ಶನಿವಾರ, ಸೆಪ್ಟೆಂಬರ್ 26, 2020
26 °C

Covid-19 India Update: ಒಂದೇ ದಿನ 97,894 ಹೊಸ ಪ್ರಕರಣ; 1132 ಮಂದಿ ಸಾವು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ವರ್ಲ್ಡೊ ಮೀಟರ್ ಅಂಕಿ ಅಂಶಗಳ  ಪ್ರಕಾರ ದೇಶದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ 52,05,760 ಆಗಿದೆ, ಈವರೆಗೆ 84,340 ಮಂದಿ ಸೋಂಕಿನಿಂದ ಮೃತಪಟ್ಟಿದ್ದು  40,98,225 ಮಂದಿ ಚೇತರಿಸಿಕೊಂಡಿದ್ದಾರೆ.

ರಾಜಸ್ಥಾನದಲ್ಲಿ ಗುರುವಾರ 1,793 ಹೊಸ ಸೋಂಕು ಪ್ರಕರಣ ಪತ್ತೆಯಾಗಿದ್ದು 14 ಮಂದಿ ಸಾವಿಗೀಡಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 1,09,473ಕ್ಕೇರಿದ್ದು ಸಾವಿನ ಸಂಖ್ಯೆ 1,293 ಆಗಿದೆ  ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ 11  ಹೊಸ ಪ್ರಕರಣ ವರದಿಯಾಗಿದ್ದು ಪ್ರಕರಣಗಳ ಸಂಖ್ಯೆ  3,604 ಆಗಿದೆ. ಸಾವಿನ ಸಂಖ್ಯೆ  52 ಆಗಿದೆ.

ಕೋವಿಡ್–19 ಸೋಂಕು ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತ ಸಾಗಿದ್ದು, ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳು ಇವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇಲಾಖೆಯ ಮಾಹಿತಿ ಪ್ರಕಾರ ಬುಧವಾರ ಒಂದೇ ದಿನ ಒಟ್ಟು 97,894 ಹೊಸ ಪ್ರಕರಣಗಳು ವರದಿಯಾಗಿದ್ದು, 1,132 ಜನರು ಮೃತಪಟ್ಟಿದ್ದಾರೆ. ಇದುರೊಂದಿಗೆ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 51,18,254 ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯ 83,198ಕ್ಕೆ ತಲುಪಿದೆ. ಈವರೆಗೆ 40,25,080 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ಇನ್ನೂ 10,09,976 ಜನರಿಗೆ ಚಿಕಿತ್ಸೆ ಮುಂದುವರಿದಿದೆ.

‘ಸಕ್ರಿಯ ಪ್ರಕರಣ ಮತ್ತು ಗುಣಮುಖರ ಸಂಖ್ಯೆ ನಡುವೆ ಅಂತರ ಹೆಚ್ಚಾಗಿದೆ’
ದೇಶದಲ್ಲಿ ಸದ್ಯ ಇರುವ ಸಕ್ರಿಯ ಪ್ರಕರಣಗಳ ಸಂಖ್ಯೆಯು ಒಟ್ಟು ಪ್ರಕರಣಗಳಗೆ ಹೋಲಿಸಿದರೆ ತುಂಬಾ ಸಣ್ಣ ಪ್ರಮಾಣದ್ದಾಗಿದೆ. ಗುಣಮುಖರಾದವರ ಸಂಖ್ಯೆ ಸಕ್ರಿಯ ಪ್ರಕರಣಗಳಿಗಿಂತ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಟ್ವೀಟ್‌ ಮಾಡಿದೆ.

ಜೊತೆಗೆ, ‘ಸಕ್ರಿಯ ಪ್ರಕರಣ ಮತ್ತು ಗುಣಮುಖರ ಸಂಖ್ಯೆ ನಡುವಿನ ಅಂತರವು ಹೆಚ್ಚಾಗುತ್ತಾ ಸಾಗಿದೆ’ ಎಂದು ತಿಳಿಸಿದೆ.

ಇದುವರೆಗೆ ಒಟ್ಟು 6.05 ಕೋಟಿ ಜನರಿಗೆ ಕೋವಿಡ್ ಟೆಸ್ಟ್‌
ದೇಶದಲ್ಲಿ ಸೋಂಕು ಕಾಣಿಸಿಕೊಂಡಾಗಿನಿಂದ ಇಲ್ಲಿಯ ವರೆಗೆ ಒಟ್ಟು 6,05,65,728 ಜನರಿಗೆ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ. ಬುಧವಾರ ಒಂದೇ ದಿನ ಒಟ್ಟು 11,36,613 ಜನರನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋದನಾ ಮಾಹಿತಿ ನೀಡಿದೆ.

ಕರ್ನಾಟದಲ್ಲಿ ಕೋವಿಡ್
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ ಕರ್ನಾಟದಲ್ಲಿ ಸೆಪ್ಟೆಂಬರ್‌ 16ರವರೆಗೆ ಒಟ್ಟು 4,84,990 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 3,75,809 ಸೋಂಕಿತರು ಗುಣಮುಖರಾಗಿದ್ದು, 7,536 ಮಂದಿ ಮೃತಪಟ್ಟಿದ್ದಾರೆ. ಇನ್ನೂ 1,01,626 ಪ್ರಕರಣಗಳು ಸಕ್ರಿಯವಾಗಿವೆ.

‘ಸ್ಪುಟ್ನಿಕ್–ವಿ’ ಮಾರಾಟ: ಭಾರತ–ರಷ್ಯಾ ಒಪ್ಪಂದ
ವಿಶ್ವದ ಮೊದಲ ನೋಂದಾಯಿತ ಕೋವಿಡ್ ಲಸಿಕೆ ‘ಸ್ಪುಟ್ನಿಕ್–ವಿ’ ಅನ್ನು ಭಾರತದಲ್ಲಿ ಪರೀಕ್ಷೆಗೆ ಒಳಪಡಿಸಲು ಹಾಗೂ ಮಾರಾಟ ಮಾಡಲು ದೇಶದ ಪ್ರಮುಖ ಔಷಧ ತಯಾರಿಕಾ ಕಂಪನಿ ಹೈದರಾಬಾದ್‌ನ ಡಾ. ರೆಡ್ಡೀಸ್ ಲ್ಯಾಬೊರೇಟರಿ ಜತೆ ರಷ್ಯಾ ಒಪ್ಪಂದ ಮಾಡಿಕೊಂಡಿದೆ.

ಒಪ್ಪಂದದ ಪ್ರಕಾರ, ರೆಡ್ಡಿ ಲ್ಯಾಬ್‌ಗೆ 10 ಕೋಟಿ ಡೋಸ್‌‌ಗಳು ರಷ್ಯಾದಿಂದ ರವಾನೆಯಾಗಲಿವೆ. ಭಾರತದಲ್ಲಿ ಲಸಿಕೆಯ ಮೂರು ಹಂತದ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿದೆ. ಪರೀಕ್ಷೆಯಲ್ಲಿ ಯಶಸ್ಸು ಕಂಡುಬಂದರೆ ಲಸಿಕೆಯನ್ನು ಲ್ಯಾಬ್ ಮಾರಾಟ ಮಾಡಲಿದೆ. ಭಾರತದ ಔಷಧ ನಿಯಂತ್ರಣ ಪ್ರಾಧಿಕಾರದಿಂದ ಇದಕ್ಕೆ ಇನ್ನಷ್ಟೇ ಅನುಮತಿ ಪತ್ರ ಸಿಗಬೇಕಿದೆ. ‘ಮೊದಲ ಹಾಗೂ ಎರಡನೇ ಹಂತದ ಪರೀಕ್ಷೆಗಳು ಭರವಸೆಯ ಫಲಿತಾಂಶ ನೀಡಿವೆ’ ಎಂದು ಲ್ಯಾಬ್‌ನ ಎಂ.ಡಿ ಹಾಗೂ ಸಹ ಅಧ್ಯಕ್ಷ ಜಿ.ವಿ. ಪ್ರಸಾದ್ ಹೇಳಿದ್ದಾರೆ.

ಕೇಂದ್ರ ಸಚಿವ ಗಡ್ಕರಿ; ರಾಜ್ಯ ಗೃಹಸಚಿವ ಬೊಮ್ಮಾಯಿಗೆ ಕೋವಿಡ್
ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಬುಧವಾರ ಕೋವಿಡ್-19 ದೃಢಪಟ್ಟಿದೆ. ಈ ವಿಷಯವನ್ನು ಅವರೇ ಟ್ವಿಟರ್‌ ಮೂಲಕ ತಿಳಿಸಿದ್ದಾರೆ.

ನಾಗಪರದಲ್ಲಿ ಭಾನುವಾರ ಜನತಾ ಕರ್ಫ್ಯೂ
ಸೋಂಕು ಪ್ರಕರಣಗಳು ಏರುತ್ತಲೇ ಸಾಗಿರುವುದರಿಂದ ಮಹಾರಾಷ್ಟ್ರದ ನಾಗಪುರದಲ್ಲಿ ಶನಿವಾರ ಮತ್ತು ಭಾನುವಾರ ಜನತಾ ಕರ್ಫ್ಯೂ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಈ ವಿಷಯವನ್ನು ಅಲ್ಲಿನ ಮೇಯರ್‌ ಸಂದೀಪ್‌ ಜೋಶಿ ಅವರು ತಿಳಿಸಿದ್ದಾರೆ.

ಹೆಚ್ಚು ಸೋಂಕು (1,097,856) ಪ್ರಕರಣಗಳು ವರದಿಯಾಗಿರುವ ಮಹಾರಾಷ್ಟ್ರದಲ್ಲಿ ಇದುವರೆಗೆ ಒಟ್ಟು 7,75,273 ಸೋಂಕಿತರು ಗುಣಮುಖರಾಗಿದ್ದಾರೆ. ಉಳಿದಂತೆ 30,409 ಮಂದಿ ಮೃತಪಟ್ಟಿದ್ದು, 2,92,174 ಸಕ್ರಿಯ ಪ್ರಕರಣಗಳು ಇವೆ.

ಆಂಧ್ರದಲ್ಲಿ 8,835 ಹೊಸ ಪ್ರಕರಣ
ರಾಜ್ಯದಲ್ಲಿ ಸೆಪ್ಟೆಂಬರ್‌ 17ರಂದು ಹೊಸದಾಗಿ ಒಟ್ಟು 8,835 ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ 10,845 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಆಂಧ್ರ ಪ್ರದೇಶ ಆರೋಗ್ಯ ಇಲಾಖೆ ತಿಳಿಸಿದೆ.

ಆಂಧ್ರದಲ್ಲಿ ಇದುವರೆಗೆ ಒಟ್ಟು 5,92,760 ಪ್ರಕರಣಗಳು ವರದಿಯಾಗಿದ್ದು, 4,97,376 ಮಂದಿ ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 5,105ಕ್ಕೆ ಏರಿಕೆಯಾಗಿದ್ದು, ಇನ್ನೂ 90,279 ಪ್ರಕರಣಗಳು ಸಕ್ರಿಯವಾಗಿವೆ.

ಕೇರಳದಲ್ಲಿ 3,830 ಹೊಸ ಪ್ರಕರಣ
ಕೇರಳದಲ್ಲಿ ಒಂದೇದಿನ ಒಟ್ಟು 3,830 ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,17,863ಕ್ಕೆ ತಲುಪಿದೆ. ಜೊತೆಗೆ ಬುಧವಾರ 14 ಜನರು ಮೃತಪಟ್ಟಿರುವುದರಿಂದ ಸಾವಿನ ಸಂಖ್ಯೆ 480ಕ್ಕೆ ಏರಿದೆ ಎಂದು ಅಲ್ಲಿನ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ 4,690, ಪಶ್ಚಿಮ ಬಂಗಾಳದಲ್ಲಿ 3,237 ಹೊಸ ಪ್ರಕರಣಗಳು ವರದಿಯಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು