ಡ್ರಗ್ಸ್ ಪ್ರಕರಣ: ಎನ್‌ಸಿಬಿ ವಿಚಕ್ಷಣಾ ತಂಡದೆದುರು ಪ್ರಭಾಕರ್ ಸೈಲ್ ಹಾಜರು

ಮುಂಬೈ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರುಕ್ ಖಾನ್ ಅವರಿಂದ ಲಂಚಕ್ಕೆ ಬೇಡಿಕೆ ಇಡಲಾಗಿತ್ತು ಎಂಬ ಆರೋಪಕ್ಕೆ ಸಂಬಂಧಿಸಿದ ಸಾಕ್ಷಿ ಪ್ರಭಾಕರ್ ಸೈಲ್ ಅವರು ಸೋಮವಾರ ಮಾದಕ ವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ವಿಚಕ್ಷಣಾ ತಂಡದ ಎದುರು ವಿಚಾರಣೆಗಾಗಿ ಹಾಜರಾಗಿದ್ದಾರೆ.
ತನ್ನ ಹೇಳಿಕೆಯನ್ನು ದಾಖಲಿಸಲು ಎನ್‌ಸಿಪಿ ವಿಚಕ್ಷಣಾ ತಂಡದ ಎದುರು ವಿಚಾರಣೆಗೆ ಹಾಜರಾಗುವಂತೆ ಸೈಲ್ ಅವರಿಗೆ ಎನ್‌ಸಿಬಿ ಭಾನುವಾರ ಸಮನ್ಸ್ ಜಾರಿ ಮಾಡಿತ್ತು. ಸೈಲ್ ತನ್ನ ವಕೀಲರೊಂದಿಗೆ ಮಧ್ಯಾಹ್ನ 2 ಗಂಟೆಗೆ ಪೊಲೀಸ್ ರಕ್ಷಣೆಯಲ್ಲಿ ಬಾಂದ್ರಾ ಉಪನಗರದಲ್ಲಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಕಚೇರಿಗೆ ತಲುಪಿದರು. ಇದೇ ಮೊದಲ ಬಾರಿಗೆ ಸೈಲ್ ಎನ್‌ಸಿಬಿ ಎದುರು ಹಾಜರಾಗಿದ್ದಾರೆ.
ಡೆಪ್ಯುಟಿ ಡೈರೆಕ್ಟರ್ ಜನರಲ್ ಜ್ಞಾನೇಶ್ವರ್ ಸಿಂಗ್ ನೇತೃತ್ವದ ಎನ್‌ಸಿಬಿಯ ವಿಚಕ್ಷಣಾ ತಂಡವು ಸೋಮವಾರ ಬೆಳಗ್ಗೆ ದೆಹಲಿಯಿಂದ ಇಲ್ಲಿಗೆ ತಲುಪಿದೆ.
ಡ್ರಗ್ಸ್ ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ ಸೈಲ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿ, ಆರ್ಯನ್ ಖಾನ್ ಬಿಡುಗಡೆಗೆ ಎನ್‌ಸಿಬಿಯ ಅಧಿಕಾರಿಯೊಬ್ಬರು ಮತ್ತು ತಲೆಮರೆಸಿಕೊಂಡಿರುವ ಕೆ.ಪಿ.ಗೋಸಾವಿ ಸಹಿತ ಇತರ ವ್ಯಕ್ತಿಗಳು ₹ 25 ಕೋಟಿ ಲಂಚ ಕೇಳಿದ್ದರು. ಇದರಲ್ಲಿ 8 ಕೋಟಿ ಹಣವನ್ನು ಎನ್‌ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರಿಗೆ ನೀಡಬೇಕೆಂದು ಗೋಸಾವಿ ಹೇಳಿದ್ದಾಗಿ ಆರೋಪಿಸಿದ್ದರು.
ಸೈಲ್ ಮಾಡಿದ್ದ ಆರೋಪಗಳನ್ನು ಸಮೀರ್ ವಾಂಖೆಡೆ ಅಲ್ಲಗಳೆದಿದ್ದರು. ಈ ಕುರಿತಂತೆ ಎನ್‌ಸಿಬಿ ಅಧಿಕಾರಿಗಳು ಮತ್ತು ಇತರರ ವಿರುದ್ಧ ತನಿಖೆ ನಡೆಸಲು ಎನ್‌ಸಿಬಿ ವಿಚಕ್ಷಣಾ ತನಿಖೆಗೆ ತಂಡಕ್ಕೆ ಆದೇಶಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.