ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರು ದೇಶಗಳಲ್ಲಿ ಡೆಲ್ಟಾ ತಳಿ

ಹೆಚ್ಚು ವೇಗವಾಗಿ, ವ್ಯಾಪಕವಾಗಿ ಹರಡುವ ಸಾಮರ್ಥ್ಯದ ಕೊರೊನಾ ರೂಪಾಂತರಿ
Last Updated 1 ಜುಲೈ 2021, 20:52 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ / ಜಿನೀವಾ: ಕೋವಿಡ್‌–19ರ ಡೆಲ್ಟಾ ರೂಪಾಂತರ ತಳಿಯು ವೇಗವಾಗಿ ಮತ್ತು ವ್ಯಾಪಕವಾಗಿ ಹರಡುತ್ತಿದೆ. ಜಗತ್ತಿನಾದ್ಯಂತ ಮತ್ತೊಂದು ಬಾರಿ ಕೋವಿಡ್‌ ಪ್ರಕರಣಗಳು ಹೆಚ್ಚಳವಾಗಲು ಇದು ಕಾರಣವಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಸುಮಾರು ನೂರು ದೇಶಗಳಲ್ಲಿ ಡೆಲ್ಟಾ ರೂಪಾಂತರ ತಳಿ ಪತ್ತೆಯಾಗಿದೆ. ಅತಿ ವೇಗವಾಗಿ ಹರಡುವ ಸಾಮರ್ಥ್ಯ ಇರುವ ಈ ತಳಿಯು ಜಗತ್ತಿನಲ್ಲಿ ಅತ್ಯಂತ ವ್ಯಾಪಕವಾಗಿರುವ ಕೊರೊನಾ ವೈರಾಣು ತಳಿ ಎನಿಸಿಕೊಳ್ಳಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಗುರುವಾರ ಎಚ್ಚರಿಕೆ ನೀಡಿದೆ.

‘96 ದೇಶಗಳಲ್ಲಿ ಡೆಲ್ಟಾ ರೂಪಾಂತರ ತಳಿಯು ಪತ್ತೆಯಾಗಿದೆ. ತಳಿಗಳನ್ನು ಗುರುತಿಸುವ ಸಾಮರ್ಥ್ಯಕ್ಕೆ ಮಿತಿ ಇದೆ. ಹಾಗಾಗಿ, ಇನ್ನೂ ಹೆಚ್ಚಿನ ದೇಶಗಳಲ್ಲಿಯೂ ಈ ತಳಿ ಇರುವ ಸಾಧ್ಯತೆ ಇದೆ. ಪ್ರಕರಣಗಳ ಸಂಖ್ಯೆ ಹೆಚ್ಚಳ ಮತ್ತು ರೋಗಿಗಳು ಆಸ್ಪತ್ರೆಗೆ ದಾಖಲಾಗಲು ಈ ತಳಿ ಕಾರಣವಾಗುತ್ತಿದೆ ಎಂದು ಹಲವು ದೇಶಗಳು ಹೇಳಿವೆ’ ಎಂದು ಆರೋಗ್ಯ ಸಂಸ್ಥೆ ತಿಳಿಸಿದೆ.

ಮುಂದಿನ ಕೆಲವು ತಿಂಗಳುಗಳಲ್ಲಿ ಈ ವೈರಾಣು ತಳಿಯು ಇತರ ಎಲ್ಲ ತಳಿಗಳನ್ನು ಹಿಂದಿಕ್ಕಿ ಅತ್ಯಂತ ಅಪಾಯಕಾರಿ ತಳಿ ಎನಿಸಿಕೊಳ್ಳಲಿದೆ ಎಂದು ಅದು ಎಚ್ಚರಿಸಿದೆ.

ವ್ಯಕ್ತಿ, ಸಮುದಾಯ ಮತ್ತು ಸಮಾಜ ಮಟ್ಟದಲ್ಲಿಸೋಂಕು ತಡೆ ಮತ್ತು ನಿಯಂತ್ರಣದ ಎಲ್ಲ ಲಭ್ಯ ಕ್ರಮಗಳನ್ನು ಸಾಂಕ್ರಾಮಿಕದ ಆರಂಭದಿಂದಲೇ ಜಾರಿಗೆ ತರಲಾಗಿದೆ. ಅವೇ ಕ್ರಮಗಳು ಡೆಲ್ಟಾ ತಳಿಯ ತಡೆಗೂ ಅನ್ವಯ ಆಗಲಿವೆ. ಅಂದರೆ, ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್‌ ಧರಿಸುವಿಕೆಯಂತಹ ಕ್ರಮಗಳನ್ನು ಪಾಲಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ರೂಪಾಂತರ ತಳಿಯು ಹೆಚ್ಚು ವೇಗವಾಗಿ ಮತ್ತು ವ್ಯಾಪಕವಾಗಿ ಹರಡುತ್ತದೆ ಎಂದಾದರೆ, ಅದನ್ನು ತಡೆಯುವುದಕ್ಕೆ ಕೈಗೊಳ್ಳುವ ಕ್ರಮಗಳು ದೀರ್ಘ ಕಾಲ ಜಾರಿಯಲ್ಲಿ ಇರಬೇಕಾಗುತ್ತದೆ ಎಂದೂ ಡಬ್ಲ್ಯುಎಚ್‌ಒ ತಿಳಿಸಿದೆ. ಡೆಲ್ಟಾ ತಳಿಯು ಈವರೆಗೆ ‍ಪತ್ತೆಯಾದ ತಳಿಗಳಲ್ಲಿ ಅತ್ಯಂತ ವೇಗವಾಗಿ ಹರಡುವಂತಹುದು ಎಂದು ಡಬ್ಲ್ಯುಎಚ್‌ಒ ಮಹಾ ನಿರ್ದೇಶಕ ಟೆಡ್ರೊಸ್‌ ಗೆಬ್ರೇಷಿಯಸ್‌ ಕಳೆದ ವಾರ ಹೇಳಿದ್ದರು.

ಕೆಲವು ದೇಶಗಳಲ್ಲಿ ಸಾಮಾಜಿಕ ನಿರ್ಬಂಧಗಳನ್ನು ಸಡಿಲಿಸಲಾಗಿದೆ ಮತ್ತು ಸೋಂಕು ಪ್ರಕರಣಗಳು ಹೆಚ್ಚಳವಾಗಿವೆ ಎಂದೂ ಅವರು ಎಚ್ಚರಿಕೆ ನೀಡಿದ್ದರು.

2 ಡೋಸ್‌ ರಕ್ಷಣೆ: ಕೋವಿಡ್‌ ಲಸಿಕೆಯ ಎರಡು ಡೋಸ್‌ ಪಡೆದುಕೊಂಡರೆ ಡೆಲ್ಟಾ ರೂ‍ಪಾಂತರಿ ತಳಿಯ ಸೋಂಕಿನಿಂದಲೂ ರಕ್ಷಣೆ ಪಡೆಯಬಹುದು ಎಂದು ಐರೋಪ್ಯ ಔಷಧ ಸಂಸ್ಥೆ (ಇಎಂಎ) ಹೇಳಿದೆ.

ಹೆಚ್ಚಿದ ಸಾವಿನ ಸಂಖ್ಯೆ: ರಷ್ಯಾ ತತ್ತರ
ಮಾಸ್ಕೊ (ಎಎಫ್‌ಪಿ):
ಡೆಲ್ಟಾ ರೂಪಾಂತರ ತಳಿಯ ಹರಡುವಿಕೆಯ ವೇಗದ ಪರಿಣಾಮವು ರಷ್ಯಾದಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿದೆ. ಗುರುವಾರ ರಷ್ಯಾದಲ್ಲಿ 672 ಜನರು ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ. ಸತತ ಮೂರನೇ ದಿನವೂ ಸಾವಿನ ಸಂಖ್ಯೆ ದಾಖಲೆ ಮಟ್ಟದಲ್ಲಿ ಇದೆ.

ರಷ್ಯಾದಲ್ಲಿ ಮಂಗಳವಾರ ಮತ್ತು ಬುಧವಾರ ಕ್ರಮವಾಗಿ 669 ಮತ್ತು 652 ಮಂದಿ ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ. ಡೆಲ್ಟಾ ತಳಿಯು ವೇಗವಾಗಿ ಹರಡುತ್ತಿರುವುದು ಮತ್ತು ಲಸಿಕೆ ಅಭಿಯಾನ ಕುಂಟುತ್ತಾ ಸಾಗುತ್ತಿರುವುದು ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಹೆಚ್ಚಳವಾಗಲು ಕಾರಣ ಎಂದು ಹೇಳಲಾಗಿದೆ.

ಯುರೋ ಕಪ್‌ 2020ರ ಸ್ಪೇನ್‌–ಸ್ವಿಟ್ಜರ್ಲೆಂಡ್‌ ನಡುವಣ ಕ್ವಾರ್ಟರ್‌ ಫೈನಲ್‌ ಪಂದ್ಯವು ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ಶುಕ್ರವಾರ ನಡೆಯಲಿದೆ. ಸಾವಿರಾರು ಜನರು ಪಂದ್ಯವನ್ನು ವೀಕ್ಷಿಸಲಿದ್ದಾರೆ. ಪೀಟರ್ಸ್‌ಬರ್ಗ್‌ನಲ್ಲಿಯೇ ಅತಿ ಹೆಚ್ಚು ಅಂದರೆ 115 ಮಂದಿ ಕೋವಿಡ್‌ನಿಂದ ಗುರುವಾರ ಮೃತಪಟ್ಟಿದ್ದಾರೆ.

ಶೇ 90ರಷ್ಟು ಪ್ರಕರಣಗಳಿಗೆ ಡೆಲ್ಟಾ ವೈರಾಣು ಕಾರಣ ಎಂದು ಮಾಸ್ಕೊದ ಮೇಯರ್‌ ತಿಳಿಸಿದ್ದಾರೆ. ಅಲ್ಲಿ ಹೊಸ ನಿರ್ಬಂಧಗಳನ್ನು ಹೇರುವ ಬಗ್ಗೆ ಚಿಂತನೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT