ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌-19 2ನೇ ಅಲೆಯ ಸ್ವರೂಪ ಅಂದಾಜಿಸುವಲ್ಲಿ ವಿಫಲ: ವಿಜ್ಞಾನಿಗಳ ತಂಡದ ಹೇಳಿಕೆ

Last Updated 2 ಮೇ 2021, 14:49 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್‌ ಸೋಂಕಿನ ಎರಡನೇ ಅಲೆ ಕುರಿತು ನಿಖರವಾಗಿ ಮುನ್ಸೂಚನೆ ನೀಡುವುದು ಸಾಧ್ಯವಾಗಲಿಲ್ಲ ಎಂದು ವಿಜ್ಞಾನಿಗಳ ತಂಡವೊಂದು ಭಾನುವಾರ ಹೇಳಿದೆ.

ಕೊರೊನಾ ವೈರಸ್‌ನ ಎರಡನೇ ಅಲೆ, ಅದರಿಂದಾಗುವ ಹಾನಿ ಕುರಿತು ಈ ವಿಜ್ಞಾನಿಗಳ ಈ ತಂಡ ಗಣಿತ ಮಾದರಿಯೊಂದರ ಆಧಾರದ ಮೇಲೆ ಸಂಶೋಧನೆ ಕೈಗೊಂಡಿದೆ.

‘ಎರಡನೇ ಅಲೆ ವೇಳೆ ಕೊರೊನಾ ವೈರಸ್‌ ಸೋಂಕು ಎಷ್ಟು ವೇಗವಾಗಿ ಪ್ರಸರಣವಾಗುತ್ತದೆ, ವೈರಸ್‌ನ ಸ್ವರೂಪ ಹೇಗಿರಲಿದೆ ಹಾಗೂ ಎಷ್ಟು ದಿನಗಳ ವರೆಗೆ ಇದು ಬಾಧಿಸಲಿದೆ ಎಂಬ ಅಂಶಗಳ ಕುರಿತು ಅಂದಾಜಿಸಲು ಆಗಲಿಲ್ಲ’ ಎಂದೂ ವಿಜ್ಞಾನಿಗಳು ಹೇಳಿದ್ದಾರೆ.

ಈ ಕುರಿತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ. ಐಐಟಿ–ಕಾನ್ಪುರ ಪ್ರಾಧ್ಯಾಪಕ ಮಣೀಂದ್ರ ಅಗ್ರವಾಲ್‌, ಇಂಟಿಗ್ರೇಟೆಡ್‌ ಡಿಫೆನ್ಸ್‌ ಸ್ಟಾಫ್‌ನ ಡೆಪ್ಯುಟಿ ಚೀಫ್‌ ಮಾಧುರಿ ಕಾನಿಟ್ಕರ್‌, ಐಐಟಿ–ಹೈದರಾಬಾದ್‌ನ ಪ್ರಾಧ್ಯಾಪಕ ಎಂ.ವಿದ್ಯಾಸಾಗರ ಅವರು ಈ ಪ್ರಕಟಣೆಗೆ ಸಹಿ ಹಾಕಿದ್ದಾರೆ.

‘ಸೂತ್ರ’ ಮಾದರಿ ಆಧಾರದಲ್ಲಿ ಸಂಶೋಧನೆ ಕೈಗೊಂಡಿದ್ದ ವಿಜ್ಞಾನಿಗಳು ಮಾರ್ಚ್‌ನಲ್ಲಿ ಎರಡನೇ ಅಲೆ ಕಾಣಿಸಿಕೊಳ್ಳುವುದಾಗಿ ಎಚ್ಚರಿಸಿದ್ದರು. ಅವರ ಎಚ್ಚರಿಕೆಯನ್ನು ಕಡೆಗಣಿಸಲಾಗಿತ್ತು ಎಂಬ ವರದಿಗಳನ್ನು ಈ ವಿಜ್ಞಾನಿಗಳು ತಳ್ಳಿಹಾಕಿದ್ದಾರೆ.

‘2ನೇ ಅಲೆಯು ಏಪ್ರಿಲ್‌ನ ಮೂರನೇ ವಾರದಲ್ಲಿ ಗರಿಷ್ಠ ಮಟ್ಟ ತಲುಪಲಿದ್ದು, ಪ್ರತಿ ದಿನ 1 ಲಕ್ಷದಷ್ಟು ಪ್ರಕರಣಗಳು ವರದಿಯಾಗಲಿವೆ ಎಂಬುದಾಗಿ ಗಣಿತ ಮಾದರಿ ಆಧಾರದಲ್ಲಿ ಅಂದಾಜಿಸಲಾಗಿತ್ತು’ ಎಂದು ಈ ವಿಜ್ಞಾನಿಗಳು ವಿವರಿಸಿದ್ದಾರೆ.

‘ಸೋಂಕು ಪ್ರಸರಣ ಕುರಿತು ಕೇಂದ್ರ ಸರ್ಕಾರ ಏಪ್ರಿಲ್‌ 2ರಂದು ನಮ್ಮ ಅಭಿಪ್ರಾಯ ಕೇಳಿತ್ತು. ಏಪ್ರಿಲ್‌ ಮೂರನೇ ವಾರದಲ್ಲಿ ಗರಿಷ್ಠ ಸಂಖ್ಯೆಯ ಪ್ರಕರಣಗಳು ಪತ್ತೆಯಾಗಬಹುದು ಎಂದು ಸರ್ಕಾರಕ್ಕೆ ಮುನ್ಸೂಚನೆಯನ್ನು ನೀಡಲಾಗಿತ್ತು’ ಎಂದೂ ಹೇಳಿದ್ದಾರೆ.

‘ಕೊರೊನಾ ವೈರಸ್‌ ಬಹಳ ಕ್ಷಿಪ್ರಗತಿಯಲ್ಲಿ ತನ್ನ ಸ್ವರೂಪವನ್ನು ಬದಲಾಯಿಸುತ್ತಿದೆ. ಇಂಥ ಸನ್ನಿವೇಶದಲ್ಲಿ ವೈರಸ್‌ನಿಂದಾಗುವ ಹಾನಿ ಕುರಿತು ನಿರಂತರ ಅಧ್ಯಯನ ನಡೆಸಬೇಕಾಗುತ್ತದೆ. ಕೆಲವೊಮ್ಮೆ ಪ್ರತಿನಿತ್ಯ ಅದರ ಬಗ್ಗೆ ಸಂಶೋಧನೆ ಅಗತ್ಯ’ ಎಂದೂ ವಿಜ್ಞಾನಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT