ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ

Last Updated 17 ಫೆಬ್ರುವರಿ 2021, 19:50 IST
ಅಕ್ಷರ ಗಾತ್ರ

ಚಂಡೀಗಡ: ಪಂಜಾಬ್‌ನ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಭಾರಿ ಗೆಲುವು ಸಾಧಿಸಿದೆ. ಭಟಿಂಡಾ, ಹೋಷಿಯಾರ್‌ಪುರ, ಕಪುರ್ತಲ, ಅಬೊಹರ್‌, ಬಟಾಲ ಮತ್ತು ಪಠಾನ್‌ಕೋಟ್‌ ನಗರಪಾಲಿಕೆಗಳಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಕ್ಕಿದೆ. ಶಿರೋಮಣಿ ಅಕಾಲಿ ದಳದ (ಎಸ್‌ಎಡಿ) ನಾಯಕಿ ಹರ್‌ಸಿಮ್ರತ್‌ ಕೌರ್‌ ಅವರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಭಟಿಂಡಾ ನಗರ ಪಾಲಿಕೆಯು 53 ವರ್ಷಗಳ ಬಳಿಕ ಕಾಂಗ್ರೆಸ್‌ಗೆ ಸಿಕ್ಕಿದೆ.

ಮೊಗಾ ನಗರಪಾಲಿಕೆಯಲ್ಲಿ ಕಾಂಗ್ರೆಸ್‌ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಅಧಿಕಾರಕ್ಕೆ ಏರಲು ಆರು ಸ್ಥಾನಗಳ ಕೊರತೆ ಇದೆ. ಇಲ್ಲಿ, ಪಕ್ಷೇತರ ಸದಸ್ಯರ ಬೆಂಬಲ ನಿರ್ಣಾಯಕ ಆಗಲಿದೆ. ಮೊಹಾಲಿ ನಗರಪಾಲಿಕೆ ಮತ್ತು 109 ನಗರಸಭೆಗಳ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟವಾಗಲಿದೆ.

ಈ ಫಲಿತಾಂಶವು ಕಾಂಗ್ರೆಸ್‌ ಪಕ್ಷದಲ್ಲಿ ಭಾರಿ ಹುರುಪು ತುಂಬಬಹುದು. ಮುಖ್ಯವಾಗಿ ಪಂಜಾಬ್‌ ಮತ್ತು ಹರಿಯಾಣದ ರೈತರು ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಕಾಂಗ್ರೆಸ್‌ ಬೆಂಬಲ ನೀಡುತ್ತಿದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಗೆಲುವಿಗೆ ಇದು ಕಾರಣ ಎಂದು ಹೇಳಲಾಗುತ್ತಿದೆ. ಪಂಜಾಬ್‌ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಈಗಿನ ಫಲಿತಾಂಶ ವಿಧಾನಸಭೆ ಚುನಾವಣೆಯಲ್ಲಿಯೂ ಪುನರಾವರ್ತನೆ ಆಗಬಹುದು ಎಂಬ ವಿಶ್ವಾಸ ಕಾಂಗ್ರೆಸ್‌ನಲ್ಲಿ ಇದೆ.

ಮೊಗಾದಲ್ಲಿ 50 ವಾರ್ಡ್‌ಗಳಿದ್ದು 20ರಲ್ಲಿ ಕಾಂಗ್ರೆಸ್ ಗೆದ್ದಿದೆ. ಎಸ್‌ಎಡಿ 15, ಆಮ್‌ ಆದ್ಮಿ ಪಕ್ಷ 4, ಬಿಜೆಪಿ ಒಂದು ಮತ್ತು ಪಕ್ಷೇತರರು 10 ವಾರ್ಡ್‌ಗಳಲ್ಲಿ ಗೆಲುವು ಪಡೆದಿದ್ದಾರೆ.

ಚುನಾವಣಾ ಪ್ರಕ್ರಿಯೆ ಸಂದರ್ಭದಲ್ಲಿ ಪಕ್ಷಗಳ ಕಾರ್ಯಕರ್ತರ ನಡುವೆ ಕೆಲವೆಡೆ ಸಂಘರ್ಷ ನಡೆದಿತ್ತು. ತಮ್ಮ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ತಡೆ ಒಡ್ಡಲಾಗಿದೆ ಎಂದು ವಿರೋಧ ಪಕ್ಷಗಳ ನಾಯಕರು ಆರೋಪಿಸಿದ್ದರು. ಹಾಗಾಗಿಯೇ ಮೊಹಾಲಿ ನಗರಪಾಲಿಕೆಯ ಎರಡು ವಾರ್ಡ್‌ಗಳಲ್ಲಿ ಮರು ಮತದಾನಕ್ಕೆ ರಾಜ್ಯ ಚುನಾವಣಾ ಆಯೋಗ ಆದೇಶಿಸಿತ್ತು. ಈ ಕಾರಣಕ್ಕಾಗಿಯೇ ಅಲ್ಲಿ ಗುರುವಾರ ಮತ ಎಣಿಕೆ ನಡೆಯಲಿದೆ.

ಬಿಜೆಪಿ ನೇತೃತ್ವದ ಎನ್‌ಡಿಎಯ ಭಾಗವಾಗಿದ್ದ ಎಸ್ಎಡಿ, ಕೃಷಿ ಕಾಯ್ದೆಗಳನ್ನು ವಿರೋಧಿಸಿ ಎನ್‌ಡಿಎಯಿಂದ ಇತ್ತೀಚೆಗೆ ಹೊರಗೆ ಬಂದಿದೆ. ಹಾಗಾಗಿ, ಈ ಎರಡು ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಇದೇ 14ರಂದು ಮತದಾನ ನಡೆದಿತ್ತು. ಶೇ 70ಕ್ಕೂ ಹೆಚ್ಚು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT