ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ವರ್ಷ ಜೈಲುಶಿಕ್ಷೆಗೆ ವಿರೋಧ: ರಾಹುಲ್‌ಗೆ ವಿಪಕ್ಷಗಳ ಬೆಂಬಲ

Last Updated 23 ಮಾರ್ಚ್ 2023, 18:41 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ, ಮಾನಹಾನಿ ಪ್ರಕರಣದಲ್ಲಿ ಎರಡು ವರ್ಷ ಜೈಲುಶಿಕ್ಷೆ ವಿಧಿಸಿರುವುದನ್ನು ಬಹುತೇಕ ವಿರೋಧ ಪಕ್ಷಗಳು ಖಂಡಿಸಿವೆ. ಇದು ಬಿಜೆ‍ಪಿಯೇತರ ಮತ್ತು ಬಿಜೆಪಿ ವಿರೋಧಿ ಪಕ್ಷಗಳನ್ನು ಹತ್ತಿಕ್ಕುವ ನಡೆ ಎಂದು ವಿರೋಧ ಪಕ್ಷಗಳು ಟೀಕಿಸಿವೆ. ರಾಹುಲ್ ಗಾಂಧಿ ಅವರಿಗೆ ತಮ್ಮ ಬೆಂಬಲ ಸೂಚಿಸಿವೆ.

ತೀರ್ಪು ಪ್ರಕಟವಾದ ನಂತರ, ವಿವಿಧ ವಿರೋಧ ಪಕ್ಷಗಳ ನಾಯಕರು ರಾಹುಲ್‌ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ತಮ್ಮ ಬೆಂಬಲ ಸೂಚಿಸಿದ್ದಾರೆ. ತೀರ್ಪು ಮತ್ತು ಬಿಜೆಪಿಯನ್ನು ಖಂಡಿಸಿ ಟ್ವೀಟ್‌ ಮಾಡಿದ್ದಾರೆ. ಜಮ್ಮು–ಕಾಶ್ಮೀರದ ಪಿಡಿಪಿಯ ಮೆಹಬೂಬಾ ಮುಫ್ತಿ, ಡಿಎಂಕೆಯ ಸ್ಟಾಲಿನ್‌, ಉದ್ಧವ್ ಬಣದ ಶಿವಸೇನಾದ ಪ್ರಿಯಾಂಕಾ ಚತುರ್ವೇದಿ ಮತ್ತು ಎನ್‌ಸಿಪಿ ವಕ್ತಾರರು ಅವರು ರಾಹುಲ್‌ ಅವರನ್ನು ಬೆಂಬಲಿಸಿ ಟ್ವೀಟ್‌ ಮಾಡಿದ್ದಾರೆ.

ಕಾಂಗ್ರೆಸ್ ಇಲ್ಲದ ವಿರೋಧ ಪಕ್ಷಗಳ ಒಕ್ಕೂಟ ರಚಿಸುವ ಯತ್ನದಲ್ಲಿರುವ ಮಮತಾ ಬ್ಯಾನರ್ಜಿ ಅವರ ಟಿಎಂಸಿ, ಈ ತೀರ್ಪಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಇದೇ ಬಣದಲ್ಲಿ ಗುರುತಿಸಿಕೊಂಡಿರುವ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಅವರು ರಾಹುಲ್ ಅವರನ್ನು ಬೆಂಬಲಿಸಿ ಟ್ವೀಟ್‌ ಮಾಡಿದ್ದಾರೆ. ಆದರೆ, ಬಿಹಾರದಲ್ಲಿ ಕಾಂಗ್ರೆಸ್‌ ಜತೆಗೆ ಮೈತ್ರಿಯಲ್ಲಿರುವ ಆರ್‌ಜೆಡಿ ಮತ್ತು ಜೆಡಿಯು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಎಡ‍ಪಕ್ಷಗಳೂ ಸಹ ಯಾವುದೇ ಪ್ರತಿಕ್ರಿಯೆ ನೀಡದೆ ಅಂತರ ಕಾಯ್ದುಕೊಂಡಿವೆ.

ಹಲವೆಡೆ ಪ್ರತಿಭಟನೆ: ಸೂರತ್ ನ್ಯಾಯಾಲಯದ ತೀರ್ಪನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ದೇಶದ ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ. ತಮಿಳುನಾಡಿನ ಕೆಲವೆಡೆ ಕಾಂಗ್ರೆಸ್ ಕಾರ್ಯಕರ್ತರು ರೈಲು ತಡೆ ನಡೆಸಿದ್ದಾರೆ. ವಿಧಾನಸಭೆಯ ಎದುರು ಪ್ರತಿಭಟನೆ ನಡೆಸಿದ್ದಾರೆ. ಜಾರ್ಖಂಡ್‌ನಲ್ಲಿ ಕಾಂಗ್ರೆಸ್‌ ಶಾಸಕರು ಮತ್ತು ಕಾರ್ಯಕರ್ತರು ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ. ಮಹಾರಾಷ್ಟ್ರದಲ್ಲೂ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಜಾರ್ಖಂಡ್‌ ವಿಧಾನಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು ಪರಸ್ಪರರ ವಿರುದ್ಧ ಘೋಷಣೆ ಕೂಗಿದ್ದಾರೆ.

ರಾಹುಲ್‌ ಅವರನ್ನು ಬೆಂಬಲಿಸಿ ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳ ಡಿಪಿಗಳಲ್ಲಿ ‘ಡರೋ ಮತ್‌ (ಹೆದರಬೇಡಿ)’ ಎಂಬ ಬರಹ ಇರುವ ಚಿತ್ರಗಳನ್ನು ಹಾಕಿಕೊಂಡಿದ್ದಾರೆ.

‘ಸಂಸತ್ತಿನಿಂದ ಹೊರಗಿಡುವುದೇ ಬಿಜೆಪಿ ಉದ್ದೇಶ’

‘ರಾಹುಲ್‌ ಗಾಂಧಿ ಅವರನ್ನು ಲೋಕಸಭೆಯಿಂದ ಹೊರಗಿಡುವುದೇ ಬಿಜೆಪಿ ಉದ್ದೇಶ. ರಾಹುಲ್‌ ಲೋಕಸಭೆಯಲ್ಲಿ ಸತ್ಯವನ್ನು ಮಾತನಾಡುತ್ತಾರೆ ಮತ್ತು ಬಿಜೆಪಿಯನ್ನು ಬಟಾಬಯಲು ಮಾಡುತ್ತಾರೆ. ಹೀಗಾಗಿ ಅವರನ್ನು ಲೋಕಸಭೆಯಿಂದ ಹೊರಗಟ್ಟಲು ಇಂಥದ್ದನ್ನೆಲ್ಲಾ ಬಿಜೆಪಿ ಮಾಡುತ್ತಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

‘ಮಾನಹಾನಿ ಪ್ರಕರಣಗಳಲ್ಲಿ ಯಾರಿಗೂ 2 ವರ್ಷ ಜೈಲುಶಿಕ್ಷೆ ನೀಡಿದ ಉದಾಹರಣೆಗಳಿಲ್ಲ. ಕೆಲವರಿಗೆ ಆರು ತಿಂಗಳು, ಕೆಲವರಿಗೆ ಒಂದು ವರ್ಷ ಶಿಕ್ಷೆ ನೀಡಿದ್ದರೆ, ಕೆಲವರು ಕ್ಷಮೆ ಕೇಳಿದಾಗ ಬಿಡಲಾಗಿದೆ. ಚುನಾಯಿತ ಜನಪ್ರತಿನಿಧಿ ಅನರ್ಹನಾಗಬೇಕಾದರೆ ಕನಿಷ್ಠ ಎರಡು ವರ್ಷ ಜೈಲುಶಿಕ್ಷೆಗೆ ಗುರಿಯಾಗಬೇಕು. ರಾಹುಲ್‌ ಅವರನ್ನು ಸಂಸತ್ತಿನಿಂದ ಹೊರಗಿಡುವ ಉದ್ದೇಶದಿಂದಲೇ ಈ ಪ್ರಕರಣದಲ್ಲಿ ಗರಿಷ್ಠ ಪ್ರಮಾಣದ ಶಿಕ್ಷೆಯನ್ನು ನೀಡಲಾಗಿದೆ’ ಎಂದು ಖರ್ಗೆ ಆರೋಪಿಸಿದ್ದಾರೆ.

‘ಒಬ್ಬ ವ್ಯಕ್ತಿಯ ಬಾಯಿ ಮುಚ್ಚಿಸುವ ಮೂಲಕ ದೇಶದ 140 ಕೋಟಿ ಜನರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ಎರಡು ವರ್ಷಗಳ ಶಿಕ್ಷೆಯಿಂದ ಕಾಂಗ್ರೆಸ್‌ ಅನ್ನು ನಿರ್ನಾಮ ಮಾಡಲು ಸಾಧ್ಯವಿಲ್ಲ. ನಾವು ಹೋರಾಡುತ್ತೇವೆ’ ಎಂದು ಖರ್ಗೆ ಹೇಳಿದ್ದಾರೆ.

ಬಿಜೆಪಿ ಸ್ವಾಗತ

ರಾಹುಲ್ ಅವರಿಗೆ ಎರಡು ವರ್ಷಗಳ ಜೈಲುಶಿಕ್ಷೆ ನೀಡಿರುವುದನ್ನು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಸ್ವಾಗತಿಸಿವೆ.

‘ಕಾಂಗ್ರೆಸ್‌ಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆಯೇ ಇಲ್ಲ. ದೇಶದಲ್ಲಿ ಕಾನೂನು ಆಡಳಿತವಿದೆ. ಮಾನಹಾನಿ ಹೇಳಿಕೆ ನೀಡಿದವರು, ಕ್ಷಮೆ ಕೇಳಲು ಅವಕಾಶವಿದೆ. ಆದರೆ, ಕ್ಷಮೆ ಕೇಳುವಲ್ಲಿ ಕಾಂಗ್ರೆಸ್‌ಗೆ ಆಕ್ಷೇಪವಿದೆ. ಎಲ್ಲರನ್ನು ತೆಗಳುವಲ್ಲಿ ರಾಹುಲ್‌ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಇರಬೇಕು ಎಂದು ಕಾಂಗ್ರೆಸ್‌ ಬಯಸುತ್ತಿದೆಯೇ’ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್‌ ಪ್ರಶ್ನಿಸಿದ್ದಾರೆ.

‘ವಿದೇಶಗಳಲ್ಲಿ ದೇಶವನ್ನು ಅವಮಾನಿಸಿದ ಮತ್ತು ರಾಷ್ಟ್ರ ನಾಯಕರನ್ನು ಅವಮಾನಿಸಿದ ವಿಚಾರದಲ್ಲೂ ರಾಹುಲ್ ಅವರಿಗೆ ಶಿಕ್ಷೆಯಾಗಬೇಕು’ ಎಂದು ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನಾ ಒತ್ತಾಯಿಸಿದೆ.

***

‘ವಿಪಕ್ಷಗಳ ಹತ್ತಿಕ್ಕುವ ಕೆಲಸ’

ಹೆದರಿರುವ ಪ್ರಭುತ್ವವು ಸಾಮ, ಧಾಮ, ದಂಡ, ಬೇಧಗಳನ್ನು ಬಳಸಿಕೊಂಡು ರಾಹುಲ್‌ ಗಾಂಧಿಯ ಧ್ವನಿಯನ್ನು ಅಡಗಿಸಲು ಯತ್ನಿಸುತ್ತಿದೆ. ನನ್ನ ಅಣ್ಣ ಎಂದಿಗೂ ಹೆದರಿರಲಿಲ್ಲ, ಮುಂದೆಯೂ ಹೆದರುವುದಿಲ್ಲ. ಆತ ಸತ್ಯ ಹೇಳುತ್ತಲೇ ಬದುಕಿದ್ದಾನೆ, ಮುಂದೆಯೂ ಸತ್ಯವನ್ನೇ ಹೇಳುತ್ತಾನೆ ಮತ್ತ ದೇಶದ ಜನರಿಗಾಗಿ ದನಿ ಎತ್ತುತ್ತಾನೆ. ಸತ್ಯ ಮತ್ತು ಕೋಟ್ಯಂತರ ದೇಶವಾಸಿಗಳ ಪ್ರೀತಿ ಅವನ ಬೆಂಬಲಕ್ಕಿದೆ

– ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

***

ಬಿಜೆಪಿ ವಿರೋಧಿ ಪಕ್ಷಗಳ ನಾಯಕರ ಮೇಲೆ ಪ್ರಕರಣಗಳನ್ನು ದಾಖಲಿಸಿ, ಅಂತಹ ನಾಯಕರನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಕಾಂಗ್ರೆಸ್‌ ಜೊತೆಗೆ ನಾವು ಭಿನ್ನಾಭಿಪ್ರಾಯ ಹೊಂದಿದ್ದೇವೆ. ಆದರೆ, ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್‌ ಗಾಂಧಿ ಅವರನ್ನು ಈ ರೀತಿ ಸಿಲುಕಿಸುವುದು ಸರಿಯಲ್ಲ. ಪ್ರಶ್ನೆ ಎತ್ತುವುದೇ ಜನರು ಮತ್ತು ವಿಪಕ್ಷಗಳ ಕೆಲಸ. ನಾನು ನ್ಯಾಯಾಲಯವನ್ನು ಗೌರವಿಸುತ್ತೇನೆ. ಆದರೆ, ಈ ತೀರ್ಪಿಗೆ ನನ್ನ ಸಹಮತವಿಲ್ಲ

– ಅರವಿಂದ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ

***

ಸರ್ವಾಧಿಕಾರವ ವಿರುದ್ಧ ರಾಹುಲ್‌ ಗಾಂಧಿ ದನಿ ಎತ್ತುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ತಪ್ಪನ್ನು ತಪ್ಪು ಎಂದು ಹೇಳುವ ಸಾಹಸ ಮಾಡಿದ್ದಾರೆ. ಈ ಸಾಹಸದಿಂದ ಸರ್ವಾಧಿಕಾರಿಯು ಹೆದರಿದ್ದಾರೆ. ಹೀಗಾಗಿ ಒಮ್ಮೆ ಇ.ಡಿ., ಒಮ್ಮೆ ಪೊಲೀಸ್‌, ಒಮ್ಮೆ ಪ್ರಕರಣ ಮತ್ತು ಈಗ ಶಿಕ್ಷೆಯ ಮೂಲಕ ಹೆದರಿಸಲು ಯತ್ನಿಸುತ್ತಿದ್ದಾರೆ. ಇದನ್ನು ಕಾನೂನಿನ ಪ್ರಕಾರವೇ ಪ್ರಶ್ನಿಸುತ್ತೇವೆ, ಹೋರಾಡುತ್ತೇವೆ ಮತ್ತು ಗೆಲ್ಲುತ್ತೇವೆ

– ಕಾಂಗ್ರೆಸ್‌ ಟ್ವೀಟ್‌

***

ವಿರೋಧ ಪಕ್ಷಗಳನ್ನು ಬಿಜೆಪಿ ಗುರಿ ಮಾಡುತ್ತಿದೆ ಮತ್ತು ಈಗ ಪ್ರಜಸತ್ತಾತ್ಮಕ ಹಕ್ಕುಗಳನ್ನು ಹತ್ತಿಕ್ಕುವ ಮಟ್ಟಕ್ಕೆ ಇಳಿದಿದೆ. ಇಂತಹ ದಬ್ಬಾಳಿಕೆಗಳು ಕೊನೆಯಾಗಲಿವೆ. ರಾಹುಲ್‌ ಒಟ್ಟಿಗೆ ಮಾತನಾಡಿದೆ ಮತ್ತು ನಾನು ಅವರೊಂದಿಗೆ ಇದ್ದೇನೆ. ಅಂತಿಮವಾಗಿ ನ್ಯಾಯಕ್ಕೆ ಜಯ ದೊರೆಯುತ್ತದೆ ಎಂಬ ವಿಶ್ವಾಸ ನನಗಿದೆ

– ಎಂ.ಕೆ.ಸ್ಟಾಲಿನ್‌, ತಮಿಳುನಾಡು ಮುಖ್ಯಮಂತ್ರಿ

***

ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಮರ ಮೇಲೆ ಮುಗಿಬೀಳುತ್ತದೆ ಎನ್ನಲಾಗುತ್ತಿತ್ತು. ಆದರೆ, ಬಿಜೆಪಿ ಜೈಲಿಗೆ ಅಟ್ಟಿದವರಲ್ಲಿ ಯಾರೂ ಮುಸ್ಲಿಮರಲ್ಲ. ಮನೀಷ್‌ ಸಿಸೋಡಿಯಾ ಮುಸ್ಲಿಮರಲ್ಲ. ಎನ್‌ಸಿಪಿ ನಾಯಕರು ಮುಸ್ಲಿಮರಲ್ಲ. ಸಂಜಯ್ ರಾವುತ್ ಮುಸ್ಲಿಮರಲ್ಲ. ಈಗ ರಾಹುಲ್‌ ಗಾಂದಿ ಹಿಂದೆ ಬಿದ್ದಿದ್ದಾರೆ. ಇದು ಮುಸ್ಲಿಂ ವರ್ಸಸ್ ಬಿಜೆಪಿ ಅಲ್ಲ. ತಮ್ಮನ್ನು ವಿರೋಧಿಸಿದವರು ಮತ್ತು ಭಿನ್ನ ದನಿ ಎತ್ತಿದ ಎಲ್ಲರ ಮೇಲೂ ಬಿಜೆಪಿ ಮುಗಿಬೀಳುತ್ತಿದೆ. ವಿಪಕ್ಷಗಳೆಲ್ಲವೂ ಒಟ್ಟಾಗಬೇಕು

– ಮೆಹಬೂಬಾ ಮುಫ್ತಿ, ಪಿಡಿಪಿ ಮುಖ್ಯಸ್ಥೆ

***

ದೇಶದ ಮಾನಹಾನಿ, ಜನತೆಯ ಮಾನಹಾನಿ, ಸಂವಿಧಾನದ ಮಾನಹಾನಿ, ಸೌಹಾರ್ದದ ಮಾನಹಾನಿ, ಆರ್ಥಿಕತೆಯ ಮಾನಹಾನಿ... ಬಿಜೆಪಿ ಮೇಲೆ ಇಷ್ಟೆಲ್ಲಾ ಮಾನಹಾನಿ ಪ್ರಕರಣಗಳನ್ನು ದಾಖಲಿಸಬೇಕು. ವಿರೋಧ ಪಕ್ಷಗಳ ಮೇಲೆ ಕ್ಷುಲ್ಲಕ ಪ್ರಕರಣಗಳನ್ನು ದಾಖಲಿಸಿ ತನ್ನ ರಾಜಕೀಯ ಭವಿಷ್ಯ ಗಟ್ಟಿ ಮಾಡಿಕೊಳ್ಳಲು ಹೊರಟಿರುವ ಬಿಜೆಪಿಯು, ವಿರೋಧ ಪಕ್ಷಗಳ ಶಕ್ತಿಯನ್ನು ನೋಡಿ ಹೆದರಿಹೋಗಿದೆ. @RahulGandhi

– ಅಖಿಲೇಶ್ ಯಾದವ್, ಎಸ್‌ಪಿ ಮುಖ್ಯಸ್ಥ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT