ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನದಲ್ಲಿ 11.5 ಲಕ್ಷ ಡೋಸ್ ಕೋವಿಡ್ ಲಸಿಕೆ ವ್ಯರ್ಥ: ಗಜೇಂದ್ರ ಸಿಂಗ್ ಆರೋಪ

Last Updated 1 ಜೂನ್ 2021, 3:23 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನವು 11.5 ಲಕ್ಷ ಡೋಸ್ ಕೋವಿಡ್ ಲಸಿಕೆಯನ್ನು ವ್ಯರ್ಥಗೊಳಿಸಿದೆ ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಆರೋಪಿಸಿದ್ದಾರೆ.

ಆದರೆ, ರಾಜ್ಯದಲ್ಲಿ ಲಸಿಕೆ ವ್ಯರ್ಥವಾಗುವ ಪ್ರಮಾಣ ಶೇ 2ಕ್ಕಿಂತಲೂ ಕಡಿಮೆ ಇದೆ. ದೇಶದ ಒಟ್ಟಾರೆ ಸರಾಸರಿ ಲಸಿಕೆ ಪೋಲು ಪ್ರಮಾಣವೇ ಶೇ 6ರಷ್ಟಿದೆ ಎಂದು ರಾಜಸ್ಥಾನ ಸರ್ಕಾರ ಹೇಳಿದೆ.

ಲಸಿಕೆಯ ಶೀಷೆಗಳನ್ನು ಕಸದ ರಾಶಿಗೆ ಎಸೆಯಲಾಗಿತ್ತು ಎಂಬ ವರದಿಗಳನ್ನು ಉಲ್ಲೇಖಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶೆಖಾವತ್, ಲಸಿಕೆ ನೀಡಿಕೆ ವಿಚಾರದಲ್ಲಿ ರಾಜಸ್ಥಾನ ಸರ್ಕಾರವು ಕೇರಳವನ್ನು ನೋಡಿ ಕಲಿಯಬೇಕಿದೆ. ಕೇರಳವು ಲಸಿಕೆ ನೀಡಿಕೆಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದು, ಅಲ್ಲಿ ಅತಿ ಕಡಿಮೆ ಡೋಸ್‌ಗಳು ವ್ಯರ್ಥವಾಗಿದೆ ಎಂದು ಹೇಳಿದ್ದಾರೆ.

ಲಸಿಕೆ ನೀಡಿಕೆ ಅಭಿಯಾನಕ್ಕೆ ಸಂಬಂಧಿಸಿಯೂ ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಸರ್ಕಾರದ ವಿರುದ್ಧ ಶೆಖಾವತ್ ವಾಗ್ದಾಳಿ ನಡೆಸಿದ್ದಾರೆ.

‘18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ತಾನಾಗಿಯೇ ಅನುಮತಿ ಕೋರಿದ್ದ ರಾಜ್ಯ ಸರ್ಕಾರ ಬಳಿಕ ಜಾಗತಿಕ ಟೆಂಡರ್ ಕರೆಯುವ ನಾಟಕವಾಡಿತು. ಯಶಸ್ವಿಯಾಗದೇ ಇದ್ದಾಗ ಕೇಂದ್ರ ಸರ್ಕಾರವನ್ನು ದೂರಲು ಆರಂಭಿಸಿತು’ ಎಂದು ಶೆಖಾವತ್ ಹೇಳಿದ್ದಾರೆ.

ಆದರೆ, ಲಸಿಕೆ ವ್ಯರ್ಥಕ್ಕೆ ಸಂಬಂಧಿಸಿದ ಮಾಧ್ಯಮ ವರದಿಗಳನ್ನು ಮುಖ್ಯ ಕಾರ್ಯದರ್ಶಿ ಅಖಿಲ್ ಅರೋರಾ ಅಲ್ಲಗಳೆದಿದ್ದಾರೆ. ಆದಾಗ್ಯೂ, ಮಾಧ್ಯಮ ವರದಿಗಳಲ್ಲಿ ಉಲ್ಲೇಖವಾಗಿರುವ ಪ್ರದೇಶಗಳಲ್ಲಿ ಲಸಿಕೆ ನೀಡಿಕೆ ಬಗ್ಗೆ ವಿಶೇಷ ಲೆಕ್ಕಪರಿಶೋಧನೆ ನಡೆಸುವಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT