ಮಂಗಳವಾರ, ಜೂನ್ 28, 2022
20 °C

ಕೋವಿಡ್‌ ಲಸಿಕೆ ವಿಚಾರ: ಮೂಕ ಪ್ರೇಕ್ಷಕನಾಗಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರ ಸರ್ಕಾರವು 18ರಿಂದ 44 ವರ್ಷ ವಯಸ್ಸಿನೊಳಗಿನವರಿಗೆ ಕೋವಿಡ್‌ ಲಸಿಕೆ ನೀಡಲು ರೂಪಿಸಿರುವ ನೀತಿಯ ನ್ಯಾಯಾಂಗ ಪರಿಶೀಲನೆಗೆ ಸುಪ್ರೀಂ ಕೋರ್ಟ್‌ ನಿರ್ಧರಿಸಿದೆ. ‘ಕಾರ್ಯಾಂಗ ರೂಪಿಸಿರುವ ನೀತಿಗಳನ್ನು ನ್ಯಾಯಾಂಗವು ವಿಮರ್ಶೆಗೆ ಒಳಪಡಿಸುವುದು ಮತ್ತು ಅವುಗಳಿಗೆ ಸಾಂವಿಧಾನಿಕ ಸಮರ್ಥನೆ ನೀಡುವುದು ಅಗತ್ಯ. ಈ ಹೊಣೆಯನ್ನು ಸಂವಿಧಾನವು ನ್ಯಾಯಾಲಯಗಳಿಗೆ ವಹಿಸಿದೆ’ ಎಂದಿದೆ.

‘ಅಧಿಕಾರಗಳನ್ನು ಬೇರ್ಪಡಿಸಿದ ಮಾತ್ರಕ್ಕೆ ಈ ನೀತಿಗಳನ್ನು ಪರಿಶೀಲಿಸುವ ಅಧಿಕಾರವು ನ್ಯಾಯಾಂಗಗಳಿಗೆ ಇಲ್ಲದಂತಾಗುವುದಿಲ್ಲ. ಕಾರ್ಯಾಂಗದ ನೀತಿಗಳಿಂದ ಜನರ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದರೂ ನ್ಯಾಯಾಲಯಗಳು ಮೂಕ ಪ್ರೇಕ್ಷಕರಾಗಿರಬೇಕು ಎಂದು ನಮ್ಮ ಸಂವಿಧಾನ ಹೇಳುವುದಿಲ್ಲ’ ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ಪೀಠ ಹೇಳಿದೆ.

‘ವೈದ್ಯಕೀಯ ಕ್ಷೇತ್ರದ ತಜ್ಞರು ಹಾಗೂ ವಿಜ್ಞಾನಿಗಳ ಅಭಿಪ್ರಾಯಗಳ ಆಧಾರದಲ್ಲಿ ಕೋವಿಡ್‌–19 ನಿರ್ವಹಣಾ ನೀತಿಗಳನ್ನು ರೂಪಿಸಲಾಗಿದೆ. ಈ ವಿಚಾರದಲ್ಲಿ ನ್ಯಾಯಾಂಗದ ಹೆಚ್ಚಿನ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಉತ್ತಮವಾದದ್ದೇ ಆದರೂ ತಜ್ಞರ ಸಲಹೆ ಅಥವಾ ಆಡಳಿತಾತ್ಮಕ ಅನುಭವದ ಕೊರತೆಯಲ್ಲಿ, ನ್ಯಾಯಾಂಗದ ಅತ್ಯುತ್ಸಾಹದ ಮಧ್ಯಪ್ರವೇಶದಿಂದ ಅನಪೇಕ್ಷಿತ ಪರಿಣಾಮಗಳಾಗಬಹುದು. ಇದರಿಂದ ಸಮಸ್ಯೆಗೆ ಪರಿಹಾರಗಳನ್ನು ಕಂಡುಕೊಳ್ಳಲು ವೈದ್ಯರು, ವಿಜ್ಞಾನಿಗಳು ಹಾಗೂ ಅಧಿಕಾರಿಗಳಿಗೆ ಅಡ್ಡಿಯಾಗಬಹುದು’ ಎಂದು ಕೇಂದ್ರ ಸರ್ಕಾರ ವಾದಿಸಿತ್ತು.

ಕೇಂದ್ರದ ಈ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಾಲಯವು, ‘ಮುಕ್ತ ನ್ಯಾಯಾಂಗ ಪ್ರಕ್ರಿಯೆಯನ್ನು ಅನುಸರಿಸಿ, ಕಾರ್ಯಾಂಗದ ಪ್ರತಿನಿಧಿಗಳ ಜತೆ ನ್ಯಾಯಾಲಯವು ಚರ್ಚಿಸುವುದು. ಈಗಿನ ನೀತಿಗಳ ಔಚಿತ್ಯದ ಬಗ್ಗೆ ಮತ್ತು ಸಂವಿಧಾನದ ಮೌಲ್ಯಗಳಿಗೆ ಅವು ಅನುಗುಣವಾಗಿವೆಯೇ ಎಂಬ ಬಗ್ಗೆ ಅಲ್ಲಿ ಪರಿಶೀಲನೆ ನಡೆಸಲಾಗುವುದು’ ಎಂದಿದೆ.

‘ಜಾರಿಮಾಡಲಾಗಿರುವ ನೀತಿಯು ಸಮಂಜಸವಾಗಿದೆಯೇ, ಮಾನದಂಡಗಳಿಗೆ ಅನುಗುಣವಾಗಿದೆಯೇ, ಎಲ್ಲರ ಜೀವನದ ಹಕ್ಕನ್ನು ರಕ್ಷಿಸುತ್ತದೆಯೇ ಎಂಬುದನ್ನು ಖಾತರಿಪಡಿಸಲು, ನ್ಯಾಯಾಲಯವು ತನ್ನ ಅಧಿಕಾರ ವ್ಯಾಪ್ತಿಯನ್ನು ಬಳಸಿಕೊಳ್ಳಲಿದೆ. ಜಗತ್ತಿನ ಎಲ್ಲಾ ನ್ಯಾಯಾಲಯಗಳು, ಸಂವಿಧಾನದ ಉದ್ದೇಶಕ್ಕೆ ಸವಾಲೆಸೆಯುವಂಥ ನೀತಿಗಳನ್ನು ಪ್ರಶ್ನಿಸಿ, ಪ್ರತಿಕ್ರಿಯೆ ನೀಡಿವೆ. ಪಿಡುಗಿನ ಹೆಸರಿನಲ್ಲಿ ತರ್ಕರಹಿತ ನೀತಿಗಳನ್ನು ರೂಪಿಸುವುದರ ವಿರುದ್ಧ ಸರ್ಕಾರಗಳನ್ನು ಎಚ್ಚರಿಸಿವೆ’ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಅಮೆರಿಕದ ನ್ಯಾಯಾಲಯವು ಸಹ ಆ ದೇಶದ ಸರ್ಕಾರದ ಕೆಲವು ನೀತಿಗಳನ್ನು ತಳ್ಳಿಹಾಕಿದ್ದನ್ನು ಉಲ್ಲೇಖಿಸಿದ ಸುಪ್ರೀಂ ಕೋರ್ಟ್‌, ‘ಸಾರ್ವಜನಿಕ ಆರೋಗ್ಯದ ವಿಚಾರದಲ್ಲಿ ಈ ನ್ಯಾಯಾಲಯದ ಸದಸ್ಯರು ತಜ್ಞರಲ್ಲ ಎಂಬುದು ನಿಜ... ಆದರೆ ಪಿಡುಗಿನ ಸಂದರ್ಭದಲ್ಲೂ ಸಂವಿಧಾನದ ಮೌಲ್ಯಗಳನ್ನು ತಿರಸ್ಕರಿಸಲಾಗದು. ವೈದ್ಯಕೀಯ ತುರ್ತು ಸ್ಥಿತಿಯು ತಮಗೆ ಬೇಕಾದಂತೆ ವರ್ತಿಸುವ ಅಧಿಕಾರವನ್ನು ಆಡಳಿತ ನಡೆಸುವವರಿಗಾಗಲಿ, ಅಧಿಕಾರಿಗಳಿಗಾಗಲಿ ನೀಡುವುದಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು