ಗುರುವಾರ , ಜನವರಿ 28, 2021
16 °C

ಕೋವಿಡ್-19 ಸಕ್ರಿಯ ಪ್ರಕರಣಗಳ‌ ಇಳಿಕೆಯಲ್ಲಿ ಕರ್ನಾಟಕ ಮುಂದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್‌–19 ಸಕ್ರಿಯ ಪ್ರಕರಣಗಳ ಇಳಿಕೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ. ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರ ಇದೆ.

ಕಳೆದ 30 ದಿನಗಳಲ್ಲಿ, ದಕ್ಷಿಣದ ನಾಲ್ಕು ರಾಜ್ಯಗಳು ಮತ್ತು ಮಹಾರಾಷ್ಟ್ರದಲ್ಲಿ ಕೋವಿಡ್‌ ಸಕ್ರಿಯ ಪ್ರಕರಣಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಇಳಿಕೆಯಾಗಿವೆ. 

ಅಕ್ಟೋಬರ್‌ 29ರಂದು ಕರ್ನಾಟಕದಲ್ಲಿ 68,180 ಸಕ್ರಿಯ ಪ್ರಕರಣಗಳು ಇದ್ದವು. ನವೆಂಬರ್‌ 29ರಂದು ಈ ಸಂಖ್ಯೆಯು 24,770ಕ್ಕೆ ಕುಸಿದಿದೆ. 30 ದಿನಗಳಲ್ಲಿ 43,410 ಸಕ್ರಿಯ ಪ್ರಕರಣಗಳು ಕಡಿಮೆ ಆಗಿವೆ. 

‘ಪರೀಕ್ಷೆ ಕಾರ್ಯತಂತ್ರವನ್ನು ಇನ್ನಷ್ಟು ಸುಧಾರಣೆ ಮಾಡುವುದು ಮುಖ್ಯ. ಹೆಚ್ಚು ಪ್ರಕರಣಗಳು ವರದಿಯಾಗುವಂತೆ ಕರ್ನಾಟಕವು ನೋಡಿಕೊಂಡಿದೆ. ಹಾಗೆಯೇ, ಪರೀಕ್ಷೆಗಳನ್ನು ಹೆಚ್ಚಿಸುವುದರ ಜತೆಗೆ ಜಿಲ್ಲಾ ಮಟ್ಟದ ಪರಾಮರ್ಶೆಯನ್ನೂ ಕೈಗೊಂಡಿದೆ. ಇದರಿಂದಾಗಿ, ರೋಗ ಲಕ್ಷಣಗಳನ್ನು ಹೊಂದಿರುವವರನ್ನು ಪ್ರತ್ಯೇಕವಾಗಿ ಇರಿಸಲು ಮತ್ತು ಅವರಿಂದ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಗಿದೆ’ ಎಂದು ಪಬ್ಲಿಕ್‌ ಹೆಲ್ತ್‌ ಫೌಂಡೇಶನ್‌ ಆಫ್‌ ಇಂಡಿಯಾದ ಹಿರಿಯ ಸೋಂಕು ಶಾಸ್ತ್ರಜ್ಞ ಗಿರಿಧರ್‌ ಬಾಬು ಹೇಳಿದ್ದಾರೆ. 

ಮಹಾರಾಷ್ಟ್ರದಲ್ಲಿ ಒಂದು ತಿಂಗಳಲ್ಲಿ 39 ಸಾವಿರ ಮತ್ತು ಕೇರಳದಲ್ಲಿ 28,500 ಪ್ರಕರಣಗಳು ಕಡಿಮೆ ಆಗಿವೆ. ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಪ್ರಕರಣಗಳ ಸಂಖ್ಯೆಯು ತಲಾ 15 ಸಾವಿರದಷ್ಟು ಕುಸಿದಿವೆ. 

ದಕ್ಷಿಣ ಭಾರತದಲ್ಲಿ ಕೋವಿಡ್‌ ಪಿಡುಗಿನ ಹಾವಳಿಯು ಕುಸಿಯುತ್ತಿದೆ ಎಂಬುದನ್ನು ಇದು ಸೂಚಿಸುತ್ತಿದೆ. 

ಆದರೆ, ದೆಹಲಿ, ಹರಿಯಾಣ, ರಾಜಸ್ಥಾನ, ಹಿಮಾಚಲ ಪ್ರದೇಶ, ಮಧ್ಯ ಪ್ರದೇಶದಲ್ಲಿ ಕೋವಿಡ್‌ ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ರಾಜಸ್ಥಾನದಲ್ಲಿ ಅತಿ ಹೆಚ್ಚು ಏರಿಕೆ (13,043) ದಾಖಲಾಗಿದೆ.

ಡಿ.4ರಂದು ಸರ್ವಪಕ್ಷ ಸಭೆ 

ದೇಶದಲ್ಲಿ ಕೋವಿಡ್‌–19 ಪಿಡುಗಿನ ಸ್ಥಿತಿ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ಡಿಸೆಂಬರ್‌ 4ರಂದು ಸರ್ವ ಪಕ್ಷ ಸಭೆ ಕರೆದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸಭೆಯ ಅಧ್ಯಕ್ಷತೆ ವಹಿಸುವರು. ಬೆಳಿಗ್ಗೆ 10.30ಕ್ಕೆ ಆನ್‌ಲೈನ್‌ ಮೂಲಕ ಈ ಸಭೆ ನಡೆಯಲಿದೆ ಎಂದು  ಸಂಸದೀಯ ವ್ಯವಹಾರಗಳ ಸಚಿವಾಲಯದ ಮೂಲಗಳು ತಿಳಿಸಿವೆ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಗೃಹ ಸಚಿವ ಅಮಿತ್‌ ಶಾ, ಆರೋಗ್ಯ ಸಚಿವ ಹರ್ಷವರ್ಧನ್‌, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ರಾಜ್ಯ ಸಚಿವ ಅರ್ಜನ್‌ ರಾಮ್‌ ಮೇಘವಾಲ್‌ ಸಭೆಯಲ್ಲಿ ಪಾಲ್ಗೊಳ್ಳುವರು.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಂಸತ್‌ನ ಚಳಿಗಾಲದ ಅಧಿವೇಶವನ್ನು ಮುಂಬರುವ ಬಜೆಟ್‌ ಅಧಿವೇಶನದೊಂದಿಗೇ ನಡೆಸುವ ಕುರಿತಂತೆ ಸಭೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಕೋವಿಡ್‌–19ಗೆ ಅಹಮದಾಬಾದ್‌, ಹೈದರಾಬಾದ್‌ ಹಾಗೂ ಪುಣೆಯಲ್ಲಿ ಪ್ರತ್ಯೇಕ ಮೂರು ಕಂಪನಿಗಳು ಲಸಿಕೆ ಅಭಿವೃದ್ಧಿಪಡಿಸುತ್ತಿವೆ. ಈ ಕಂಪನಿಗಳಿಗೆ ಇತ್ತೀಚೆಗೆ ಪ್ರಧಾನಿ ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿಯೂ ಡಿ. 4ರಂದು ನಡೆಯಲಿರುವ ಸಭೆಗೆ ಮಹತ್ವ ಇದೆ ಎಂದು ಹೇಳಲಾಗುತ್ತಿದೆ.

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿನ ಎಲ್ಲ ಪಕ್ಷಗಳ ಸಭಾನಾಯಕರಿಗೂ ಸಭೆಗೆ ಆಹ್ವಾನ ನೀಡಲಾಗಿದೆ. ದೇಶದಲ್ಲಿ ಕೋವಿಡ್‌–19 ಪಿಡುಗು ವ್ಯಾಪಕಗೊಂಡ ನಂತರ ನಡೆಯುತ್ತಿರುವ ಎರಡನೇ ಸರ್ವಪಕ್ಷ ಸಭೆ ಇದಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು