ಭಾನುವಾರ, ನವೆಂಬರ್ 28, 2021
19 °C

ವಿದೇಶಕ್ಕೆ ತೆರಳಲು ಆಗುತ್ತಿಲ್ಲ; ಕೋವ್ಯಾಕ್ಸಿನ್‌ ಅನುಮೋದನೆಗೆ ಕಾದಿರುವ ಭಾರತೀಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಂಡಲಮ್‌: ಕೋವ್ಯಾಕ್ಸಿನ್‌ ಕೋವಿಡ್‌–19 ಲಸಿಕೆ ಹಾಕಿಸಿಕೊಂಡಿರುವ ಭಾರತೀಯರಲ್ಲಿ ಹಲವು ಮಂದಿ ಉದ್ಯೋಗದ ನಿಮಿತ್ತ ವಿದೇಶಕ್ಕೆ ಮರಳಲು ಸಾಧ್ಯವಾಗದೆ ಒದ್ದಾಡುತ್ತಿರುವ ಸ್ಥಿತಿಯಲ್ಲಿದ್ದಾರೆ. ಹೊರ ರಾಷ್ಟ್ರಗಳಲ್ಲಿ ಕೋವ್ಯಾಕ್ಸಿನ್‌ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಅನುಮೋದನೆ ಸಿಗಬೇಕಿದೆ.

ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಸುಗತನ್‌ ಪಿ.ಆರ್‌ ಕಳೆದ 9 ತಿಂಗಳಿಂದ ದಕ್ಷಿಣ ಭಾರತದ ಹಳ್ಳಿಯೊಂದರಲ್ಲಿ ಉಳಿದಿದ್ದಾರೆ. ಅವರು ಕೋವ್ಯಾಕ್ಸಿನ್‌ ಲಸಿಕೆ ಹಾಕಿಸಿಕೊಂಡಿದ್ದು, ಆ ಲಸಿಕೆಗೆ ವಿದೇಶದಲ್ಲಿ ಮಾನ್ಯತೆ ದೊರೆತಿರದ ಕಾರಣದಿಂದ ಮರಳಿ ಕೆಲಸಕ್ಕೆ ಹೋಗಲಾರದ ಪರಿಸ್ಥಿತಿ ಇದೆ. ಹಲವು ರಾಷ್ಟ್ರಗಳಲ್ಲಿ ಕೋವ್ಯಾಕ್ಸಿನ್‌ಗೆ ಮಾನ್ಯತೆ ದೊರೆಯದೇ ಇರುವುದರಿಂದ ಅಂತರರಾಷ್ಟ್ರೀಯ ಪ್ರಯಾಣ ಸಾಧ್ಯವಾಗುತ್ತಿಲ್ಲ ಎಂದು ಹಲವರು ದೂರಿದ್ದಾರೆ.

ಕಳೆದ ವರ್ಷ ಕೋವಿಡ್‌ ಸಾಂಕ್ರಾಮಿಕದಿಂದಾಗಿ ವಿಮಾನ ಪ್ರಯಾಣದಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ತಂದೆಯ ಅಂತ್ಯ ಸಂಸ್ಕಾರಕ್ಕೆ ಸುಗತನ್‌ ಅವರು ಬರಲು ಸಾಧ್ಯವಾಗಿರಲಿಲ್ಲ. 57 ವರ್ಷದ ಸುಗತನ್‌ ಅವರು ಈ ವರ್ಷ ಜನವರಿಯಲ್ಲಿ ಕೇರಳದ ಪಂಡಲಮ್‌ ಗ್ರಾಮಕ್ಕೆ ಬಂದಿದ್ದರು.

'ಏನೂ ಮಾಡಲಾಗದೆ ಇಲ್ಲಿಯೇ ಉಳಿಯುವುದು ಸಾಧ್ಯವಿಲ್ಲ. ಹೆಚ್ಚುವರಿಯಾಗಿ ಕೋವಿಶೀಲ್ಡ್‌ ಲಸಿಕೆಯನ್ನು ಹಾಕಿಸಿಕೊಂಡು ನಾಲ್ಕು ದಿನ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಿ ನಾನು ಸೌದಿಗೆ ಹೋಗಲು ಅವಕಾಶವಿದೆ. ಆದರೆ, ಅದರಿಂದ ನನ್ನ ಆರೋಗ್ಯದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ತಿಳಿದಿಲ್ಲ' ಎನ್ನುತ್ತಾರೆ ಸುಗತನ್‌.

ತುರ್ತು ಸಂದರ್ಭಗಳಲ್ಲಿ ಬಳಸಬಹುದಾದ ಡಬ್ಲ್ಯುಎಚ್‌ಒ ಕೋವಿಡ್‌ ಲಸಿಕೆ ಪಟ್ಟಿಯಲ್ಲಿ ಕೋವ್ಯಾಕ್ಸಿನ್‌ಗೆ ಮಾನ್ಯತೆ ನೀಡುವ ಕುರಿತಾದ ನಿರ್ಧಾರವು ಇಂದು ಹೊರ ಬೀಳುವ ಸಾಧ್ಯತೆ ಇದೆ.

ಜಾಗತಿಕವಾಗಿ ಕೋವ್ಯಾಕ್ಸಿನ್‌ಗೆ ಡಬ್ಲ್ಯುಎಚ್‌ಒ ಅನುಮೋದನೆ ಸಿಗದಿದ್ದರೆ, ಆ ಲಸಿಕೆ ಹಾಕಿಸಿಕೊಂಡಿರುವ ಭಾರತೀಯರ ವಿದೇಶ ಪ್ರಯಾಣವು ಮತ್ತಷ್ಟು ಕಠಿಣಗೊಳ್ಳಲಿದೆ.

ಕೇರಳದ 59 ವರ್ಷ ವಯಸ್ಸಿನ ರಾಜನ್‌ ಕಳೆದ 20 ವರ್ಷಗಳಿಂದ ಕುವೈತ್‌ನಲ್ಲಿ ವೆಲ್ಡಿಂಗ್‌ ಕೆಲಸಗಾರನಾಗಿದ್ದವರು, ಈಗ ಮತ್ತೆ ಅಲ್ಲಿಗೆ ಮರಳಲು ಸಾಧ್ಯವಾಗದೆ ಕೋಳಿ ಮಾರಾಟ ಮಾಡುವ ಅಂಗಡಿ ಇಟ್ಟಿದ್ದಾರೆ. ಕುವೈತ್‌ನಲ್ಲೂ ಕೋವ್ಯಾಕ್ಸಿನ್‌ ಲಸಿಕೆಗೆ ಮಾನ್ಯತೆ ಸಿಕ್ಕಿಲ್ಲ. ಬ್ಯಾಂಕ್‌ನಲ್ಲಿ ಮಾಡಿರುವ 20,000 ಡಾಲರ್‌ (ಸುಮಾರು ₹15 ಲಕ್ಷ)ಸಾಲ ತೀರಿಸಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ. ಕೋಳಿ ಮಾರಾಟದಿಂದ ಅವರು ದಿನಕ್ಕೆ 4 ಡಾಲರ್‌ (ಸುಮಾರು ₹300) ದುಡಿಯುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು