುವೆ ಹೈಕಮಾಂಡ್ ವೀಕ್ಷಕರನ್ನಾಗಿ ಕಳುಹಿಸಿದ್ದ ಅಜಯ್ ಮಾಕನ್ ಮತ್ತು ಮಲ್ಲಿಕಾರ್ಜುನ ಖರ್ಗೆ ಕಳೆದ ಭಾನುವಾರ ಕರೆದಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಗೆ ಹಾಜರಾಗದೆ ಗೆಹಲೋತ್ ಬಣದ ಶಾಸಕರು ಪ್ರತ್ಯೇಕ ಸಭೆ ನಡೆಸಿದ್ದರು.

ಬಳಿಕ ಸೋನಿಯಾ ಗಾಂಧಿ ಅವರಿಗೆ ಪಕ್ಷದ ವೀಕ್ಷಕರಾದ ಮಾಕನ್ ಹಾಗೂ ಖರ್ಗೆ ಲಿಖಿತ ವರದಿ ನೀಡಿ ಶಿಸ್ತಿನ ಕ್ರಮಕ್ಕೆ ಶಿಫಾರಸು ಮಾಡಿದ್ದರು.

ಇದನ್ನೂ ಓದಿ:

ಏತನ್ಮಧ್ಯೆ ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಇದರೊಂದಿಗೆ ಕೇರಳದ ಸಂಸದ ಶಶಿ ತರೂರ್ ಜೊತೆಗೆ ನೇರ ಹಣಾಹಣಿ ಏರ್ಪಟ್ಟಿದೆ. ಅವರಿಬ್ಬರು ನಾಳೆ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 17ರಂದು ಚುನಾವಣೆ ನಡೆಯಲಿದ್ದು, ಅ.19ರಂದು ಫಲಿತಾಂಶ ಹೊರಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT