ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕರಿಂದ ಬಂದ ಆದಾಯಕ್ಕಿಂತ ಮರುಪಾವತಿ ಮೊತ್ತವೇ ಅಧಿಕ

ಭಾರತೀಯ ರೈಲ್ವೆ ಇತಿಹಾಸದಲ್ಲಿ ಹೀಗಾಗಿದ್ದು ಇದೇ ಮೊದಲು
Last Updated 12 ಆಗಸ್ಟ್ 2020, 17:49 IST
ಅಕ್ಷರ ಗಾತ್ರ

ನವದೆಹಲಿ:ಭಾರತೀಯ ರೈಲ್ವೆಯ 167 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪ್ರಯಾಣಿಕರು ಮಾಡುವ ಟಿಕೆಟ್‌ ಬುಕಿಂಗ್‌ನಿಂದ ಗಳಿಸಿದ್ದಕ್ಕಿಂತ ಹೆಚ್ಚಿನ ಮೊತ್ತವನ್ನು ಮರುಪಾವತಿ ರೂಪದಲ್ಲಿ ಪ್ರಯಾಣಿಕರಿಗೆ ಹಿಂದಿರುಗಿಸಿದೆ. ಆದರೆ, ಸರಕು ಸಾಗಣೆಯಿಂದ ಬರುವ ಆದಾಯ ರೈಲ್ವೆಗೆ ಆಸರೆಯಾಗಿದೆ.

2020–21ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ರೈಲ್ವೆಯು ₹ 1,066 ಕೋಟಿ ನಷ್ಟ ಅನುಭವಿಸಿದೆ. ಇದಕ್ಕೆ ಕೋವಿಡ್‌–19 ಪಿಡುಗು ಕಾರಣ ಎಂದೂ ರೈಲ್ವೆ ತಿಳಿಸಿದೆ.

ಮಧ್ಯಪ್ರದೇಶ ಚಂದ್ರಶೇಖರ ಗೌರ್‌ ಎಂಬುವವರುಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಸಲ್ಲಿಸಿದ ಅರ್ಜಿಯೊಂದಕ್ಕೆ ನೀಡಿರುವ ಉತ್ತರದಲ್ಲಿ ರೈಲ್ವೆ ಈ ವಿವರಣೆ ಕೊಟ್ಟಿದೆ.

ಕೊರೊನಾ ಸೋಂಕು ಹರಡುವಿಕೆ ತಡೆಯುವ ಸಲುವಾಗಿ, ಹಣಕಾಸು ವರ್ಷದ ಮೊದಲ ಮೂರು ತಿಂಗಳ ಕಾಲ ರೈಲ್ವೆಯು ಎಲ್ಲ ಪ್ರಯಾಣಿಕ ರೈಲುಗಳ ಸಂಚಾರವನ್ನು ರದ್ದುಗೊಳಿಸಿತು. ಹೀಗಾಗಿ, ಏಪ್ರಿಲ್‌ನಲ್ಲಿ ₹ 531.12 ಕೋಟಿ, ಮೇಯಲ್ಲಿ ₹ 145.24 ಕೋಟಿ ಹಾಗೂ ಜೂನ್‌ನಲ್ಲಿ ₹ 390.6 ಕೋಟಿ ನಷ್ಟವಾಗಿದೆ ಎಂದು ಉತ್ತರಿಸಿದೆ.

‘ಟಿಕೆಟ್‌ ಬುಕಿಂಗ್‌ನಿಂದ ಬಂದ ಆದಾಯಕ್ಕಿಂತ ಪ್ರಯಾಣಿಕರಿಗೆ ಮರುಪಾವತಿ ಮಾಡಿದ ಮೊತ್ತವೇ ಅಧಿಕ. ಹೀಗಾಗಿ ಮೊದಲ ತ್ರೈಮಾಸಿಕದಲ್ಲಿ ನಷ್ಟದ ಪ್ರಮಾಣವೂ ಹೆಚ್ಚಾಗಿದೆ’ ಎಂದು ರೈಲ್ವೆಯ ವಕ್ತಾರ ಡಿ.ಜೆ.ನಾರಾಯಣ್‌‌ ಹೇಳಿದ್ದಾರೆ.

ನಷ್ಟ ಭರ್ತಿಗೆ ಸರಕು ಸಾಗಾಟ
ಕಳೆದ ಎರಡು ವಾರಗಳಲ್ಲಿ ರೈಲ್ವೆಯ ಸರಕು ಸಾಗಾಟದ ಪ್ರಮಾಣ ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ಹೆಚ್ಚಳವಾಗಿದೆ. ‘ಇದು ಅತ್ಯಂತ ಆಶಾದಾಯಕ ಅಂಶ’ ಎಂದು ನಾರಾಯಣ್‌ ಹೇಳಿದ್ದಾರೆ. ಸರಕು ಸಾಗಾಟವನ್ನು ಹೆಚ್ಚಿಸಲು ಮತ್ತು ಸರಕು ಸಾಗಾಟದ ನಿರ್ವಹಣೆಯನ್ನು ಉತ್ತಮಪಡಿಸಲು ರೈಲ್ವೆ ಅಧಿಕಾರಿಗಳು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಹಾಗಾಗಿ, ಪ್ರಯಾಣಿಕ ರೈಲುಗಳಿಂದ ಆಗುವ ನಷ್ಟವನ್ನು ಸರಕು ಸಾಗಾಟದ ಮೂಲಕ ಸರಿದೂಗಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಂಕಿ–ಅಂಶಗಳು

₹40,000 ಕೋಟಿ:ಈ ವರ್ಷ ರೈಲ್ವೆಗೆ ಆಗಲಿರುವ ಅಂದಾಜು ನಷ್ಟ

₹2,000 ಕೋಟಿ: ಶ್ರಮಿಕ ವಿಶೇಷ ರೈಲುಗಳಿಂದ ಆದ ನಷ್ಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT