ಶುಕ್ರವಾರ, ಅಕ್ಟೋಬರ್ 23, 2020
27 °C

ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾದ ನಟಿ ಖುಷ್ಬೂ ಸುಂದರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ:  ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದ ನಟಿ ಖುಷ್ಬೂ ಸುಂದರ್ ನಿರೀಕ್ಷೆಯಂತೇ ಬಿಜೆಪಿಗೆ ಸೇರ್ಪಡೆಯಾದರು. 

ದೆಹಲಿಯ ಬಿಜೆಪಿ ಪ‍್ರಧಾನ ಕಚೇರಿಯಲ್ಲಿ ಖುಷ್ಬೂ ಪಕ್ಷಕ್ಕೆ ಸೇರ್ಪಡೆಯಾದರು.  ಬಿಜೆಪಿ ಪ್ರಧಾನ ಕಾರ್ಯದರ್ಶಿ, ತಮಿಳುನಾಡು ಉಸ್ತುವಾರಿ ಸಿ.ಟಿ ರವಿ ಅವರು ಖುಷ್ಬೂ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. 

‘ದೇಶವು ಅಭಿವೃದ್ಧಿಪಥದಲ್ಲಿ ಸಾಗಲು, ಸರಿಯಾದ ದಿಕ್ಕಿನಲ್ಲಿ ದೇಶವನ್ನು ಕರೆದೊಯ್ಯಲು ನಮಗೆ ಪ್ರಧಾನಿ ನರೇಂದ್ರ ಮೋದಿಯಂಥ ವ್ಯಕ್ತಿ ಅಗತ್ಯವಿದೆ’ ಎಂದು ಪಕ್ಷ ಸೇರ್ಪಡೆಯ ಬಳಿಕ ಖುಷ್ಬೂ ಪ್ರತಿಕ್ರಿಯಿಸಿದರು.

ನಂತರ, ಖಷ್ಬೂ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾದರು. 

ಖಷ್ಬೂ ಪಕ್ಷ ಸೇರ್ಪಡೆ ಬಗ್ಗೆ ಟ್ವೀಟ್‌ ಮಾಡಿರುವ ಸಿ.ಟಿ ರವಿ, ‘ ತಮಿಳುನಾಡಿನಲ್ಲಿ ಬಿಜೆಪಿಯನ್ನು ಬಲಪಡಿಸಲು ಖುಷ್ಬೂ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ತಿರುಮುರುಗನ್‌ ಅವರ ನೇತೃತ್ವದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸ ನನಗೆ ಇದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಮಾರ್ಗದರ್ಶನದಲ್ಲಿ ನಾವು ತಮಿಳುನಾಡಿನ ಜನರಿಗಾಗಿ (ತಮಿಳ್‌ ಮಕ್ಕಳ್‌) ಶ್ರಮಿಸಲಿದ್ದೇವೆ,’ ಎಂದು ಹೇಳಿದ್ದಾರೆ. 

2010ರಲ್ಲಿ ಖುಷ್ಬೂ ಡಿಎಂಕೆ ಸೇರ್ಪಡೆಯಾಗಿದ್ದರು. ಆಗ ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರದಲ್ಲಿತ್ತು. ಆದರೆ, 2014ರಲ್ಲಿ ಡಿಎಂಕೆ ತೊರೆದ ಅವರು ಸೋನಿಯಾ ಗಾಂಧಿ ಜೊತೆಗಿನ ಭೇಟಿ ಬಳಿಕ ಕಾಂಗ್ರೆಸ್‌ಗೆ ಸೇರ್ಪಡೆಯಾದರು. 2019ರ ಲೋಕಸಭಾ ಚುನಾವಣೆಯ ಡಿಎಂಕೆ–ಕಾಂಗ್ರೆಸ್‌ ಮೈತ್ರಿಯಲ್ಲಿ ಖುಷ್ಬೂ ಅವರಿಗೆ ಟಿಕೆಟ್‌ ಸಿಗಲಿಲ್ಲ, ಅಲ್ಲದೇ ರಾಜ್ಯಸಭೆಗೂ ಆಯ್ಕೆ ಮಾಡಲಿಲ್ಲ.

ತಮಿಳುನಾಡು ವಿಧಾನಸಭೆ ಚುನಾವಣೆಗೆ ಇನ್ನು ಎಂಟು ತಿಂಗಳು ಬಾಕಿ ಇದೆ.

ಮುಂಬೈನ ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದ ಖುಷ್ಬೂ ಚಿಕ್ಕಂದಿನಿಂದಲೂ ನಟನೆಯಲ್ಲಿ ತೊಡಗಿಸಿಕೊಂಡವರು. 90ರ ದಶಕದಲ್ಲಿ ತಮಿಳುನಾಡಿನ ಅತ್ಯಂತ ಜನಪ್ರಿಯ ಸ್ಟಾರ್‌ ನಟರಲ್ಲಿ ಖುಷ್ಬೂ ಸಹ ಒಬ್ಬರಾಗಿದ್ದರು. ಆ ಸಮಯದಲ್ಲಿ ಅಭಿಮಾನಿಗಳು ಅವರಿಗಾಗಿಯೇ ದೇವಾಲಯವನ್ನೂ ಕಟ್ಟಿದ್ದರು. ಅನಂತರದಲ್ಲಿ ಅವರು ಟಿವಿ ಧಾರಾವಾಹಿಗಳಲ್ಲಿ ನಟಿಸಿದರು ಹಾಗೂ ಟಿವಿ ನಿರೂಪಣೆಗಳನ್ನು ನಡೆಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು