ಶನಿವಾರ, ಜನವರಿ 23, 2021
21 °C

ಕೋವಿಡ್‌ ಲಸಿಕೆ ಸುತ್ತ ವಿವಾದ: ಭಾರತ್‌ ಬಯೋಟೆಕ್‌ ವ್ಯವಸ್ಥಾಪಕ ನಿರ್ದೇಶಕರ ಬೇಸರ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಭಾರತ್‌ ಬಯೋಟೆಕ್‌ ತಯಾರಿಸಿರುವ ಕೋವಿಡ್‌ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ದೊರೆತ ಬೆನ್ನಲ್ಲೇ ಹಲವು ಟೀಕೆಗಳು ಕೇಳಿಬಂದಿವೆ.

ಈ ವಿಚಾರವಾಗಿ ಸೋಮವಾರ ಮಾತನಾಡಿರುವ ಭಾರತ್‌ ಬಯೋಟೆಕ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಕೃಷ್ಣ ಎಲ್ಲಾ, 'ನಾವು ಸಿದ್ದಪಡಿಸಿರುವ ಲಸಿಕೆ ಸುರಕ್ಷಿತವಾಗಿದೆ. ನಮ್ಮ ಕಂಪನಿಯು ಭಾರತವನ್ನು ಹೊರತುಪಡಿಸಿ 12ಕ್ಕೂ ಹೆಚ್ಚು ದೇಶಗಳಲ್ಲಿ ಕೊವ್ಯಾಕ್ಸಿನ್‌ಗೆ ಸಂಬಂಧಿತ ಪ್ರಯೋಗಗಳನ್ನು ನಡೆಸುತ್ತಿದೆ. ಲಸಿಕೆಗಳನ್ನು ತಯಾರಿಸುವುದರಲ್ಲಿ ನಮಗೆ ಅಪಾರ ಅನುಭವವಿದೆ' ಎಂದು ಸ್ಪಷ್ಟಪಡಿಸಿದ್ದಾರೆ.

'ನಾವು ಕೇವಲ ಭಾರತದಲ್ಲಿ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುತ್ತಿಲ್ಲ. ಬ್ರಿಟನ್‌ ಸೇರಿದಂತೆ 12ಕ್ಕೂ ಹೆಚ್ಚು ದೇಶಗಳಲ್ಲಿ ಕ್ಲಿನಿಕಲ್ ಪ್ರಯೋಗಗಳನ್ನು ಮಾಡಿದ್ದೇವೆ. ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಮತ್ತು ಇತರ ದೇಶಗಳಲ್ಲಿ ಕ್ಲಿನಿಕಲ್ ಪ್ರಯೋಗಗಳನ್ನು ಕೈಗೊಳ್ಳುತ್ತಿದ್ದೇವೆ. ನಮ್ಮದು ಕೇವಲ ಭಾರತೀಯ ಕಂಪನಿಯಲ್ಲ. ಭಾರತ್‌ ಬಯೋಟೆಕ್‌ ಎನ್ನುವುದು ಜಾಗತಿಕ ಕಂಪನಿ' ಎಂದು ಕೃಷ್ಣ ಎಲ್ಲಾ ತಿಳಿಸಿದ್ದಾರೆ.

ರೂಪಾಂತರಿ ವೈರಸ್‌ಗೆ ಕೊವ್ಯಾಕ್ಸಿನ್ ಬಳಕೆ ಪರಿಣಾಮಕಾರಿಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, 'ನನಗೆ ಒಂದು ವಾರ ಸಮಯ ಕೊಡಿ. ಈ ಬಗ್ಗೆ ಖಚಿತಪಡಿಸಲಾಗಿರುವ ಮಾಹಿತಿಯನ್ನು ನಿಮಗೆ ನೀಡುತ್ತೇನೆ' ಎಂದು ಹೇಳಿದ್ದಾರೆ.

ಲಸಿಕೆಯ ಸುತ್ತ ಎದ್ದಿರುವ ವಿವಾದದ ಕುರಿತು ಮಾತನಾಡಿದ ಕೃಷ್ಣ ಎಲ್ಲಾ, 'ಕೋವಿಡ್‌ ಲಸಿಕೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ನನ್ನ ಕುಟುಂಬದ ಸದಸ್ಯರು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. ಇದನ್ನು ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ' ಎಂದು ತಿಳಿಸಿದ್ದಾರೆ.

ಕೋವಾಕ್ಸಿನ್ ತುರ್ತು ಬಳಕೆಗೆ ಅನುಮೋದನೆ ದೊರೆತಿರುವುದು ನಮ್ಮ ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣವಾಗಿದೆ ಎಂದೂ ಕೃಷ್ಣ ಎಲ್ಲಾ ತಿಳಿಸಿದ್ದಾರೆ.

'ಕೊವ್ಯಾಕ್ಸಿನ್' ಲಸಿಕೆಯನ್ನು ಭಾರತೀಯ ವೈದ್ಯಕೀಯ ಪರಿಷತ್ (ಐಸಿಎಂಆರ್) ಸಹಯೋಗದಲ್ಲಿ ಭಾರತ್ ಬಯೋಟೆಕ್ ದೇಶೀಯವಾಗಿ ಅಭಿವೃದ್ಧಿಪಡಿಸಿದೆ.

ಜಗತ್ತಿನಾದ್ಯಂತ ಸುಮಾರು 140 ಲಸಿಕೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇವುಗಳಲ್ಲಿ 16 ಲಸಿಕೆ ಮಾತ್ರ ಚಿಕಿತ್ಸೆಗೆ ಬಳಸಲಾಗುತ್ತಿವೆ. ಚೀನಾದ 5, ಅಮೆರಿಕದ 3, ಇಂಗ್ಲೆಂಡ್‌ನ 2 ಮತ್ತು ಜರ್ಮನಿ, ಆಸ್ತ್ರೇಲಿಯಾ, ರಷ್ಯಾದ ತಲಾ ಒಂದು ಲಸಿಕೆ ಇದರಲ್ಲಿ ಸೇರಿವೆ ಎಂದು ವಿಶ್ವಸಂಸ್ಥೆ ಈ ಹಿಂದೆ ಹೇಳಿತ್ತು.

ದೇಶದಾದ್ಯಂತ 2,43,953 ಸಕ್ರಿಯ ಪ್ರಕರಣಗಳಿವೆ. ಬ್ರಿಟನ್‌ನಲ್ಲಿ ಮೊದಲು ಪತ್ತೆಯಾದ ರೂಪಾಂತರಿ ಕೊರೊನಾ ವೈರಾಣು, ಭಾರತದಲ್ಲಿ ಈ ವರೆಗೂ 38 ಜನರಲ್ಲಿ ಇರುವುದು ಬೆಳಕಿಗೆ ಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು