ಜೈಲು ಶಿಕ್ಷೆಗೆ ಗುರಿಯಾಗಿ, ಕೊರೊನಾ ಸೋಂಕು ತಗಲಿದ್ದ ತೆರಿಗೆ ಅಧಿಕಾರಿ ಆತ್ಮಹತ್ಯೆ

ಜೈಪುರ: ಕಳೆದ ವಾರ ಲಂಚಪಡೆದ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ ಹಾಗೂ ಕೊರೊನಾ ಸೋಂಕಿಗೆ ಒಳಗಾಗಿದ್ದ ಆದಾಯ ತೆರಿಗೆ ಇನ್‌ಸ್ಪೆಕ್ಟರ್ ಒಬ್ಬರು ತಾನು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿನಯ್ ಕುಮಾರ್ ಮಂಗಲ್(45) ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ. 2016ರಲ್ಲಿ ಝಾಲ್ವಾರ್ ಎಂಬಲ್ಲಿ ಮಂಗಲ್ ಅವರು ತೆರಿಗೆದಾರರಿಂದ ₹1 ಲಕ್ಷ ಲಂಚ ಪಡೆಯುತ್ತಿದ್ದಾಗ ಸಿಬಿಐ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು. ಭ್ರಷ್ಟಾಚಾರ ಆರೋಪದ ಅಡಿ ಶುಕ್ರವಾರ ಜೈಪುರದ ನ್ಯಾಯಾಲಯ ಇವರಿಗೆ ಐದು ವರ್ಷಗಳ ಜೈಲುವಾಸ ಶಿಕ್ಷೆ ವಿಧಿಸಿತ್ತು ಎಂದು ಪಶ್ಚಿಮ ವಿಭಾಗದ ಡಿಸಿಪಿ ಅಭಿಜಿತ್ ಸಿಂಗ್ ತಿಳಿಸಿದ್ದಾರೆ.
ಶಿಕ್ಷಗೊಳಗಾದ ಮಂಗಲ ಅವರನ್ನು ಪೊಲೀಸರು ವಶಕ್ಕೆ ಪಡೆದ ನಂತರ ಅವರಿಗೆ ಕೋವಿಡ್ ಪರೀಕ್ಷೆ ಮಾಡಿಸಿದ್ದರು. ಪರೀಕ್ಷೆಯಲ್ಲಿ ಸೋಂಕು ಇರುವುದು ದೃಢಪಟ್ಟ ನಂತರ ರಾಜಸ್ಥಾನ ಆರೋಗ್ಯ ವಿಜ್ಞಾನಗಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಸೋಮವಾರ ಬೆಳಿಗ್ಗೆ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರತಾಪ್‌ನಗರ ಪೊಲೀಸ್ ಠಾಣೆ ಉಸ್ತುವಾರಿ ಶ್ರೀಮೋಹನ್ ಮೀನಾ ತಿಳಿಸಿದ್ದಾರೆ.
ಕೋಟಾ ನಿವಾಸಿಯಾಗಿದ್ದ ಮಂಗಲ, ಝಲ್ವಾರ್ ಎಂಬಲ್ಲಿ ತೆರಿಗೆ ಪಾವತಿಗೆ ದಂಡ ಹಾಕದಿರುವುದಕ್ಕಾಗಿ ತೆರಿಗೆ ಪಾವತಿದಾರರೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಸಿಬಿಐಗೆ ಸಿಕ್ಕಿಬಿದ್ದಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.