ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆಯಲ್ಲಿ ಖರ್ಗೆ–ಧನಕರ್‌ ಮಾತಿನ ಸಮರ

ಜೆಪಿಸಿ ತನಿಖೆಗೆ ವಿರೋಧ ಪಕ್ಷಗಳ ಬಿಗಿಪಟ್ಟು: ಗದ್ದಲಕ್ಕೆ ಸಾಕ್ಷಿಯಾದ ರಾಜ್ಯಸಭೆ
Last Updated 8 ಫೆಬ್ರುವರಿ 2023, 16:57 IST
ಅಕ್ಷರ ಗಾತ್ರ

ನವದೆಹಲಿ: ಅದಾನಿ ಸಮೂಹದ ವಿರುದ್ಧದ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ತನಿಖೆಗೆ ಒಪ್ಪಿಸಬೇಕು ಎಂದು ವಿರೋಧ ಪಕ್ಷಗಳು ಬಿಗಿಪಟ್ಟು ಹಿಡಿದಿದ್ದರಿಂದ ರಾಜ್ಯಸಭೆಯಲ್ಲಿ ಬುಧವಾರ ಗದ್ದಲದ ವಾತಾವರಣ ಸೃಷ್ಟಿಯಾಯಿತು.

ರಾಷ್ಟ್ರಪತಿಯವರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ‘ಉದ್ಯಮಿಯೊಬ್ಬರ ಸಂಪತ್ತು ಹೆಚ್ಚಲು ಅವರು ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಹೊಂದಿರುವ ಗೆಳೆತನ ಕಾರಣವೇ’ ಎಂದು ಪ್ರಶ್ನಿಸಿದರು.

ಇದು ಬಿಜೆಪಿ ಸದಸ್ಯರನ್ನು ಕೆರಳಿಸಿತು. ಸದನದ ನಾಯಕ ಪೀಯೂಷ್‌ ಗೋಯಲ್‌ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಖರ್ಗೆ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಮೋದಿಯವರು ಮೌನವಾಗಿ ಕುಳಿತಿದ್ದರು.

ವಿದೇಶಿ ಸಂಸ್ಥೆಯೊಂದರ ವರದಿಯ ಆಧಾರದಲ್ಲಿ ದೇಶ ವಿರೋಧಿ ಹೇಳಿಕೆಗಳನ್ನು ನೀಡಲು ಸದನವನ್ನು ವೇದಿಕೆಯಾಗಿ ಬಳಸಿಕೊಳ್ಳಬಾರದು ಎಂದು ಸಭಾಪತಿ ಜಗದೀಪ್‌ ಧನಕರ್‌ ಅವರು ಸೂಚಿಸಿದರು. ಇದರಿಂದ ಕೆರಳಿದ ವಿರೋಧ ಪಕ್ಷಗಳ ಸದಸ್ಯರು ಬಿಜೆಪಿಯವರ ದೇಶಪ್ರೇಮವನ್ನು ಪ್ರಶ್ನಿಸಿದರು.

‘ನಾ ಖಾವುಂಗಾ. ನಾ ಖಾನೆದೂಂಗಾ’ ಎಂದು ಮೋದಿ ಅವರು 2014ರಲ್ಲಿ ಹೇಳಿದ್ದರು. ಇದು ಪೊಳ್ಳು ಭರವಸೆಯೇ. ಮೋದಿ ಅವರ ಆಪ್ತ ಸ್ನೇಹಿತನ ಸಂಪತ್ತು 13 ಪಟ್ಟು ಹೆಚ್ಚಿದೆ. 2019ರಲ್ಲಿ ₹1 ಲಕ್ಷ ಕೋಟಿಯಷ್ಟಿದ್ದ ಸಂಪತ್ತು ₹12 ಲಕ್ಷ ಕೋಟಿಗೆ ಏರಿದ್ದು ಹೇಗೆ? ಎರಡು ವರ್ಷದಲ್ಲಿ ಅದ್ಯಾವ ಪವಾಡ ನಡೆಯಿತು. ಇದು ಗೆಳೆತನದ ಫಲವೇ’ ಎಂದು ಅದಾನಿ ಹೆಸರು ಪ್ರಸ್ತಾ‍ಪಿಸದೆ ಖರ್ಗೆ ಕುಟುಕಿದರು.

ಆಗ ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು, ‘ಭಾಷಣದ ವೇಳೆ ಆಧಾರ ರಹಿತವಾಗಿ ಆರೋಪ ಮಾಡಬಾರದು’ ಎಂದು ತಾಕೀತು ಮಾಡಿದರು. ಮೋದಿ ಅವರ ಮೇಲಿನ ಆರೋಪ ಸಾಬೀತುಪಡಿಸಲು ಅಗತ್ಯವಿರುವ ದಾಖಲೆಗಳನ್ನು ಸದನಕ್ಕೆ ಸಲ್ಲಿಸಿ ಎಂದೂ ಸೂಚಿಸಿದರು.

‘ಸದನದಲ್ಲಿ ಏನೇ ಮಾತನಾಡಿದರೂ ಅದು ದೇಶದ ಹಿತಾಸಕ್ತಿಗೆ ಸಂಬಂಧಿಸಿದ್ದಾಗಿರಬೇಕು. ಅವು ವಿಶ್ವಾಸಾರ್ಹತೆಯಿಂದ ಕೂಡಿರಬೇಕು’ ಎಂದೂ ಹೇಳಿದರು.

‘ನಾನು ಸತ್ಯ ಹೇಳಲು ಹೊರಟರೆ ಅದು ದೇಶ ವಿರೋಧಿ ಹೇಳಿಕೆಯಾಗುತ್ತದೆ. ನಾನು ದೇಶ ವಿರೋಧಿಯಲ್ಲ. ನಿಮಗಿಂತಲೂ ದೊಡ್ಡ ದೇಶಭಕ್ತ. ಜೊತೆಗೆ ಭೂಮಿಪುತ್ರ. ನನ್ನ ಭಾವನೆಗಳನ್ನು ಹತ್ತಿಕ್ಕಲು ಪ್ರಯತ್ನಿಸಬೇಡಿ. ದೇಶವನ್ನು ಲೂಟಿ ಹೊಡೆಯುತ್ತಿರುವ ನೀವು ನನ್ನನ್ನು ದೇಶ ವಿರೋಧಿ ಎಂದು ಕರೆಯುತ್ತಿದ್ದೀರಾ’ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

‘ಕೋಮು ಗಲಭೆಗಳಿಂದಾಗಿ ಭಾರತದ ವರ್ಚಸ್ಸಿಗೆ ಕುಂದುಂಟಾಗುತ್ತಿದೆ. ಯಾವ ಮುಖ ಇಟ್ಟುಕೊಂಡು ನಾನು ವಿದೇಶಗಳಿಗೆ ಹೋಗಲಿ. ರಾಜಧರ್ಮವು ಪಾಲನೆಯಾಗುತ್ತಿಲ್ಲ ಎಂದು ಮಾಜಿ ‍ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಅಹಮದಾಬಾದ್‌ನಲ್ಲಿ ಹೇಳಿದ್ದರು’ ಎಂದು ಖರ್ಗೆ ಸ್ಮರಿಸಿದರು. ಆಗ ಸದನದಲ್ಲಿ ಕೋಲಾಹಲ ಸೃಷ್ಟಿಯಾಯಿತು.

ವಾಜಪೇಯಿಯವರ ಹೇಳಿಕೆ ಪ್ರಕಟಿಸಿದ್ದ ದಿನಪತ್ರಿಕೆಯೊಂದನ್ನು ಖರ್ಗೆ ಅವರು ಸದನದಲ್ಲಿ ಪ್ರದರ್ಶಿಸಿದರು. ಆದರೆ ಸಭಾಧ್ಯಕ್ಷರು ಅದನ್ನು ಒಪ್ಪಲಿಲ್ಲ. ‘ದಿನಪತ್ರಿಕೆಗಳಲ್ಲಿ ಪ್ರಕಟವಾದ ವರದಿಯು ದಾಖಲೆಗೆ ಪರ್ಯಾಯವಲ್ಲ. ನೀವು ಏನು ಹೇಳುತ್ತಿದ್ದರೋ ಅದನ್ನು ದೃಢೀಕರಿಸಬೇಕು’ ಎಂದು ಖರ್ಗೆ ಅವರಿಗೆ ಮತ್ತೊಮ್ಮೆ ಸೂಚಿಸಿದರು.

‘ಕಲ್ಲಿದ್ದಲು ಹಾಗೂ 2ಜಿ ಯಂತಹ ಹಗರಣಗಳು ನಡೆದಾಗ, ಭದ್ರತೆ ವಿಚಾರವಾಗಿ ಸರ್ಕಾರದ ಮೇಲೆ ಆರೋಪಗಳು ಕೇಳಿ ಬಂದಂತಹ ಸಂದರ್ಭಗಳಲ್ಲಿ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ತನಿಖೆಗೆ ಪಟ್ಟು ಹಿಡಿಯುವುದರಲ್ಲಿ ಅರ್ಥವಿದೆ. ಆಗ ಈ ಕುರಿತು ಚರ್ಚಿಸಬಹುದು’ ಎಂದು ಗೋಯಲ್‌ ಹೇಳಿದರು.

‘ರಾಹುಲ್‌ ವಿರುದ್ಧ ಕ್ರಮ ಕೈಗೊಳ್ಳಿ’

‘ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸದನದಲ್ಲಿ ಮಾತನಾಡುವಾಗ ಪ್ರಧಾನಿ ಮೋದಿ ಅವರ ವಿರುದ್ಧ ಆಧಾರರಹಿತ ಹಾಗೂ ಮಾನಹಾನಿಕರ ಹೇಳಿಕೆ ನೀಡಿದ್ದಾರೆ. ಆ ಮೂಲಕ ಸದನದ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಅವರು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.

‘ರಾಹುಲ್‌ ಅವರ ಹೇಳಿಕೆಗಳು ದಾರಿ ತಪ್ಪಿಸುವಂತಿವೆ. ಅವು ಅಸಂಸದೀಯವಾಗಿವೆ’ ಎಂದೂ ಅವರು ದೂರಿದ್ದಾರೆ.

ಲೋಕಸಭೆಯಲ್ಲಿ ಆ್ಯಪಲ್‌, ಆ್ಯಪಲ್‌ ಎಂದು ಹೇಳಿದ್ದು ನಿಜ. ಮಹಿಳೆಯಾಗಿ ಇಂತಹ ಶಬ್ದ ಹೇಗೆ ಬಳಸಲು ಸಾಧ್ಯ ಎಂದು ಬಿಜೆಪಿಯವರು ಕೇಳುತ್ತಿದ್ದಾರೆ. ತನಗೆ ತೋಚಿದ ಹಾಗೆ ಪ್ರತ್ಯುತ್ತರ ನೀಡಲು ಪುರುಷ ಆಗಿರಲೇಬೇಕೆ?

ಮಹುವಾ ಮೊಯಿತ್ರಾ, ಟಿಎಂಸಿ ಸಂಸದೆ

ಅದಾನಿ ಅಥವಾ ಅಂಬಾನಿ ಮೇಲೆ ವೈಯಕ್ತಿಕವಾಗಿ ನಮಗೇನು ದ್ವೇಷವಿಲ್ಲ. ಅದಾನಿ ಸಮೂಹದ ಹಗರಣವನ್ನು ಬಿಜೆಪಿ ಸಮರ್ಥಿಸಿಕೊಳ್ಳುತ್ತಿದೆ. ಇದನ್ನು ನಾವು ಹಿಂದೆಂದೂ ಕಂಡಿರಲಿಲ್ಲ–ಅಧೀರ್‌ ರಂಜನ್‌ ಚೌಧರಿ, ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT