ಬುಧವಾರ, ಸೆಪ್ಟೆಂಬರ್ 22, 2021
29 °C
ಆರ್ಥಿಕ ನೆರವು ನೀಡಲು ಮಾರ್ಗಸೂಚಿ ಸಿದ್ಧಪಡಿಸಿ

ಕೋವಿಡ್‌ ಸಾವಿಗೆ ಪರಿಹಾರ ನೀಡಿ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌–19 ರಿಂದ ಮೃತಪಟ್ಟವರ ಕುಟುಂಬಗಳಿಗೆ ಆರ್ಥಿಕ ಪರಿಹಾರ ನೀಡುವ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಎನ್‌ಡಿಎಂಎ) ವಿಫಲವಾಗಿದೆ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಹೇಳಿದೆ.

ಕೋವಿಡ್‌ ಸಾಂಕ್ರಾಮಿಕವನ್ನು ರಾಷ್ಟ್ರೀಯ ವಿಪತ್ತು ಎಂದು 2020ರ ಮಾರ್ಚ್‌ 14ರಂದೇ ಘೋಷಿಸಲಾಗಿದೆ. ಹಾಗಾಗಿ, ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ಕನಿಷ್ಠ ಮಟ್ಟದ ಪರಿಹಾರವನ್ನಾದರೂ ಒದಗಿಸುವುದು ಎನ್‌ಡಿಎಂಎಯ ಸಾಂವಿಧಾನಿಕ ಹೊಣೆಗಾರಿಕೆ ಎಂದು ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌ ಮತ್ತು ಎಂ.ಆರ್‌. ಶಾ ಅವರ ಪೀಠವು ಹೇಳಿದೆ. 

ಕೋವಿಡ್‌–19 ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ನೀಡಿಕೆ ಹಾಗೂ ಮರಣ ಪ್ರಮಾಣಪತ್ರ ನೀಡಿಕೆ ಸಂಬಂಧ ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಲು ಕೇಂದ್ರಕ್ಕೆ ನ್ಯಾಯಾಲಯವು ಆರು ವಾರಗಳ ಕಾಲಾವಕಾಶ ಕೊಟ್ಟಿದೆ. 

‘ಪರಿಹಾರ ನೀಡಿಕೆಗೆ ಶಿಫಾರಸು ಮಾಡುವಲ್ಲಿ ವಿಫಲವಾಗಿರುವ ಎನ್‌ಡಿಎಂಎ, ವಿಪತ್ತು ನಿರ್ವಹಣಾ ಕಾಯ್ದೆಯ 12ನೇ ಸೆಕ್ಷನ್‌ನಲ್ಲಿ ವಿವರಿಸಲಾಗಿರುವ ಕರ್ತವ್ಯ ಪಾಲನೆಯಲ್ಲಿ ವಿಫಲವಾಗಿದೆ’ ಎಂದು 66 ಪುಟಗಳ ತೀರ್ಪಿನಲ್ಲಿ ಹೇಳಲಾಗಿದೆ. 

ಸಾಂಕ್ರಾಮಿಕದ ಅಸಾಧಾರಣ ಸ್ವರೂಪ, ಆರೋಗ್ಯ ಮೂಲಸೌಕರ್ಯ ಬಲಪಡಿಸುವ ಮೂಲಕ ಜನರಿಗೆ ಒದಗಿಸಬೇಕಿರುವ ಪರಿಹಾರ ಮತ್ತು ಇತರ ಪ್ಯಾಕೇಜ್‌ಗಳ ಅಗತ್ಯದಿಂದಾಗಿ ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ಆರ್ಥಿಕ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರವು ವಾದಿಸಿತ್ತು. 

ವಿಪತ್ತು ನಿರ್ವಹಣಾ ಕಾಯ್ದೆಯಲ್ಲಿರುವ ವಿಪತ್ತು ಸಂತ್ರಸ್ತರಿಗೆ ಪರಿಹಾರ ನೀಡಿಕೆಗೆ ಸಂಬಂಧಿಸಿದ 12ನೇ ಸೆಕ್ಷನ್‌ ಕಡ್ಡಾಯ ಸ್ವರೂಪದ್ದಾಗಿದೆ ಎಂದು ನ್ಯಾಯಾಲಯ ಹೇಳಿದೆ. 

ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ವಿವಿಧ ರಾಜ್ಯ ಸರ್ಕಾರಗಳು ಪರಿಹಾರ ನೀಡುತ್ತಿವೆ. ಬಿಹಾರದಲ್ಲಿ ₹4 ಲಕ್ಷ, ಕರ್ನಾಟಕ ಮತ್ತು ಮಧ್ಯ ಪ್ರದೇಶದಲ್ಲಿ ₹1 ಲಕ್ಷ, ದೆಹಲಿಯಲ್ಲಿ ₹50 ಸಾವಿರ ಪರಿಹಾರ ನೀಡಲಾಗುತ್ತಿದೆ. ಮುಖ್ಯಮಂತ್ರಿ ಪರಿಹಾರ ನಿಧಿ ಅಥವಾ ಇತರ ನಿಧಿಗಳಿಂದ ಮೊತ್ತ ಮಂಜೂರು ಮಾಡಲಾಗುತ್ತಿದೆ. 

ಮೊತ್ತ: ಸರ್ಕಾರ ನಿರ್ಧರಿಸಲಿ
ಕೋವಿಡ್‌ನಿಂದ ಮೃತ‍ಪಟ್ಟ ವ್ಯಕ್ತಿಯ ಕುಟುಂಬಕ್ಕೆ ₹4 ಲಕ್ಷ ಪರಿಹಾರ ಕೊಡಬೇಕು ಎಂದು ಕೋರಿ ಗೌರವ್‌ ಕುಮಾರ್ ಬನ್ಸಲ್‌ ಮತ್ತು ರೀಪಕ್‌ ಕನ್ಸಲ್‌ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಇತರ ವಿಪತ್ತುಗಳ ಸಂದರ್ಭದಲ್ಲಿ ಪಾವತಿಸಿದ ಅಷ್ಟೇ ಮೊತ್ತವನ್ನು ಈಗಲೂ ಪಾವತಿಸಿ ಎಂದು ನ್ಯಾಯಾಲಯವು ಹೇಳುವುದು ಸರಿ ಹೋಗುವುದಿಲ್ಲ. ಏಕೆಂದರೆ, ಕೋವಿಡ್‌–19 ಸಾಂಕ್ರಾಮಿಕದ ಅಸಾಧಾರಣ ಸ್ವರೂಪ ಮತ್ತು ಪರಿಣಾಮವನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ ಎಂದು ಪೀಠವು ಹೇಳಿದೆ. 

ಯಾವುದೇ ರಾಜ್ಯ ಅಥವಾ ದೇಶವು ಮಿತಿಯಿಲ್ಲದ ಸಂಪನ್ಮೂಲವನ್ನು ಹೊಂದಿರುವುದಿಲ್ಲ. ಮೃತರ ಕುಟುಂಬಗಳಿಗೆ ನೀಡುವ ಪರಿಹಾರದಿಂದಾಗಿ ಸರ್ಕಾರದ ಮೇಲೆ ಹಣಕಾಸಿನ ಹೊರೆ ಉಂಟಾಗುತ್ತದೆ. ಅದನ್ನು ಗಮನದಲ್ಲಿರಿಸಿಕೊಂಡ ಸರ್ಕಾರವು ವಿವೇಕಯುತ ನಿರ್ಧಾರ ಕೈಗೊಳ್ಳಬೇಕು ಎಂದು ಪೀಠವು ತಿಳಿಸಿದೆ.

ಮರಣ ಪ್ರಮಾಣಪತ್ರ ಸರಳಗೊಳಿಸಿ
ಕೋವಿಡ್‌ನಿಂದ ವ್ಯಕ್ತಿ ಮೃತಪಟ್ಟರೆ ಪ್ರಮಾಣಪತ್ರ ನೀಡಿಕೆ ಪ್ರಕ್ರಿಯೆಯನ್ನು ಸರಳಗೊಳಿಸಲು ಮಾರ್ಗಸೂಚಿ ಹೊರಡಿಸಬೇಕು. ವ್ಯಕ್ತಿಯು ಕೋವಿಡ್‌ನಿಂದ ಅಥವಾ ಅದರಿಂದಾದ ಸಮಸ್ಯೆಗಳಿಂದ ಮೃತಪಟ್ಟಿದ್ದಾರೆ ಎಂದು ಸ್ಪಷ್ಟವಾಗಿ  ನಮೂದಿಸಬೇಕು. ಪ್ರಮಾಣಪತ್ರವನ್ನು ಪ‍ರಿಷ್ಕರಿಸಲು ಅವಕಾಶ ಇರಬೇಕು ಎಂದು ಪೀಠವು ಹೇಳಿದೆ. 

ಮರಣಪೂರ್ವದಲ್ಲಿ ರೋಗಿಯ ಸಂಪರ್ಕಕ್ಕೆ ಬರುವವರು ಮತ್ತು ಕೋವಿಡ್‌–19ರಿಂದ ಮೃತಪಟ್ಟವರ ಮೃತದೇಹದ ಸಂಪರ್ಕಕ್ಕೆ ಬರುವವರಿಗೂ ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ ಯೋಜನೆ ಅಡಿಯಲ್ಲಿನ ₹50 ಲಕ್ಷ ಮೊತ್ತದ ವಿಮಾ ಸೌಲಭ್ಯ ವಿಸ್ತರಿಸುವ ಬಗ್ಗೆ ಪರಿಶೀಲನೆ ನಡೆಸಿ ಎಂದೂ ಕೋರ್ಟ್‌ ಸೂಚಿಸಿದೆ.

₹10 ಲಕ್ಷ ಪರಿಹಾರಕ್ಕೆ ಆಗ್ರಹ
ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಹೇಳುವ ಮೂಲಕ ಕಾಂಗ್ರೆಸ್‌ ಪಕ್ಷದ ನಿಲುವನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ. ಜತೆಗೆ, ಹೊಣೆಗಾರಿಕೆಯಿಂದ ಜಾರಿಕೊಳ್ಳುವ ಕೇಂದ್ರದ ಪ್ರಯತ್ನವನ್ನು ಬಯಲಾಗಿಸಿದೆ ಎಂದು ಕಾಂಗ್ರೆಸ್ ಪಕ್ಷವು ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ನೇತೃತ್ವದ ಸರ್ಕಾರವು ಕೋವಿಡ್‌ ಸಂತ್ರಸ್ತರ ಜತೆಗೆ ನಿಂತಿಲ್ಲ. ತಕ್ಷಣವೇ ‘ಕೋವಿಡ್‌ ಪರಿಹಾರ ನಿಧಿ’ ಘೋಷಿಸಿ, ಕೋವಿಡ್‌ನಿಂದ ಮೃತರಾದವರ ಕುಟುಂಬಕ್ಕೆ ತಲಾ ₹10 ಲಕ್ಷ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು