ಭಾನುವಾರ, ಜೂನ್ 20, 2021
29 °C
₹ 120 ಕೋಟಿ ಅನುದಾನ ಕೇಳಿದ ಮೇಘಾಲಯ ಸರ್ಕಾರ

ಲಸಿಕೆ ನೀಡಿದರಷ್ಟೇ 3ನೇ ಹಂತ ಆರಂಭ: ಹಲವು ಸರ್ಕಾರಗಳ ಅಸಹಾಯಕತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಲಸಿಕೆ ಪೂರೈಕೆಯಾದರೆ ಮಾತ್ರ ಮೂರನೇ ಹಂತದ ಲಸಿಕೆ ಕಾರ್ಯಕ್ರಮ ಆರಂಭಿಸಲು ಸಾಧ್ಯ ಎಂದು ಹಲವು ರಾಜ್ಯ ಸರ್ಕಾರಗಳು ಹೇಳಿವೆ. ಲಸಿಕೆ ಪೂರೈಕೆಯಾದರೆ ಮುಂದಿನ ವಾರ ಲಸಿಕೆ ಕಾರ್ಯಕ್ರಮ ಆರಂಭಿಸಬಹುದು ಎಂದು ದೆಹಲಿ ಸರ್ಕಾರ ಹೇಳಿದೆ. ತಮಿಳುನಾಡು ಸರ್ಕಾರ ಸಹ ಇದನ್ನೇ ಹೇಳಿದೆ.

‘ಹಣ ನೀಡಲು ಸಿದ್ಧವಿದ್ದರೂ ಲಸಿಕೆ ಲಭ್ಯವಾಗುತ್ತಿಲ್ಲ. ಸೀರಂ ಕಂಪನಿಯಂತೂ ನಮ್ಮ ಬೇಡಿಕೆಗೆ ಪ್ರತಿಕ್ರಿಯೆಯನ್ನೂ ನೀಡುತ್ತಿಲ್ಲ’ ಎಂದು ಛತ್ತೀಸಗಡ ಸರ್ಕಾರವು ಹೇಳಿದೆ.

‘₹ 120 ಕೋಟಿ ಅನುದಾನ ನೀಡಿ’: ಮೂರನೇ ಹಂತದ ಲಸಿಕೆ ಕಾರ್ಯಕ್ರಮವನ್ನು ಆರಂಭಿಸಲು ಅಗತ್ಯವಿರುವಷ್ಟು ಹಣಕಾಸು ರಾಜ್ಯ ಸರ್ಕಾರದ ಬಳಿ ಇಲ್ಲ. ಹೀಗಾಗಿ ರಾಜ್ಯದಲ್ಲಿ 18ರಿಂದ 45 ವರ್ಷದವರಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರವು 120 ಕೋಟಿ ಅನುದಾನ ನೀಡಬೇಕು ಎಂದು ಮೇಘಾಲಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.

‘ನಮ್ಮಲ್ಲಿ 18ರಿಂದ 45 ವರ್ಷದ 15 ಲಕ್ಷ ಜನರು ಇದ್ದಾರೆ. ಅವರಿಗೆಲ್ಲಾ ಲಸಿಕೆ ನೀಡಲು ನಮಗೆ 30 ಲಕ್ಷ ಡೋಸ್‌ ಲಸಿಕೆ ಅಗತ್ಯವಿದೆ. ಅಷ್ಟು ಲಸಿಕೆಯನ್ನು ಖರೀದಿಸಲು ಕೇಂದ್ರ ಸರ್ಕಾರವು ₹ 120 ಕೋಟಿ ಅನುದಾನವನ್ನು ಕೂಡಲೇ ಮಂಜೂರು ಮಾಡಬೇಕು. ಇಲ್ಲವೇ ಲಸಿಕೆಗಳನ್ನು ₹ 150ಕ್ಕೆ ಮಾರಾಟ ಮಾಡುವಂತೆ ಲಸಿಕೆ ತಯಾರಿಕೆ ಕಂಪನಿಗಳಿಗೆ ಸೂಚನೆ ನೀಡಿ’ ಎಂದು ಮೇಘಾಲಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.

ಹಲವೆಡೆ ಮುಂದೂಡಿಕೆ
* ಮಹಾರಾಷ್ಟ್ರದಲ್ಲಿ ಲಸಿಕೆ ಕೊರತೆ ಇರುವ ಕಾರಣ ಮೂರನೇ ಹಂತದ ಕಾರ್ಯಕ್ರಮವನ್ನು ಮೇ 1ರಿಂದ ಆರಂಭಿಸುತ್ತಿಲ್ಲ. ಆದರೆ, ಮೊದಲ ಮತ್ತು ಎರಡನೇ ಹಂತದ ಲಸಿಕೆ ಕಾರ್ಯಕ್ರಮದ ರೂಪುರೇಷೆಯನ್ನೂ ಮೇ 1ರಿಂದ ಬದಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ದೊರೆಯಲಿದೆ. ಪ್ರತಿ ಜಿಲ್ಲೆಯಲ್ಲಿ ಒಂದು ಲಸಿಕಾ ಕೇಂದ್ರವನ್ನು ಮಾತ್ರ ನಡೆಸುತ್ತೇವೆ. ಲಸಿಕೆ ಇಲ್ಲದಿದ್ದರೂ ಜನರು ಲಸಿಕಾ ಕೇಂದ್ರಗಳತ್ತ ಬಂದು ಕಾಯುವುದು ತಪ್ಪುತ್ತದೆ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.
* ನಮಗೆ ಅಗತ್ಯವಿರುವಷ್ಟು ಲಸಿಕೆ ಲಭ್ಯವಿಲ್ಲ. ಬೇಡಿಕೆ ಇಟ್ಟಷ್ಟು ಲಸಿಕೆ ಪೂರೈಕೆಯಾಗುತ್ತಿಲ್ಲ. ತಲಾ 25 ಲಕ್ಷ ಡೋಸ್‌ ನೀಡುವಂತೆ ಎರಡೂ ಕಂಪನಿಗಳಿಗೆ ಮನವಿ ಮಾಡಿದ್ದೆವು. ಸೀರಂ ಕಂಪನಿ ಇನ್ನೂ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಭಾರತ್ ಬಯೊಟೆಕ್ ಕೇವಲ 2 ಲಕ್ಷ ಡೋಸ್ ಪೂರೈಸಿದೆ. ಇದರಿಂದ ಮೂರನೇ ಹಂತದ ಲಸಿಕೆ ಕಾರ್ಯಕ್ರಮ ಆರಂಭಿಸಲು ಸಾಧ್ಯವಿಲ್ಲ ಎಂದು ಛತ್ತೀಸಗಡ ಸರ್ಕಾರ ಹೇಳಿದೆ.
* ಜಮ್ಮು-ಕಾಶ್ಮೀರಕ್ಕೆ ಅಗತ್ಯವಿರುವಷ್ಟು ಲಸಿಕೆಗಳು ಪೂರೈಕೆಯಾಗಿಲ್ಲ. ಹೀಗಾಗಿ ಮೇ 1ರಿಂದ ಮೂರನೇ ಹಂತದ ಲಸಿಕೆ ಕಾರ್ಯಕ್ರಮ ಆರಂಭಿಸುವುದಿಲ್ಲ. ಲಸಿಕೆ ಕಾರ್ಯಕ್ರಮ ಯಾವಾಗ ಆರಂಭಿಸುತ್ತೇವೆ ಎಂಬುದನ್ನು ಶೀಘ್ರದಲ್ಲೇ ಘೋಷಿಸುತ್ತೇವೆ ಎಂದು ಜಮ್ಮು-ಕಾಶ್ಮೀರ ಆಡಳಿತವು ಶುಕ್ರವಾರ ಘೋಷಿಸಿದೆ.

‘1 ಕೋಟಿ ಡೋಸ್ ಸಂಗ್ರಹ’
ಲಸಿಕೆ ಕೊರತೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರವು, ರಾಜ್ಯ ಸರ್ಕಾರಗಳ ಬಳಿ ಈಗಾಗಲೇ 1 ಕೋಟಿ ಡೋಸ್‌ನಷ್ಟು ಲಸಿಕೆ ಸಂಗ್ರಹವಿದೆ. ಇನ್ನು ಮೂರು ದಿನದಲ್ಲಿ 20 ಲಕ್ಷ ಡೋಸ್‌ ಲಸಿಕೆ ಪೂರೈಕೆಯಾಗಲಿದೆ ಎಂದು ಹೇಳಿದೆ.

ಮೊದಲ ಮತ್ತು ಎರಡನೇ ಹಂತದ ಲಸಿಕೆ ಕಾರ್ಯಕ್ರಮದಲ್ಲಿ ಬಳಸಲು ಕೇಂದ್ರ ಸರ್ಕಾರವು ಉಚಿತವಾಗಿ ನೀಡಿದ್ದ ಡೋಸ್‌ಗಳಲ್ಲಿ, ರಾಜ್ಯ ಸರ್ಕಾರಗಳ ಬಳಿ ಇರುವ ಡೋಸ್‌ಗಳ ಮಾಹಿತಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ನೀಡಿದೆ. ಆದರೆ, ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಈ ಲಸಿಕೆಯ ಡೋಸ್‌ಗಳನ್ನು ಮೂರನೇ ಹಂತದ ಲಸಿಕೆ ಕಾರ್ಯಕ್ರಮದಲ್ಲಿ ಬಳಸುವ ಹಾಗಿಲ್ಲ.

ಮೂರನೇ ಹಂತದ ಲಸಿಕೆ ಕಾರ್ಯಕ್ರಮಕ್ಕೆ ಅಗತ್ಯವಿರುವ ಲಸಿಕೆಗಳನ್ನು ರಾಜ್ಯ ಸರ್ಕಾರಗಳು ಕಂಪನಿಗಳಿಂದ ನೇರವಾಗಿ ಖರೀದಿಸಬೇಕು. ಈ ಖರೀದಿಯಲ್ಲಿ ಕೇಂದ್ರ ಸರ್ಕಾರವು ಯಾವುದೇ ರೀತಿಯ ಮಧ್ಯಸ್ಥಿಕೆ ಅಥವಾ ಮೇಲ್ವಿಚಾರಣೆ ನಡೆಸುವುದಿಲ್ಲ. ಹೀಗಾಗಿ ಮೂರನೇ ಹಂತದ ಕಾರ್ಯಕ್ರಮಕ್ಕೆ ಅಗತ್ಯವಿರುವ ಲಸಿಕೆಗಳು ರಾಜ್ಯ ಸರ್ಕಾರಗಳಿಗೆ ಯಾವಾಗ ಪೂರೈಕೆಯಾಗುತ್ತದೆ ಎಂಬುದರ ಮಾಹಿತಿ ಇಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು