ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಗೆ ಸಂಬಂಧಿಸಿದ ಎರಡು ಪ್ರಮುಖ ಮಸೂದೆಗಳಿಗೆ ರಾಜ್ಯಸಭೆಯಲ್ಲಿ ಅಂಗೀಕಾರ

Last Updated 20 ಸೆಪ್ಟೆಂಬರ್ 2020, 9:43 IST
ಅಕ್ಷರ ಗಾತ್ರ

ನವದೆಹಲಿ: ಪ್ರತಿಪಕ್ಷಗಳ ಕೋಲಾಹಲ ಮತ್ತು ಪ್ರತಿಭಟನೆಯ ಮಧ್ಯೆಯೂ ಕೃಷಿಗೆ ಸಂಬಂಧಿಸಿದ ಎರಡು ಪ್ರಮುಖ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ.

ರೈತರು ಮತ್ತು ಬೆಳೆಗಳ ವ್ಯಾಪಾರ, ವಾಣಿಜ್ಯ ಮಸೂದೆ 2020 (ಪ್ರಚಾರ ಮತ್ತು ಸೌಲಭ್ಯ) ಮತ್ತು ರೈತರು (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ, 2020ಕ್ಕೆ ಅಂಗೀಕಾರ ದೊರೆತಿದೆ. ಮಸೂದೆಯು ಅಂಗೀಕಾರವು ಎಲ್ಲ ನಿಯಮಗಳನ್ನು ಉಲ್ಲಂಘಿಸಿ ನಡೆದಿದೆ ಮತ್ತು ಇದು 'ಪ್ರಜಾಪ್ರಭುತ್ವದ ಕೊಲೆ' ಎಂದು ವಿಪಕ್ಷಗಳು ಆರೋಪಿಸಿವೆ.

ವಿರೋಧ ಪಕ್ಷದ ಸದಸ್ಯರು ಸದನದ ಬಾವಿಗೆ ಧಾವಿಸಿ, ನಿಯಮ ಪುಸ್ತಕವನ್ನು ಹರಿದು ಹಾಕಿದರು ಮತ್ತು ಉಪ ಸಭಾಧ್ಯಕ್ಷರ ಮೈಕ್ರೊಫೋನ್ ಕಸಿದುಕೊಳ್ಳಲು ಪ್ರಯತ್ನಿಸಿದ್ದರಿಂದ ತೀವ್ರಗತಿಯಲ್ಲಿ ಸಾಗುತ್ತಿದ್ದ ಚರ್ಚೆಯು ಗೊಂದಲದಲ್ಲಿಯೇ ಕೊನೆಗೊಂಡಿದೆ.

ಮಸೂದೆಗಳನ್ನು ನಿರ್ಬಂಧಿಸಲು ಸದಸ್ಯ ಬಲದ ಸಂಖ್ಯೆಗಳ ಕೊರತೆಯಿರುವ ಪ್ರತಿಪಕ್ಷಗಳು ಹೆಚ್ಚಿನ ಚರ್ಚೆಗಾಗಿ ಮಸೂದೆಗಳನ್ನು ಆಯ್ಕೆ ಸಮಿತಿಗೆ ನೀಡಬೇಕೆಂದು ಒತ್ತಾಯಿಸಿದ್ದವು.

ಪ್ರತಿಪಕ್ಷದ ನಿರ್ಣಯವನ್ನು ನಿರಾಕರಿಸಲಾಗಿದೆ ಮತ್ತು ಧ್ವನಿ ಮತದಾನದ ಮೂಲಕ ಮಸೂದೆಗಳನ್ನು ಅಂಗೀಕರಿಸಬೇಕು ಎಂದು ಸ್ಪೀಕರ್ ಹೇಳಿದ ಬಳಿಕ ಕೆರಳಿದ ವಿಪಕ್ಷಗಳು ಪ್ರತಿಭಟನೆಗೆ ಮುಂದಾದವು. ಆಗ ಸದನದ ಭಾವಿಗೆ ಧಾವಿಸಿದ ಪ್ರತಿಪಕ್ಷದ ಸದಸ್ಯರು, ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.

ನಿಯಮಗಳನ್ನು ಪಾಲಿಸಲಾಗುತ್ತಿಲ್ಲ ಎಂದು ಕಿಡಿಕಾರಿದ ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒ ಬ್ರಿಯಾನ್ ಅವರು ಸ್ಪೀಕರ್ ಟೇಬಲ್‌ನಿಂದ ನಿಯಮ ಪುಸ್ತಕವನ್ನು ತೆಗೆದುಕೊಂಡು ಹರಿದು ಹಾಕಿದರು. ಅಲ್ಲದೇ ಚೇರಿನಿಂದ ಮೈಕ್ ಅನ್ನು ಸಹ ಕಳಚಲಾಯಿತು.

'ಇದು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಕ್ರೂರ ಹತ್ಯೆಯಾಗಿದೆ' ಎಂದು ಡೆರೆಕ್ ಹೇಳಿದರು. ಕಾಂಗ್ರೆಸ್‌ನ ಗುಲಾಂ ನಬಿ ಆಜಾದ್ ಪ್ರತಕ್ರಿಯಿಸಿ, ಸಂಸತ್ತಿನೊಳಗೆ ಮಹಾಭಾರತ ಭುಗಿಲೆದ್ದಿದೆ ಎಂದು ಹೇಳಿದ್ದಾರೆ.

ಪ್ರತಿಪಕ್ಷಗಳ ಪುನರಾವರ್ತಿತ ಘೋಷಣೆಗಳ ಮಧ್ಯೆ ಸದನವನ್ನು 10 ನಿಮಿಷ ಮುಂದೂಡಲಾಗಿತ್ತು. ಬಳಿಕ ಸದನ ಪುನರಾರಂಭಗೊಂಡಾಗ ಧ್ವನಿ ಮತದಾನ ನಡೆದು ಮಸೂದೆಗಳಿಗೆ ಅಂಗೀಕಾರ ದೊರೆತಿದೆ.

ಮಸೂದೆಗಳು 'ಐತಿಹಾಸಿಕ'ಮತ್ತು ರೈತರ ಜೀವನದಲ್ಲಿ ಬದಲಾವಣೆಯನ್ನು ತರಲಿದೆ ಎಂದು ಸರ್ಕಾರ ಈ ಹಿಂದೆ ಹೇಳಿತ್ತು.

ಮೂರು ಮಸೂದೆಗಳ ಪೈಕಿ ಎರಡಕ್ಕೆ ಅಂಗೀಕಾರ ಸಿಕ್ಕ ಬಳಿಕ ವಿಶಾಲ ಕೃಷಿ ಉದಾರೀಕರಣ ಯೋಜನೆಯ ಭಾಗವಾಗಿರುವ 2020ರ ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಸದನವನ್ನು ಮರುದಿನಕ್ಕೆ ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT