ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪಾಂತರಗೊಂಡ ಕೊರೊನಾ ವೈರಸ್‌ ಭಾರತದಲ್ಲಿಯೂ ಪತ್ತೆ

ಆಂಧ್ರಪ್ರದೇಶದ ಕೋವಿಡ್‌–19 ಪೀಡಿತರ ಜಿನೋಮ್‌ನಲ್ಲಿ ಪತ್ತೆ
Last Updated 28 ಡಿಸೆಂಬರ್ 2020, 3:38 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿಯೂ ಕೊರೊನಾ ವೈರಸ್‌ ರೂಪಾಂತರಗೊಂಡಿದ್ದು, 19 ವಿಧದ ರೂಪಾಂತರಗೊಂಡ ವೈರಸ್‌ಗಳನ್ನು ಆಂಧ್ರಪ್ರದೇಶದಲ್ಲಿ ಪತ್ತೆ ಮಾಡಿದ್ದಾಗಿ ಸಂಶೋಧಕರು ಹೇಳಿದ್ದಾರೆ. ಈ ವೈರಸ್‌ಗೆ ‘ಎನ್‌440ಕೆ’ ಎಂದು ಹೆಸರಿಸಲಾಗಿದೆ.

ವ್ಯಕ್ತಿಯ ದೇಹದಲ್ಲಿ ರೋಗ ನಿರೋಧಕ ಶಕ್ತಿಯಿಂದಾಗಿ ಉತ್ಪತ್ತಿಯಾಗುವ ಪ್ರತಿಕಾಯಗಳಿಗೂ ಈ ರೂಪಾಂತರಿತ ವೈರಸ್‌ಗಳು ಬಗ್ಗವು ಎಂದು ಸಂಶೋಧಕರು ಹೇಳಿದ್ದಾರೆ. ಇಂತಹ ರೂಪಾಂತರಿತ ಕೊರೊನಾ ವೈರಸ್‌ ಆಂಧ್ರಪ್ರದೇಶದಲ್ಲಿ ತೀವ್ರವಾಗಿ ಪ್ರಸರಣವಾಗುತ್ತಿವೆ ಎಂದು ಹೇಳಿದ್ದಾರೆ.

ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣ, ಪಶ್ಚಿಮ ಬಂಗಾಳ, ಉತ್ತರಾಖಂಡ, ಹರಿಯಾಣ, ಗುಜರಾತ್‌ ಹಾಗೂ ದೆಹಲಿಯಲ್ಲಿಯೂ ರೂಪಾಂತರಗೊಂಡ ಕೊರೊನಾ ವೈರಸ್‌ (ಎನ್‌440ಕೆ) ಕಂಡು ಬಂದಿದೆ ಎಂದು ಮೂಲಗಳು ಹೇಳಿವೆ.

ಕೋವಿಡ್‌–19 ಪುನಃ ಕಾಣಿಸಿಕೊಂಡ ವ್ಯಕ್ತಿಯೊಬ್ಬರು ನೋಯ್ಡಾದ ಆಸ್ಪತ್ರೆಗೆ ದಾಖಲಾಗಿದ್ದರು. ವೈರಸ್‌ನ ವಂಶವಾಹಿ ರಚನೆಯನ್ನು (ಜಿನೋಮ್‌) ವಿಶ್ಲೇಷಿಸಿದಾಗ, ಎನ್‌440ಕೆ ವಿಧದ ವೈರಸ್‌ನಿಂದ ಮರು ಸೋಂಕು ಉಂಟಾಗಿರುವುದು ದೃಢಪಟ್ಟಿದೆ.

‘ಆಂಧ್ರಪ್ರದೇಶದಲ್ಲಿನ ಕಂಡು ಬಂದಿರುವ ಹೊಸ ಸ್ವರೂಪದ ಕೊರೊನಾ ವೈರಸ್‌ಅನ್ನು ಪ್ರತ್ತೇಕಿಸಿ, ವಿಶ್ಲೇಷಣೆ ಮಾಡಬೇಕು. ಅಂದಾಗ ಮಾತ್ರ ಈ ವೈರಸ್‌ನ ರಚನೆ, ಪ್ರಸರಣವಾಗುವ ವೇಗ ಮತ್ತಿತರ ಅಂಶಗಳು ಗೊತ್ತಾಗಲಿವೆ’ ಎಂದು ಸಿಎಸ್‌ಐಆರ್‌ನ ಇನ್‌ಸ್ಟಿಟ್ಯೂಟ್‌ ಫಾರ್ ಜಿನೋಮಿಕ್ಸ್‌ ಆ್ಯಂಡ್‌ ಇಂಟಿಗ್ರೇಟಿವ್‌ ಬಯೋಲಜಿಯ ವಿಜ್ಞಾನಿ ವಿನೋದ್‌ ಸ್ಕಾರಿಯಾ ‘ಪ್ರಜಾವಾಣಿ’ಗೆ ತಿಳಿಸಿದರು.

ಇವರು ಹೊಸ ಸ್ವರೂಪದ ವೈರಸ್‌ ಅನ್ನು ಪತ್ತೆ ಮಾಡಿದ ಸಂಶೋಧಕರ ತಂಡದ ಸದಸ್ಯರೂ ಆಗಿದ್ದಾರೆ.

ಕೋವಿಡ್‌–19 ದೃಢಪಟ್ಟ 6,370 ಜನರ ಜಿನೋಮ್‌ಗಳನ್ನು ಈ ತಂಡ ವಿಶ್ಲೇಷಿಸಿದೆ. ಈ ಪೈಕಿ ಶೇ 2ರಷ್ಟು ಪ್ರಕರಣಗಳಲ್ಲಿ ಹೊಸ ಸ್ವರೂಪದ ಎನ್‌440ಕೆ ವೈರಸ್‌ ಕಂಡು ಬಂದಿದೆ. ಈ ಹೊಸ ಸ್ವರೂಪದ ವೈರಸ್‌ ಏಷ್ಯಾದ ಇತರ ಪ್ರದೇಶಗಳಲ್ಲಿ ಜುಲೈ–ಆಗಸ್ಟ್‌ ಅವಧಿಯಲ್ಲಿಯೇ ಕಂಡು ಬಂದಿದೆ.

‘ಹೊಸ ಸ್ವರೂಪದ ವೈರಸ್‌ಅನ್ನು ಪತ್ತೆ ಮಾಡಿರುವುದು ಕ್ಲಿನಿಕಲ್‌ ಅಧ್ಯಯನಕ್ಕೆ ಎಷ್ಟು ಮುಖ್ಯ ಎಂಬುದನ್ನು ಈಗಲೇ ಹೇಳುವುದು ಕಷ್ಟ. ಆದರೆ, ಅನೇಕ ಲಸಿಕೆಗಳು ಈಗ ವ್ಯಾಪಕ ಬಳಕೆಗೆ ಸಿದ್ಧವಾಗಿವೆ. ಈ ಲಸಿಕೆಗಳ ಕಾರ್ಯಕ್ಷಮತೆ ಮೇಲೆ ಹೊಸ ಸ್ವರೂಪದ ವೈರಸ್‌ ಯಾವ ಪರಿಣಾಮ ಉಂಟು ಮಾಡಲಿವೆ ಎಂಬುದನ್ನು ತಿಳಿಯಲು ಇನ್ನಷ್ಟು ಸಂಶೋಧನೆ, ವಿಶ್ಲೇಷಣೆ ಅಗತ್ಯ’ ಎಂದು ವಿನೋದ್‌ ಪ್ರತಿಪಾದಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT