ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಸ್ವೀಕರಿಸಲು ಸಿದ್ಧರಾಗಿ: ರಾಜ್ಯಗಳಿಗೆ ಸೂಚನೆ

19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಗುರುತಿಸಲಾದ ರವಾನೆ ಕೇಂದ್ರಗಳಿಗೆ ಲಸಿಕೆ
Last Updated 7 ಜನವರಿ 2021, 18:28 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್ ಲಸಿಕೆ ಪೂರೈಕೆ ಶೀಘ್ರದಲ್ಲೇ ಆರಂಭವಾಗಲಿದ್ದು, ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸನ್ನದ್ಧವಾಗಿ ಇರಬೇಕು ಎಂದು ಕೇಂದ್ರ ಸರ್ಕಾರ ಗುರುವಾರ ಸೂಚನೆ ನೀಡಿದೆ.

19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಗುರುತಿಸಲಾದ ರವಾನೆ ಕೇಂದ್ರಗಳಿಗೆ ಲಸಿಕೆ ಕಳುಹಿಸಲಾಗುವುದು ಎಂದು ಸಚಿವಾಲಯದ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸಗಡ, ದೆಹಲಿ, ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಜೊತೆ ಕೇಂದ್ರ ಈ ಮಾಹಿತಿ ಹಂಚಿಕೊಂಡಿದೆ.

ಉಳಿದ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಲಸಿಕೆಯನ್ನು ಆಯಾ ಸರ್ಕಾರಿ ವೈದ್ಯಕೀಯ ಡಿಪೋಗಳಿಂದ ಪಡೆದುಕೊಳ್ಳಬೇಕು. ಅಂಡಮಾನ್ ಮತ್ತು ನಿಕೋಬಾರ್, ಅರುಣಾಚಲ ಪ್ರದೇಶ, ಚಂಡೀಗಡ, ನಗರ್ ಹವೇಲಿ, ದಮನ್ ಮತ್ತು ಡಿಯು, ಗೋವಾ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಲಕ್ಷದ್ವೀಪ, ಮಣಿಪುರ, ಮೇಘಾಲಯ, ಮಿಜೋರಾಂ, ಪುದುಚೇರಿ, ಸಿಕ್ಕಿಂ, ತ್ರಿಪುರಾ ಮತ್ತು ಉತ್ತರಾಖಂಡಗಳಿಗೆ ಈ ಸೂಚನೆ ನೀಡಲಾಗಿದೆ.

ಲಸಿಕೆಗಳನ್ನು ಸ್ವೀಕರಿಸಲು ಮುಂಗಡ ತಯಾರಿ ಮತ್ತು ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಿ ಎಂದು ಆರೋಗ್ಯ ಸಚಿವಾಲಯದ ಸಲಹೆಗಾರ ಡಾ.ಪ್ರದೀಪ್ ಹಾಲ್ದರ್ ಅವರು ಜನವರಿ 5ರಂದು ಬರೆದ ಪತ್ರದಲ್ಲಿ ಹೇಳಿದ್ದಾರೆ. ನೋಂದಾಯಿತ ಫಲಾನುಭವಿಗಳಿಗೆ ನೀಡಲು ಆಯಾ ಜಿಲ್ಲೆಗಳಿಗೆ ಲಸಿಕೆಗಳನ್ನು ವಿತರಿಸಲಾಗುವುದು. ಇದಕ್ಕಾಗಿ ಶೀಘ್ರದಲ್ಲೇ ಪ್ರತ್ಯೇಕ ಸಂವಹನ ನಡೆಸಲಾಗುವುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಸಾಗಣೆಗೆ ಸನ್ನದ್ಧ: ಪುಣೆಯಿಂದ ದೇಶಾದ್ಯಂತ ಕೋವಿಡ್ ಲಸಿಕೆಗಳನ್ನು ಸಾಗಿಸಲು ಸಜ್ಜಾಗಿರುವುದಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಗುರುವಾರ ತಿಳಿಸಿದೆ.

ಸೆರಂ ಇನ್‌ಸ್ಟಿಟ್ಯೂಟ್ ತಯಾರಿಸಿರುವ ಕೋವಿಶೀಲ್ಡ್ ಲಸಿಕೆಗಳು ಪುಣೆಯ ವಿಮಾನ ನಿಲ್ದಾಣದಿಂದ ಎಲ್ಲ ಕಡೆ ಸರಬರಾಜು ಆಗಲಿವೆ. ಎಎಐ ತನ್ನ ಅಂಗಸಂಸ್ಥೆ ಎಎಐ ಕಾರ್ಗೋ ಲಾಜಿಸ್ಟಿಕ್ಸ್ ಮತ್ತು ಅಲೈಡ್ ಸರ್ವೀಸಸ್ ಕಂಪನಿ ಲಿಮಿಟೆಡ್ (ಎಎಐಸಿಎಎಲ್‍ಎಸ್) ಸಹ ಈ ಕಾರ್ಯಕ್ಕೆ ಸಿದ್ಧವಾಗಿದೆ ಎಂದು ತಿಳಿಸಿದೆ.

ಲಸಿಕೆ ಸಾಗಣೆ ಸಂಬಂಧ ಪ್ರಾಧಿಕಾರ, ಸೆರಂ ಸಂಸ್ಥೆ ಹಾಗೂ ಐಎಎಫ್‌ ಸಭೆ ನಡೆಸಿದ್ದವು.

4 ರಾಜ್ಯಗಳಿಗೆ ಸೂಚನೆ: ಕೋವಿಡ್ ಸಕ್ರಿಯ ಪ್ರಕರಣಗಳು ಶೇ 59ರಷ್ಟಿರುವ ಮಹಾರಾಷ್ಟ್ರ, ಕೇರಳ, ಛತ್ತೀಸಗಡ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಕಟ್ಟೆಚ್ಚರದಿಂದ ಇರಬೇಕು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸೂಚನೆ ನೀಡಿದ್ದಾರೆ. ಈ ರಾಜ್ಯಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದ್ದು, ನಿಯಂತ್ರಣಕ್ಕೆ ತ್ವರಿತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.

ಮತ್ತೊಂದು ತಾಲೀಮು ಕಾರ್ಯಾಚರಣೆ ಇಂದು: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರು, ಪ್ರಧಾನ ಕಾರ್ಯದರ್ಶಿಗಳು ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳುಜನವರಿ 8ರಂದು ನಡೆಯಲಿರುವ ಕೋವಿಡ್ ಲಸಿಕೆಯ ಎರಡನೇ ತಾಲೀಮು ಕಾರ್ಯಾಚರಣೆ ಮೇಲ್ವಿಚಾರಣೆ ನಡೆಸಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಗುರುವಾರ ಮನವಿ ಮಾಡಿದ್ದಾರೆ.

33 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ 736 ಜಿಲ್ಲೆಗಳಲ್ಲಿ ಪೂರ್ವಾಭ್ಯಾಸ ನಡೆಯಲಿದೆ. ಈ ಸಂಬಂಧ ಹರ್ಷವರ್ಧನ್ ಅವರು ರಾಜ್ಯಗಳ ಸಿದ್ಧತೆ ಬಗ್ಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಪರಿಶೀಲನೆ ನಡೆಸಿದರು. ಡಿ.8ರಂದು ಅವರು ತಮಿಳುನಾಡಿಗೆ ಭೇಟಿ ನೀಡಿ, ಖುದ್ದಾಗಿ ವೀಕ್ಷಿಸಲಿದ್ದಾರೆ.

₹480 ಕೋಟಿ ಮಂಜೂರು: ಮೊದಲ ಮೂರು ಕೋಟಿ ಲಸಿಕೆಗಳಿಗಾಗಿ ಕೇಂದ್ರದ ಹಣಕಾಸು ಸಚಿವಾಲಯವು ಗುರುವಾರ ₹480 ಕೋಟಿ ಹಣ ಮಂಜೂರು ಮಾಡಿದೆ.

ಪ್ರತಿ ವ್ಯಕ್ತಿಗೆ ಕೇಂದ್ರ ಸರ್ಕಾರವು ₹160 ಬಜೆಟ್ ನಿಗದಿಪಡಿಸಿದೆ. ಇದರಲ್ಲಿ ಎರಡು ಡೋಸ್ ಲಸಿಕೆಗಳ ವೆಚ್ಚ ಮತ್ತು ಇತರ ಮೂಲಸೌಕರ್ಯ ವೆಚ್ಚಗಳು ಸೇರಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

ಲಸಿಕೆ ತಯಾರಕರಾದ ಸೆರಂ ಸಂಸ್ಥೆ ಮತ್ತು ಭಾರತ್ ಬಯೋಟೆಕ್ ಜೊತೆ ಒಪ್ಪಂದವನ್ನು ಸಚಿವಾಲಯ ಇನ್ನೂ ಮಾಡಿಕೊಂಡಿಲ್ಲ. ಲಸಿಕೆ ದರ ಕುರಿತ ಮಾತುಕತೆ ನಡೆಯುತ್ತಿದ್ದು, ಎರಡೂ ಕಡೆಯವರು ಶೀಘ್ರದಲ್ಲೇ ಒಪ್ಪಂದಕ್ಕೆ ಬರುವ ನಿರೀಕ್ಷೆಯಿದೆ.

ಸರ್ಕಾರಕ್ಕೆ ₹200 ಹಾಗೂ ಖಾಸಗಿ ಮಾರುಕಟ್ಟೆಯಲ್ಲಿ ₹1,000ಕ್ಕೆ ಒಂದು ಡೋಸ್ ಮಾರಾಟ ಮಾಡಲಾಗುವುದು ಎಂದು ಸೆರಂ ಸಂಸ್ಥೆ ತಿಳಿಸಿತ್ತು. ಆದರೆ ಸರ್ಕಾರವು ಪ್ರತಿ ಡೋಸ್‌ ಅನ್ನು ₹70ರಿಂದ ₹80 ದರದಲ್ಲಿ ಖರೀದಿಸಲು ಉದ್ದೇಶಿಸಿದೆ.

ಅಂತಿಮ ಹಂತದಲ್ಲಿ ಪ್ರಯೋಗ: ಭಾರತದಲ್ಲಿ ಸ್ಥಳೀಯವಾಗಿ ಕೋವಿಡ್ 19 ಲಸಿಕೆ ಅಭಿವೃದ್ಧಿಪಡಿಸಿದ ಭಾರತ್ ಬಯೋಟೆಕ್, 3ನೇ ಹಂತದಲ್ಲಿ ಮಾನವರ ಮೇಲಿನ ಪ್ರಯೋಗಕ್ಕೆ 25,800 ಸ್ವಯಂಸೇವಕರ ದಾಖಲಾತಿ ಪೂರ್ಣಗೊಳಿಸಲಾಗಿದೆ ಎಂದು ಘೋಷಿಸಿದೆ.

ಸ್ವಯಂಸೇವಕರು ಗುರುವಾರದ ಹೊತ್ತಿಗೆ ಕನಿಷ್ಠ ಒಂದು ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಕೊವ್ಯಾಕ್ಸಿನ್‌ ಲಸಿಕೆಯ ಮೂರನೇ ಹಂತದ ಪ್ರಯೋಗ ನವೆಂಬರ್ ಮಧ್ಯದಲ್ಲಿ ದೇಶದ 25 ವೈದ್ಯಕೀಯ ಕೇಂದ್ರಗಳಲ್ಲಿ ಪ್ರಾರಂಭವಾಗಿತ್ತು.

ಕೊವ್ಯಾಕ್ಸಿನ್ ಅನ್ನು 28 ದಿನಗಳ ಅಂತರದಲ್ಲಿ ಎರಡು ಡೋಸ್ ನೀಡಲಾಗುತ್ತದೆ. ಲಸಿಕೆಯ ಪರಿಣಾಮಕಾರಿತ್ವವನ್ನು ಎರಡನೇ ಡೋಸ್ ನೀಡಿದ 14 ದಿನಗಳ ನಂತರ ಕಂಡುಹಿಡಿಯಬಹುದು ಎಂದು ಭಾರತ್ ಬಯೋಟೆಕ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT