ಶನಿವಾರ, ಆಗಸ್ಟ್ 13, 2022
23 °C
ಮೊದಲ ಸುತ್ತಿನಲ್ಲಿ ಆರೋಗ್ಯ ಕಾರ್ಯಕರ್ತರು, ವೃದ್ಧರಿಗೆ ಲಸಿಕೆ

ಕೋವಿಡ್: ಕೆಲವು ವಾರಗಳಲ್ಲೇ ಲಸಿಕೆ ಬಳಕೆಗೆ ಸಿಗಲಿದೆಯೆಂದು ತಜ್ಞರ ವಿಶ್ವಾಸ –ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮೊದಲ ಸುತ್ತಿನಲ್ಲಿ ‘ಕೋವಿಡ್‌ 19‘ ಲಸಿಕೆಯನ್ನು ಸಾರ್ವಜನಿಕ ಹಾಗೂ ಖಾಸಗಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ದೇಶದ 1 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತದೆ. ವೃದ್ಧರಿಗೆ ಮತ್ತು ಸೋಂಕಿನ ವಿರುದ್ಧ ಮುಂಚೂಣಿಯಲ್ಲಿ  ಶ್ರಮಿಸುತ್ತಿರುವವರಿಗೂ ಆದ್ಯತೆ ನೀಡಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷಗಳ ಸಭೆಗೆ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್‌ ದೇಶದಲ್ಲಿರುವ ಕೋವಿಡ್‌-19 ಸ್ಥಿತಿಗತಿ ಮತ್ತು ಲಸಿಕೆ ಪೂರೈಕೆ ಸಿದ್ಧತೆ ಕುರಿತು ಮಾಹಿತಿ ನೀಡಿದರು.

‘ಮೊದಲ ಸುತ್ತಿನಲ್ಲಿ ವೈದ್ಯರು, ನರ್ಸ್‌ಗಳು ಸೇರಿದಂತೆ ಒಂದು ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ. ಎರಡನೇ ಹಂತದಲ್ಲಿ ಎರಡು ಕೋಟಿಯಷ್ಟು ಪೊಲೀಸ್, ಸಶಸ್ತ್ರಪಡೆ ಯೋಧರು ಮತ್ತು ಪೌರಕಾರ್ಮಿಕರು ಸೇರಿದಂತೆ ಮುಂಚೂಣಿ ಕೊರೊನಾ ವಾರಿಯರ್‌ಗಳಿಗೆ ನೀಡಲಾಗುತ್ತದೆ‘ ಎಂದು ಮಾಹಿತಿ ನೀಡಿದರು ಎಂದು ಮೂಲಗಳು ತಿಳಿಸಿವೆ.

ಲಸಿಕೆ ಬಳಕೆಗೆ ವಿಜ್ಞಾನಿಗಳು ಒಪ್ಪಿಗೆ ನೀಡಿದ ತಕ್ಷಣ ದೇಶದಲ್ಲಿ ಲಸಿಕೆ ಹಾಕುವ ಆಂದೋಲನ ಆರಂಭವಾಗುವುದು ಎಂದು ಪ್ರಧಾನಿ ಮೋದಿ ಹೇಳಿದರು.

ಸಭೆಯಲ್ಲಿ ಮಾತನಾಡಿದ ಅವರು, ಲಸಿಕೆಗಾಗಿ ಇನ್ನು ದೀರ್ಘ ಸಮಯ ಕಾಯುವ ಅಗತ್ಯವಿಲ್ಲ. ಕೆಲವು ವಾರಗಳಲ್ಲೇ ಇದು ಸಿದ್ಧವಾಗಬಹುದು ಎಂದು ತಜ್ಞರು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.

ಭಾರತದಿಂದ ಮೂರು ಲಸಿಕೆಗಳು ಪ್ರಯೋಗದ ವಿವಿಧ ಹಂತಗಳಲ್ಲಿವೆ. ಅದೇ ರೀತಿ ಇತರ ಸುಮಾರು ಎಂಟು ಲಸಿಕೆಗಳು ವಿವಿಧ ಹಂತಗಳಲ್ಲಿದ್ದು, ಇವೂ ದೇಶದಲ್ಲಿ ಬಳಕೆಗೆ ತಯಾರಾಗುವ ಭರವಸೆ ಇದೆ ಎಂದೂ ಹೇಳಿದರು.

ಮೊದಲ ಹಂತದಲ್ಲಿ ಯಾರಿಗೆ ಲಸಿಕೆ ನೀಡಬೇಕು ಎಂಬ ಬಗ್ಗೆ ರಾಜ್ಯ ಸರ್ಕಾರಗಳು ನೀಡುವ ಸಲಹೆ ಕುರಿತು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ. ಆರೋಗ್ಯ ಕಾರ್ಯಕರ್ತರಿಗೆ, ಮುಂಚೂಣಿ ಕಾರ್ಯಕರ್ತರಿಗೆ ಮತ್ತು ಸೋಂಕಿನಿಂದ ಬಳಲುತ್ತಿರುವ ವೃದ್ಧರಿಗೆ ಆದ್ಯತೆ ನೀಡಲಾಗುವುದು ಎಂದು ವಿವರಿಸಿದರು.

ಬೆಳಿಗ್ಗೆ 10.30ಕ್ಕೆ ಆರಂಭವಾದ ವರ್ಚುವಲ್‌ ಸರ್ವ ಪಕ್ಷಗಳ ಸಭೆಯಲ್ಲಿ ಸಂಸತ್ತಿನ ಎರಡೂ ಸದನಗಳ ಎಲ್ಲ ಪಕ್ಷಗಳ ನಾಯಕರು ಹಾಜರಿದ್ದರು. ಸಭೆಯಲ್ಲಿ ಪ್ರಮುಖ ಪಕ್ಷಗಳ ಹದಿಮೂರು ನಾಯಕರು ಹಾಗೂ ಐದಕ್ಕೂ ಹೆಚ್ಚು ಸಂಸದರು ಮಾತನಾಡಿದರು ಎಂದು ಮೂಲಗಳು ತಿಳಿಸಿವೆ.

ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್‌ ಪರವಾಗಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ಮಾತನಾಡಿದರು. ಟಿಎಂಸಿಯಿಂದ ಸುದೀಪ್ ಬಂಡೋಪಾದ್ಯಾಯ, ಎನ್‌ಸಿಪಿಯ ಶರದ್ ಪವಾರ್, ಟಿಆರ್‌ಎಸ್‌ನಿಂದ ನಮ ನಾಗೇಶ್ವರರಾವ್‌ ಮತ್ತು ಶಿವಸೇನಾದಿಂದ ವಿನಯಾಕ್ ರಾವತ್ ಅವರು ಸಭೆಯಲ್ಲಿ ಮಾತನಾಡಿದ್ದಾಗಿ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು