ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ ಚುನಾವಣೆ: ಸೊಸೆ ಕಣಕ್ಕೆ, ಪ್ರತಾಪ್‌ಸಿಂಹ ರಾಣೆ ಸ್ಪರ್ಧೆಯಿಂದ ಹಿಂದಕ್ಕೆ

Last Updated 28 ಜನವರಿ 2022, 19:37 IST
ಅಕ್ಷರ ಗಾತ್ರ

‍ಪಣಜಿ: ಗೋವಾ ಕಾಂಗ್ರೆಸ್‌ನ ಹಿರಿಯ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಪ್ರತಾಪ್‌ಸಿಂಹ ರಾಣೆ ಅವರು ಹಲವು ಬಾರಿ ಪ್ರತಿನಿಧಿಸಿದ್ದ ಪೊರಿಯೆಂ ಕ್ಷೇತ್ರದ ಸ್ಪರ್ಧೆಯಿಂದ ಹಿಂದಕ್ಕೆ ಸರಿದಿದ್ದಾರೆ. ಇದು ಕಾಂಗ್ರೆಸ್‌ಗೆ ಹಿನ್ನಡೆ ಎಂದು ಹೇಳಲಾಗಿದೆ.

ರಾಣೆ ಅವರು ಪ್ರತಿಕ್ರಿಯೆಗೆ ಲಭ್ಯರಾಗಿಲ್ಲ. ಆದರೆ, ಸ್ಪರ್ಧಿಸುವುದಿಲ್ಲ ಎಂದು ಅವರು ಪಕ್ಷಕ್ಕೆ ತಿಳಿಸಿದ್ದಾರೆ ಎಂದು ಕಾಂಗ್ರೆಸ್‌ನ ಮೂಲಗಳು ಸ್ಪಷ್ಟಪಡಿಸಿವೆ. ರಾಣೆ ಅವರ ಸೊಸೆ ದಿವ್ಯಾ ರಾಣೆ ಅವರು ಇದೇ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಸೊಸೆಯೊಂದಿಗೆ ಸಂಘರ್ಷ ಬೇಡ ಎಂಬ ಕಾರಣಕ್ಕೆ ಪ್ರತಾಪ್‌ ಸಿಂಹ ರಾಣೆ ಅವರು ಸ್ಪರ್ಧೆಯಿಂದ ಹಿಂದೆ ಸರಿದರು ಎಂದು ಮೂಲಗಳು ಹೇಳಿವೆ.

87 ವರ್ಷದ ರಾಣೆ ಅವರು ಆರು ಬಾರಿ ಗೋವಾದ ಮುಖ್ಯಮಂತ್ರಿ ಆಗಿದ್ದರು. ಸತತ 11 ಬಾರಿ ಅವರು ಪೊರಿಯೆಂ ಕ್ಷೇತ್ರದಿಂದ ಗೆದ್ದಿದ್ದಾರೆ.

‘ಪೊರಿಯೆಂನಿಂದ ಸ್ಪರ್ಧಿಸುವುದಿಲ್ಲ ಎಂದು ರಾಣೆ ಅವರು ಪಕ್ಷಕ್ಕೆ ಸ್ಪಷ್ಟಪಡಿಸಿದ್ದಾರೆ. ಹಾಗಾಗಿಯೇ, ಈ ಕ್ಷೇತ್ರದಿಂದ ಬೇರೊಬ್ಬ ಅಭ್ಯರ್ಥಿಯನ್ನು ಪಕ್ಷವು ಕಣಕ್ಕೆ ಇಳಿಸಿದೆ’ ಎಂದು ಕಾಂಗ್ರೆಸ್‌ ವಕ್ತಾರರು ಹೇಳಿದ್ದಾರೆ.

ದಿವ್ಯಾ ರಾಣೆ ಅವರು ರಾಜ್ಯದ ಆರೋಗ್ಯ ಸಚಿವ ವಿಶ್ವಜಿತ್‌ ರಾಣೆ ಅವರ ಹೆಂಡತಿ.ತಮ್ಮ ಹೆಂಡತಿ ವಿಜಯಾದೇವಿ ಅವರ ಹೆಸರನ್ನು ಪೊರಿಯೆಂನಿಂದ ಸ್ಪರ್ಧಿಸಲು ರಾಣೆ ಅವರು ಸೂಚಿಸಬಹುದು ಎಂಬ ವರದಿಗಳಿದ್ದವು. ಆದರೆ, ಕಾಂಗ್ರೆಸ್‌ನ ಪರಿಷ್ಕೃತ ಪಟ್ಟಿಯಲ್ಲಿ ಈ ಕ್ಷೇತ್ರದ ಅಭ್ಯರ್ಥಿಯಾಗಿ ರಂಜಿತ್‌ ರಾಣೆ ಅವರನ್ನು ಹೆಸರಿಸಲಾಗಿದೆ.

ಪೊರಿಯೆಂನಿಂದ ಸ್ಪರ್ಧಿಸಲು ಪ್ರತಾಪ್‌ ಸಿಂಹ ರಾಣೆ ಅವರ ಮನವೊಲಿಸಲು ಬಿಜೆಪಿ ಪ್ರಯತ್ನಿಸಿತ್ತು. ಆದರೆ, ಅವರು ಒಪ್ಪದ ಕಾರಣಕ್ಕೆ ಸೊಸೆಗೆ ಟಿಕೆಟ್‌ ನೀಡಲು ನಿರ್ಧರಿಸಿತು ಎನ್ನಲಾಗಿದೆ. ರಾಣೆ ಅವರು ಶಾಸಕರಾಗಿ 50 ವರ್ಷ ಪೂರೈಸಿದ ಸಂದರ್ಭದಲ್ಲಿ, ಅವರಿಗೆ ಆಜೀವ ಸಂಪುಟ ದರ್ಜೆಯ ಸ್ಥಾನಮಾನ ನೀಡಲು ಪ್ರಮೋದ್‌ ಸಾವಂತ್‌ ನೇತೃತ್ವದ ಸರ್ಕಾರವು ನಿರ್ಧರಿಸಿತ್ತು.

1972ರಲ್ಲಿ ಮೊದಲ ಬಾರಿಗೆ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದಿಂದ ರಾಣೆ ಗೆದ್ದಿದ್ದರು. ನಂತರದ ಎಲ್ಲ ಚುನಾವಣೆಯಲ್ಲಿಯೂ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದಿದ್ದಾರೆ. 2017ರ ಚುನಾವಣೆಯಲ್ಲಿ ಅವರಿಗೆ ಶೇ 54.27ರಷ್ಟು ಮತಗಳು ಸಿಕ್ಕಿದ್ದವು. ದಿವ್ಯಾ ರಾಣೆ ಅವರಿಗೆ ಇದು ಮೊದಲ ಚುನಾವಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT