ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಮನೆಗೆ ತೆರಳಿ ಲಸಿಕೆ ಹಾಕಿ ಹಲವರ ಜೀವ ಉಳಿಸಬಹುದಿತ್ತು: ಬಾಂಬೆ ಹೈಕೋರ್ಟ್

Last Updated 12 ಮೇ 2021, 13:38 IST
ಅಕ್ಷರ ಗಾತ್ರ

ಮುಂಬೈ: ‘ಕೇಂದ್ರ ಸರ್ಕಾರವು ಕೆಲ ತಿಂಗಳುಗಳ ಹಿಂದೆಯೇ ಮನೆಮನೆಗೆ ಹೋಗಿ ಹಿರಿಯ ನಾಗರಿಕರಿಗೆ ಕೋವಿಡ್ ನಿರೋಧಕ ಲಸಿಕೆ ಹಾಕುವ ವ್ಯವಸ್ಥೆ ಮಾಡಿದ್ದರೆ ಅನೇಕ ಗಣ್ಯವ್ಯಕ್ತಿಗಳು ಸೇರಿದಂತೆ ಅನೇಕರ ಜೀವಗಳನ್ನು ಉಳಿಸಬಹುದಿತ್ತು’ ಎಂದು ಬಾಂಬೆ ಹೈಕೋರ್ಟ್ ಬುಧವಾರ ಹೇಳಿದೆ.

ಲಸಿಕಾ ಕೇಂದ್ರಗಳಿಗೆ ತೆರಳಿ ಅನೇಕ ಹಿರಿಯ ನಾಗರಿಕರಿಗೆ ಲಸಿಕೆ ಪಡೆಯಲು ಸಾಧ್ಯವಾಗುತ್ತಿಲ್ಲ ಎನ್ನುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಜಿ.ಎಸ್.ಕುಲಕರ್ಣಿ ಅವರನ್ನೊಳಗೊಂಡ ವಿಭಾಗೀಯ ಪೀಠವು, ಹಿರಿಯರು ಇರುವ ಸ್ಥಳಗಳಿಗೇ ಹೋಗಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ಏಕೆ ಆರಂಭಿಸಬಾರದು ಎಂದು ಕೇಂದ್ರ ಸರ್ಕಾರವನ್ನು ಕೇಳಿತು.

75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು, ವಿಶೇಷ ಸಾಮರ್ಥ್ಯವುಳ್ಳ ವ್ಯಕ್ತಿಗಳು ಮತ್ತು ಹಾಸಿಗೆ ಹಿಡಿದ ಅಥವಾ ಗಾಲಿಕುರ್ಚಿಯಲ್ಲಿರುವವರಿಗೆ ಮನೆ-ಮನೆ-ಲಸಿಕೆ ಸೌಲಭ್ಯ ನೀಡಬೇಕೆಂದು ಕೋರಿ ವಕೀಲರಾದ ಧ್ರುತಿ ಕಪಾಡಿಯಾ ಮತ್ತು ಕುನಾಲ್ ತಿವಾರಿ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ನ್ಯಾಯಪೀಠ ವಿಚಾರಣೆ ನಡೆಸಿತು.

ಈಗಾಗಲೇ ವಿದೇಶಗಳಲ್ಲಿ ಹಲವೆಡೆ ಮನೆಮನೆಗೆ ಲಸಿಕೆ ಕಾರ್ಯಕ್ರಮವನ್ನು ಜಾರಿಗೆ ತಂದಿರುವ ಕ್ರಮವನ್ನು ಗಮನಿಸಿದ್ದನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಜಿ.ಎಸ್.ಕುಲಕರ್ಣಿ ಅವರು, ‘ಭಾರತದಲ್ಲಿ ನಾವು ಕೆಲಸಗಳನ್ನು ಬಹಳ ತಡವಾಗಿ ಮಾಡುತ್ತೇವೆ. ಅಂತೆಯೇ ಅನೇಕ ವಿಷಯಗಳು ನಮಗೆ ತಡವಾಗಿ ತಿಳಿಯುತ್ತವೆ’ ಎಂದರು.

‘ನಾವು ಮನೆ ಬಾಗಿಲಿಗೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ಕೆಲ ಸಮಯದ ಹಿಂದೆಯೇ ಮಾಡಿದ್ದರೆ ನಮ್ಮ ದೇಶದ ಅನೇಕ ಹಿರಿಯ ನಾಗರಿಕರು, ಸಮಾಜದ ಅನೇಕ ಹಿರಿಯ ಗಣ್ಯರ ಜೀವ ಉಳಿಸಬಹುದಿತ್ತು. ಹಿರಿಯ ನಾಗರಿಕರು, ಕೆಲವರು ಗಾಲಿಕುರ್ಚಿಯಲ್ಲಿ ಕುಳಿತೇ ಲಸಿಕಾ ಕೇಂದ್ರಗಳ ಹೊರಗೆ ದೀರ್ಘ ಸರತಿ ಸಾಲಿನಲ್ಲಿ ಕಾಯುತ್ತಿರುವುದನ್ನು ನ್ಯಾಯಾಲಯವು ಗಮನಿಸಿದೆ’ ಎಂದು ಅವರು ಹೇಳಿದರು.

‘ಇಂಥ ದೃಶ್ಯಗಳು ಮನಸ್ಸಿಗೆ ನೋವುಂಟು ಮಾಡುತ್ತವೆ. ಇದು ಖಂಡಿತಾ ಉತ್ತಮ ದೃಷ್ಟಿಯಂತೂ ಅಲ್ಲವೇ ಅಲ್ಲ. ಈಗಾಗಲೇ ಹಿರಿಯರು ಅನೇಕ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ ಮತ್ತು ಅಂಥವರು ಕೋವಿಡ್ ಸೋಂಕಿಗೆ ಒಳಗಾಗುವ ಅಪಾಯವನ್ನೂ ಎದುರಿಸುತ್ತಿರುತ್ತಾರೆ. ಇಂಥ ಸ್ಥಿತಿಯಲ್ಲೇ ಅವರು ಜನಸಂದಣಿಯಲ್ಲಿ ಸರತಿಯಲ್ಲಿ ನಿಂತು ಕಾಯುತ್ತಿದ್ದಾರೆ’ ಎಂದು ನ್ಯಾಯಪೀಠವು ಕಳವಳ ವ್ಯಕ್ತಪಡಿಸಿತು.

ನ್ಯಾಯಾಲಯವು ತನ್ನ ಹಿಂದಿನ ಏಪ್ರಿಲ್ 22ರ ಆದೇಶವನ್ನು ಪುನರುಚ್ಚರಿಸಿ, ಇದರಲ್ಲಿ ಮನೆ-ಮನೆಗೆ ಲಸಿಕೆ ಕಾರ್ಯಕ್ರಮವನ್ನು ಪ್ರಾರಂಭಿಸದಿರುವ ನಿರ್ಧಾರವನ್ನು ಕೇಂದ್ರ ಸರ್ಕಾರವು ಮರುಪರಿಶೀಲಿಸುವಂತೆಯೂ ಕೇಳಿತು.

‘ಮೂರು ವಾರಗಳಾದರೂ ಕೇಂದ್ರ ಸರ್ಕಾರವು ತನ್ನ ನಿರ್ಧಾರವನ್ನು ಇನ್ನೂ ನಮಗೆ ತಿಳಿಸಿಲ್ಲ. ಸರ್ಕಾರವು ಯಾವುದಾದರೂ ಒಂದು ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಹೇಳಿದ ನ್ಯಾಯಾಲಯವು, ಲಸಿಕಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರವು ಯಾವ ಕ್ರಮಗಳನ್ನು ರೂಪಿಸಿದೆ ಮತ್ತು ಅವು ಯಾವಾಗ ಪ್ರಾರಂಭವಾಗುತ್ತವೆ ಎನ್ನುವ ವಿವರಗಳನ್ನು ಮೇ 19ರೊಳಗೆ ನ್ಯಾಯಾಲಯಕ್ಕೆ ಅಫಿಡ್‌ವಿಟ್ ಸಲ್ಲಿಸಬೇಕು’ ಎಂದೂ ನಿರ್ದೇಶನ ನೀಡಿತು.

ಲಸಿಕೆಗಳ ಲಭ್ಯತೆಯೂ ಒಂದು ಸಮಸ್ಯೆಯಾಗಿದೆ ಎಂದು ನ್ಯಾಯಾಲಯವು ಹೇಳಿದಾಗ, ಇದಕ್ಕೆ ಪ್ರತಿಕ್ರಿಯಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರು ಕೋವಿಶೀಲ್ಡ್ ಕೆಲವೇ ದಿನಗಳಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದರು.

ನಿರ್ಗತಿಕರು, ಭಿಕ್ಷಕರು ಮತ್ತು ಬೀದಿಯಲ್ಲಿ ವಾಸಿಸುತ್ತಿರುವವರಿಗೆ ಲಸಿಕೆ ಹಾಕಲು ಯಾವ ಕ್ರಮಗಳನ್ನು ಕೈಗೊಂಡಿದ್ದೀರಿ ಎಂದೂ ನ್ಯಾಯಾಲಯವು ಸರ್ಕಾರವನ್ನು ಪ್ರಶ್ನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT