ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ ಸಂಸದ್‌ನಲ್ಲಿ ಮುಸ್ಲಿಂ ವಿರೋಧಿ ಮಾತು: ವಿಪಕ್ಷಗಳ ಮೌನದ ಬಗ್ಗೆ ಸಿಪಿಎಂ ಟೀಕೆ

ಪಕ್ಷದ ಮುಖವಾಣಿ ‘ಪೀಪಲ್ಸ್‌ ಡೆಮಾಕ್ರಸಿ’ಯ ಸಂಪಾದಕೀಯದಲ್ಲಿ ಉಲ್ಲೇಖ
Last Updated 6 ಜನವರಿ 2022, 14:19 IST
ಅಕ್ಷರ ಗಾತ್ರ

ನವದೆಹಲಿ: ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ ಧರ್ಮ ಸಂಸದ್‌ನಲ್ಲಿ ಮುಸ್ಲಿಂ ವಿರೋಧಿ ಮಾತುಗಳೇ ಕೇಳಿಬಂದವು. ಆದರೆ, ಕೆಲವು ರಾಜ್ಯಗಳ ವಿಧಾನಸಭೆಗೆ ನಡೆಯಲಿರುವ ಚುನಾವಣೆಗಳ ಮೇಲೆ ಕಣ್ಣಿಟ್ಟಿರುವ ಕೆಲ ವಿರೋಧ ಪಕ್ಷಗಳು ಧರ್ಮ ಸಂಸದ್ ವಿರುದ್ಧ ಧ್ವನಿ ಎತ್ತುತ್ತಿಲ್ಲ ಎಂದು ಸಿಪಿಎಂ ಟೀಕಿಸಿದೆ.

‘ಫ್ಯಾಸಿಸ್ಟ್‌ ಮನೋಭಾವದ ಹಿಂದುತ್ವ ಶಕ್ತಿಗಳು ಒಡ್ಡಿರುವ ಅಪಾಯವನ್ನು ಗ್ರಹಿಸುವಲ್ಲಿ ವಿರೋಧ ಪಕ್ಷಗಳು ವಿಫಲವಾಗಿವೆ’ ಎಂದೂ ಸಿಪಿಎಂ ಹೇಳಿದೆ.

ಪಕ್ಷದ ಮುಖವಾಣಿ ‘ಪೀಪಲ್ಸ್‌ ಡೆಮಾಕ್ರಸಿ’ಯ ಸಂಪಾದಕೀಯ ಅಂಕಣದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಆದರೆ, ಪಕ್ಷವು ನಿರ್ದಿಷ್ಟ ವಿರೋಧ ಪಕ್ಷ ಅಥವಾ ಪಕ್ಷಗಳನ್ನು ತನ್ನ ಸಂಪಾದಕೀಯದಲ್ಲಿ ಹೆಸರಿಸಿಲ್ಲ.

‘ಕೇಸರಿ ವಸ್ತ್ರ ಧರಿಸಿದ್ದ ಪುರುಷರು ಹಾಗೂ ಮಹಿಳೆಯರು ಈ ಸಮಾವೇಶದಲ್ಲಿ ಮುಸ್ಲಿಂ ವಿರೋದಿ ಮಾತುಗಳನ್ನಾಡಿದ್ದಾರೆ. ಮುಸ್ಲಿಮರನ್ನು ಮುಗಿಸಲು ಹಿಂಸಾಚಾರಕ್ಕೆ ಕರೆ ನೀಡಿದ್ದಾರೆ. ಈ ರೀತಿ ಮಾತನಾಡಿರುವವರು ಕೇವಲ ಕಿಡಿಗೇಡಿಗಳಲ್ಲ. ಆರ್‌ಎಸ್‌ಎಸ್‌, ಬಿಜೆಪಿಯನ್ನು ಒಳಗೊಂಡಿರುವ ಹಿಂದುತ್ವ ಶಕ್ತಿಗಳನ್ನೇ ಅವರು ಪ್ರತಿನಿಧಿಸಿದ್ದರು’ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.

‘ಈ ಧರ್ಮ ಸಂಸದ್‌ನಲ್ಲಿ ಪಾಲ್ಗೊಂಡಿದ್ದವರಿಗೆ ರಾಜ್ಯ ಸರ್ಕಾರದ ಅಭಯ ಇದೆ. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಧಾಮಿ ಅವರು ಸ್ವಾಮಿ ಪ್ರಬೋಧಾನಂದ ಅವರ ಪಾದಮುಟ್ಟಿ ನಮಸ್ಕರಿಸುತ್ತಿದ್ದ ಚಿತ್ರವೇ ಈ ಮಾತಿಗೆ ಸಾಕ್ಷಿ. ಸ್ವಾಮಿ ಪ್ರಬೋಧಾನಂದ ಅವರೂ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ’ ಎಂದು ಬರೆಯಲಾಗಿದೆ.

‘ದೇಶದಲ್ಲಿ ದ್ವೇಷ ಭಾಷಣದ ಘಟನೆಗಳು ಪದೇಪದೇ ನಡೆಯುತ್ತಿವೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೇಲಿಂದ ಮೇಲೆ ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮುಸ್ಲಿಂ ಮತ್ತು ಕ್ರೈಸ್ತ ಧರ್ಮ ಸ್ವೀಕರಿಸಿರುವವರನ್ನು ಪುನಃ ಹಿಂದೂ ಧರ್ಮಕ್ಕೆ ಮತಾಂತರಗೊಳಿಸಲು ಬಿಜೆಪಿ ಸಂಸದ ತೇಜಸ್ವಿಸೂರ್ಯ ಕರೆ ನೀಡಿದ್ದಾರೆ. ಈ ಕಾರ್ಯಕ್ಕೆ ಮಠಗಳು ಹಾಗೂ ದೇವಸ್ಥಾನಗಳನ್ನು ಬಳಸುವಂತೆಯೂ ಹೇಳಿದ್ದಾರೆ’ ಎಂದೂ ಸಂಪಾದಕೀಯದಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT