ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲಿಂಗ ಮದುವೆಗೆ ಮಾನ್ಯತೆ: ವಿಚಾರಣೆ ಸಂವಿಧಾನ ಪೀಠಕ್ಕೆ

Last Updated 13 ಮಾರ್ಚ್ 2023, 23:34 IST
ಅಕ್ಷರ ಗಾತ್ರ

ನವದೆಹಲಿ: ಸಲಿಂಗ ಮದುವೆಗೆ ಮಾನ್ಯತೆ ನೀಡಬೇಕು ಎಂದು ಕೋರಿದ್ದ ಹಲವು ಅರ್ಜಿಗಳ ವಿಚಾರಣೆಯನ್ನು ಐವರು ನ್ಯಾಯಮೂರ್ತಿಗಳಿರುವ ಸಂವಿಧಾನ ಪೀಠಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ವಹಿಸಿದೆ. ಘನತೆಯಿಂದ ಜೀವಿಸುವ ಹಕ್ಕು ಸೇರಿದಂತೆ ಹಲವು ಹಕ್ಕುಗಳನ್ನು ಈ ವಿಚಾರವು ಒಳಗೊಂಡಿದೆ. ಹಾಗಾಗಿ, ಇದು ದೂರಗಾಮಿ ಪರಿಣಾಮಗಳು ಇರುವ ಪ್ರಕರಣ ಎಂದು ಕೋರ್ಟ್‌ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಪಿ.ಎಸ್‌. ನರಸಿಂಹ ಮತ್ತು ಜೆ.ಬಿ. ಪಾರ್ದೀವಾಲಾ ಅವರ ಪೀಠವು ವಿಚಾರಣೆಯನ್ನು ಏಪ್ರಿಲ್‌ 18ಕ್ಕೆ ಮುಂದೂಡಿದೆ. ಈ ಪ್ರಕರಣದ ವಿಚಾರಣೆಯು ನೇರ ಪ್ರಸಾರ ಆಗಲಿದೆ. ಸಂವಿಧಾನ ಪೀಠದ ಎಲ್ಲ ವಿಚಾರಣೆಯನ್ನೂ ನೇರ ಪ್ರಸಾರ ಮಾಡಬೇಕು ಎಂಬ ನಿರ್ಧಾರವನ್ನು ಈ ಹಿಂದೆಯೇ ಕೈಗೊಳ್ಳಲಾಗಿತ್ತು.

ಪ್ರೀತಿ, ಅಭಿವ್ಯಕ್ತಿ ಮತ್ತು ಆಯ್ಕೆ ಸ್ವಾತಂತ್ರ್ಯದ ಹಕ್ಕಿಗೆ ಸುಪ್ರೀಂ ಕೋರ್ಟ್ ಈಗಾಗಲೇ ಮಾನ್ಯತೆ ನೀಡಿದೆ. ಈ ಹಕ್ಕುಗಳ ವಿಚಾರದಲ್ಲಿ ಯಾರೂ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ, ಮದುವೆಯ ಹಕ್ಕಿನ ವಿಚಾರವು ಸಂಪೂರ್ಣವಾಗಿ ಶಾಸಕಾಂಗ ವ್ಯಾಪ್ತಿಯದ್ದಾಗಿದೆ ಎಂದು ಕೇಂದ್ರ ಸರ್ಕಾರದ ಪರವಾಗಿ ವಾದಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದರು.

ಸಲಿಂಗ ಮದುವೆಯಲ್ಲಿ ದತ್ತು ಪಡೆಯುವಿಕೆಯ ವಿಚಾರವೂ ಒಳಗೊಂಡಿದೆ. ಹಾಗಾಗಿ, ದತ್ತು ಪಡೆದ ಮಗುವಿನ ಮನಃಸ್ಥಿತಿಯ ಕುರಿತಂತೆ ಸಂಸತ್ತು ಪರಿಶೀಲನೆ ನಡೆಸಬೇಕಾಗುತ್ತದೆ. ಅಷ್ಟೇ ಅಲ್ಲದೆ, ಆ ರೀತಿಯಲ್ಲಿ ಮಗುವನ್ನು ಬೆಳೆಸಬಹುದೇ ಎಂಬ ಬಗ್ಗೆಯೂ ಚಿಂತನೆ ನಡೆಸಬೇಕಾಗಿದೆ ಎಂದು ಮೆಹ್ತಾ ಅವರು ವಾದಿಸಿದರು.

‘ಸಲಿಂಗ ದಂಪತಿಯು ದತ್ತು ಪಡೆದುಕೊಂಡ ಮಗು ಕೂಡ ಸಲಿಂಗಿಯೇ ಆಗಬೇಕು ಎಂದೇನಿಲ್ಲ. ಸಲಿಂಗ ದಂಪತಿ ಬೆಳೆಸಿದ ಮಗುವು ಸಲಿಂಗಿ ಆಗಬಹುದು ಅಥವಾ ಆಗದೇ ಇರಬಹುದು’ ಎಂದು ನ್ಯಾಯಪೀಠವು ಹೇಳಿತು.

ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ನೀರಜ್‌ ಕಿಶನ್‌ ಕೌಲ್‌ ಅವರು ವಿಶೇಷ ವಿವಾಹ ಕಾಯ್ದೆಯು ಇಬ್ಬರು ವ್ಯಕ್ತಿಗಳ ನಡುವಣ ಮದುವೆಗೆ ಮಾನ್ಯತೆ ನೀಡಿದೆ ಎಂಬ ವಿಚಾರದತ್ತ ಗಮನ ಸೆಳೆದರು.

ಲಿಂಗ ಮತ್ತು ಲಿಂಗತ್ವ ಮನಃಸ್ಥಿತಿಯನ್ನು ಮಾತ್ರ ಆಧಾರವಾಗಿ ಇರಿಸಿಕೊಂಡು ಒಂದು ವರ್ಗದ ಜನರ ಮದುವೆಯ ಹಕ್ಕನ್ನು ಮೊಟಕು ಮಾಡಲಾಗದು. ಸಲಿಂಗ ಮದುವೆಗೆ ವೈಯಕ್ತಿಕ ಕಾನೂನಿನ ಮೂಲಕವೇ ಅವಕಾಶ ಮಾಡಿಕೊಡಬಹುದು ಎಂದು ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ಪ್ರತಿಪಾದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT