ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ ಅಭಿಯಾನದ ವೇಗಕ್ಕೆ ಬಾಯಿಮುಚ್ಚಿದ ಟೀಕಾಕಾರರು-ಪ್ರಧಾನಿ ಭಾಷಣ

100 ಕೋಟಿ ಡೋಸ್‌ ನೀಡಿದ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಪ್ರಧಾನಿ ಭಾಷಣ
Last Updated 23 ಅಕ್ಟೋಬರ್ 2021, 4:24 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಲಸಿಕಾ ಅಭಿಯಾನ ‘ವಿಜ್ಞಾನದಿಂದ ಹುಟ್ಟಿದ, ವಿಜ್ಞಾನ ಮುನ್ನಡೆಸಿದ ಮತ್ತು ವಿಜ್ಞಾನ ಆಧಾರಿತ ಕಾರ್ಯಕ್ರಮವಾಗಿದೆ’ ಎಂದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಹೇಳಿದರು.ಅಭಿಯಾನದ ವೇಗ ಮತ್ತು ಪ್ರಮಾಣ ದೇಶದ ಒಳಗಿನ ಮತ್ತು ದೇಶದ ಹೊರಗಿನ ಟೀಕಾಕಾರರ ಬಾಯಿ ಮುಚ್ಚಿಸಿದೆ ಎಂದರು.

ಕೋವಿಡ್‌ ವಿರುದ್ಧದ ಲಸಿಕಾ ಅಭಿಯಾನದಲ್ಲಿ ದೇಶವು 100 ಕೋಟಿ ಡೋಸ್‌ಗಳ ಮೈಲಿಗಲ್ಲು ತಲುಪಿದ ಹಿನ್ನೆಲೆಯಲ್ಲಿ ಅವರು ದೇಶವನ್ನು ಉದ್ದೇಶಿಸಿ ಶುಕ್ರವಾರ ಭಾಷಣ ಮಾಡಿದರು. ಲಸಿಕೆಯ ಅಗತ್ಯ ಮತ್ತು ದೇಶದ ಆರ್ಥಿಕತೆ ಕುರಿತು ಆಶಾಭಾವನೆ ಮತ್ತು ಭರವಸೆ ಮೂಡುತ್ತಿರುವ ಕುರಿತು ಮಾತನಾಡಿದರು.

ಈ ಸಾಧನೆ ಭಾರತದ ಸಾಮರ್ಥ್ಯವನ್ನು ಪ್ರಶ್ನಿಸುತ್ತಿದ್ದವರ ಬಾಯಿ ಮುಚ್ಚಿಸಿದೆ. ಅಲ್ಲದೇ, ‘ನವ ಭಾರತ’ ಕಷ್ಟಕರ ಗುರಿ ನಿಗದಿಪಡಿಸಿಕೊಂಡು ಅದನ್ನು ಸಾಧಿಸುತ್ತದೆ ಎಂಬುದನ್ನು ಈ ಲಸಿಕಾ ಅಭಿಯಾನ ತೋರಿಸಿಕೊಟ್ಟಿದೆ ಎಂದರು.

ಪ್ರತಿಪಕ್ಷಗಳಿಗೆ ತಿರುಗೇಟು: ಪ್ರತಿಪಕ್ಷಗಳ ಟೀಕೆಗಳ ವಿರುದ್ಧ ಹರಿಹಾಯ್ದ ಅವರು, ಚಪ್ಪಾಳೆ ತಟ್ಟುವುದರಿಂದ ಮತ್ತು ದೀಪ ಹಚ್ಚುವುದರಿಂದ ಹೇಗೆ ವೈರಸ್‌ ನಾಶ ಆಗುತ್ತದೆ ಎಂದು ಸಾಂಕ್ರಾಮಿಕದ ಆರಂಭಿಕ ದಿನಗಳಲ್ಲಿ ಟೀಕೆ ಮಾಡುತ್ತಿದ್ದರು. ಈ ಕ್ರಮಗಳು ಜನರ ಭಾಗವಹಿಸುವಿಕೆ ಮತ್ತು ಒಗ್ಗಟ್ಟನ್ನು ತೋರುತ್ತವೆ. 100 ಕೋಟಿ ಡೋಸ್‌ ಲಸಿಕೆ ನೀಡಿರುವುದು ಇತಿಹಾಸದಲ್ಲಿ ಹೊಸ ಅಧ್ಯಾಯವಾಗಿದೆ ಮತ್ತು ಇದು ದೇಶದ ಸಾಮರ್ಥ್ಯವನ್ನು ಪ್ರತಿಫಲಿಸುತ್ತದೆ. ಭಾರತದ ಲಸಿಕಾ ಅಭಿಯಾನ ‘ಸಬ್‌ ಕಾ ಸಾಥ್‌, ಸಬ್‌ ಕಾ ವಿಶ್ವಾಸ್‌ ಮತ್ತು ಸಬ್ ಕಾ ಪ್ರಯಾಸ್‌’ ಘೋಷಣೆಯ ಅತ್ಯಂತ ಪರಿಣಾಮಕಾರಿ ಉದಾಹರಣೆ ಆಗಿದೆ ಎಂದರು.

ಈ ಮೈಲುಗಲ್ಲು ತಲುಪಿದ್ದರಿಂದ ಆಗುವ ಮತ್ತೊಂದು ಮಹತ್ತರ ಪರಿಣಾಮವೇನೆಂದರೆ, ಭಾರತವನ್ನು ಕೊರೊನಾ ವೈರಸ್‌ನಿಂದ ಸುರಕ್ಷಿತ ದೇಶ ಎಂದು ಪರಿಗಣಿಸಲಾಗುತ್ತದೆ. ಔಷಧಿ ತಯಾರಕಾ ವಲಯದಲ್ಲಿ ಭಾರತದ ಸ್ಥಾನ ಜಾಗತಿಕವಾಗಿ ದೊಡ್ಡ ಮಟ್ಟಕ್ಕೇರುತ್ತದೆ ಎಂದರು.

ವಿಐಪಿ ಸಂಸ್ಕೃತಿಗೆ ಜಾಗ ಇಲ್ಲ: ಭಾರತದಂಥ ಪ್ರಜಾಪ್ರಭುತ್ವದಲ್ಲಿ ಕೋವಿಡ್‌ನಂಥ ಸಾಂಕ್ರಾಮಿಕದ ಎದುರು ಹೋರಾಡುವುದು ಬಹಳ ಕಷ್ಟ ಎಂಬ ಆತಂಕಗಳು ಸಾಂಕ್ರಾಮಿಕದ ಆರಂಭದಲ್ಲಿ ವ್ಯಕ್ತವಾಗಿದ್ದವು. ಸಾಂಕ್ರಾಮಿಕ ತಡೆಗೆ ಬೇಕಿರುವ ಶಿಸ್ತನ್ನು ಹೇಗೆ ಜನರಲ್ಲಿ ತರಲಾಗುತ್ತದೆ ಎಂಬ ಕುರಿತೂ ಪ್ರಶ್ನೆಗಳು ಎದ್ದಿದ್ದವು. ನಮಗೆ ಪ್ರಜಾಪ್ರಭುತ್ವ ಎಂದರೆ ‘ಸಬ್‌ ಕಾ ಸಾಥ್‌’. ಎಲ್ಲರನ್ನೂ ಒಟ್ಟಿಗೆ ಸೇರಿಸಿಕೊಂಡು ನಾವು ‘ಎಲ್ಲರಿಗೂ ಲಸಿಕೆ, ಉಚಿತ ಲಸಿಕೆ’ ಅಭಿಯಾನ ಆರಂಭಿಸಿದೆವು. ಈ ರೋಗ ಹೇಗೆ ಯಾರ ಕುರಿತೂ ತಾರತಮ್ಯ ಮಾಡುವುದಿಲ್ಲವೋ ಅದೇ ರೀತಿ ಲಸಿಕೆ ಹಂಚಿಕೆ ವಿಚಾರದಲ್ಲೂ ನಾವು ತಾರತಮ್ಯ ಮಾಡಬಾರದು ಎಂಬ ಮಂತ್ರ ಇರಿಸಿಕೊಂಡಿದ್ದೆವು, ಹಾಗಾಗಿ ಇಲ್ಲಿ ವಿಐಪಿ ಸಂಸ್ಕೃತಿ ಇರಲಿಲ್ಲ ಎಂದರು.

ಹಬ್ಬಗಳ ಋತುವಿನಲ್ಲಿ ಕೋವಿಡ್‌ ಸಂಬಂಧಿ ಎಚ್ಚರಿಕೆಗಳನ್ನು ಪಾಲಿಸಬೇಕು. ನೀವು ತೆಗೆದುಕೊಂಡಿರುವ ಲಸಿಕೆ ಎಷ್ಟೇ ಉತ್ತಮವಾಗಿರಲಿ ಆದರೆ ಯುದ್ಧ ಮುಗಿಯುವ ವರೆಗೆ ಶಸ್ತ್ರಗಳನ್ನು ಕೆಳಗಿಡಬಾರದು. ಮುಂಜಾಗ್ರತೆ ವಹಿಸಿಯೇ ಹಬ್ಬಗಳನ್ನು ಆಚರಿಸಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT