ಗುರುವಾರ , ಅಕ್ಟೋಬರ್ 21, 2021
24 °C

‘ಅಗಾಥಾ ಕ್ರಿಸ್ಟಿ, ಶೆರ್ಲಾಕ್ ಹೋಮ್ಸ್ ಕಾದಂಬರಿಯಂತಾದ ಡ್ರಗ್ಸ್ ಪ್ರಕರಣ‘–ಎನ್‌ಸಿಬಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮುಂಬೈನ ಕ್ರೂಸ್‌ ಹಡಗಿನಲ್ಲಿ ನಿಷೇಧಿತ ಡ್ರಗ್ಸ್‌ ಪತ್ತೆಯಾಗಿರುವ ಪ್ರಕರಣದಲ್ಲಿ ಮಾದಕ ವಸ್ತು ನಿಗ್ರಹ ದಳವು (ಎನ್‌ಸಿಬಿ) ಮಂಗಳವಾರ ಏಳು ಜನರನ್ನು ಬಂಧಿಸಿದೆ. ದೆಹಲಿ ಮೂಲದ ಕಾರ್ಯಕ್ರಮ ಆಯೋಜನೆ ಕಂಪನಿಗೆ ಸೇರಿದ ನಾಲ್ವರು, ಶಾರೂಕ್‌ ಖಾನ್‌ ಮಗ ಆರ್ಯನ್‌ ಖಾನ್‌ ಸೇರಿದಂತೆ ಈವರೆಗೂ ಎನ್‌ಸಿಬಿ 16 ಜನರನ್ನು ಬಂಧಿಸಿದೆ.

ಕಾರ್ಡೆಲಿಯಾ ಕ್ರೂಸ್‌ ಹಡಗಿನಲ್ಲಿ ಅಕ್ಟೋಬರ್‌ 2ರಿಂದ ಅಕ್ಟೋಬರ್‌ 4ರವರೆಗೂ ಪಾರ್ಟಿ ಆಯೋಜಿಸಲಾಗಿತ್ತು. ಹಡಗು ಗೋವಾಗೆ ಹೊರಡುವುದಕ್ಕೂ ಮುನ್ನ ಎನ್‌ಸಿಬಿ ಹಡಗಿನ ಮೇಲೆ ದಾಳಿ ನಡೆಸಿ ಡ್ರಗ್ಸ್‌ ವಶಪಡಿಸಿಕೊಂಡಿತ್ತು. ಈ ಪ್ರಕರಣವು 'ಕ್ಷಣಕ್ಷಣಕ್ಕೂ ಹೊಸ ತಿರುವುಗಳನ್ನು ಪಡೆಯುತ್ತಿದೆ', ಈ ಪ್ರಕರಣವು ಅಗಾಥಾ ಕ್ರಿಸ್ಟಿ ಮತ್ತು ಶೆರ್ಲಾಕ್‌ ಹೋಮ್ಸ್‌ ಕಾದಂಬರಿಯಂತಾಗಿದೆ ಎಂದು ಎನ್‌ಸಿಬಿ ಕೋರ್ಟ್‌ಗೆ ಹೇಳಿದೆ.

ಕಾರ್ಡೆಲಿಯಾ ಕ್ರೂಸ್‌ನ ಸಿಇಒಗೂ ವಿಚಾರಣೆಗೆ ಹಾಜರಾಗುವಂತೆ ಎನ್‌ಸಿಬಿ ಸಮನ್ಸ್‌ ನೀಡಿದೆ. ಹಡಗಿನಲ್ಲಿದ್ದ ಪ್ರಯಾಣಿಕರ ವಿವರಗಳು ಹಾಗೂ ಸಿಸಿಟಿವಿ ದೃಶ್ಯಗಳನ್ನು ಎನ್‌ಸಿಬಿ ಕೇಳಿದೆ. ಆರೋಪಿಗಳ ಕುರಿತು ಎನ್‌ಸಿಬಿ ಸಾಕ್ಷ್ಯಾಧಾರಗಳನ್ನು ಕಲೆಹಾಕುತ್ತಿದೆ. ಹಡಗಿನಿಂದ 13 ಗ್ರಾಂ ಕೊಕೇನ್‌, 5 ಗ್ರಾಂ ಎಂಡಿ, 21 ಗ್ರಾಂ ಚರಸ್‌, 22 ಎಂಡಿಎಂಎ ಮಾತ್ರೆಗಳು ಹಾಗೂ ₹1.33 ಲಕ್ಷವನ್ನು ಎನ್‌ಸಿಬಿ ವಶಪಡಿಸಿಕೊಂಡಿತ್ತು.

ಗೋಪಾಲ್‌ ಜೀ ಆನಂದ್‌, ಸಮೀರ್‌ ಸೆಹಗಲ್‌, ಮಾನವ್ ಸಿಂಘಾಲ್‌ ಹಾಗೂ ಭಾಸ್ಕರ್‌ ಅರೋರಾ ಬಂಧನಕ್ಕೆ ಒಳಗಾಗಿರುವ ಕಾರ್ಯಕ್ರಮ ಆಯೋಜನೆ ಕಂಪನಿಯ ಆಯೋಜಕರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ–ಮೊಗೆದಷ್ಟೂ ಮುಗಿಯದ ಡ್ರಗ್ಸ್‌ ಲೋಕ

ಶನಿವಾರ ಎನ್‌ಸಿಬಿಯ ಮುಂಬೈ ಘಟಕ ಹಡಗಿನ ದಾಳಿ ನಡೆಸಿ ನಿಷೇಧಿತ ಡ್ರಗ್ಸ್‌ ವಶ ಪಡಿಸಿಕೊಳ್ಳುವ ಜೊತೆಗೆ ಆರ್ಯನ್‌ ಖಾನ್‌ ಸೇರಿ ಒಂಬತ್ತು ಜನರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿತು. ಪಾರ್ಟಿಗೆ ಡ್ರಗ್‌ ಪೂರೈಕೆ ಮಾಡಿರುವ ಜಾಲದ ತನಿಖೆಗೆ ಮುಂದಾದ ಅಧಿಕಾರಿಗಳು ಡ್ರಗ್‌ ಪೆಡ್ಲರ್‌ಗಳೊಂದಿಗೆ ಸಂಪರ್ಕ ಹೊಂದಿರುವವರ ಬಗ್ಗೆ ಮಾಹಿತಿ ಕಲೆ ಹಾಕಲು ಶುರು ಮಾಡಿದರು. ಶಂಕಿತರು ವಿಚಾರಣೆಯ ವೇಳೆ ಹಲವು ಮಾಹಿತಿ ಬಹಿರಂಗ ಪಡಿಸಿದರು ಹಾಗೂ ಆ ಮೂಲಕ ಇನ್ನಷ್ಟು ಜನರ ಹೆಸರುಗಳು ಹೊರಬಂದವು.

ಸೋಮವಾರ ಮತ್ತು ಮಂಗಳವಾರ ಕಾರ್ಯಾಚರಣೆ ನಡೆಸಿದ ಎನ್‌ಸಿಬಿ, ಶ್ರೇಯಸ್‌ ನಾಯರ್‌, ಮನೀಶ್‌ ರಾಜಗಾರಿಯಾ, ಅವಿನ್‌ ಸಾಹು ಸೇರಿ ಏಳು ಜನರನ್ನು ಬಂಧಿಸಿತು. ಬಂಧಿತರು ನೀಡಿರುವ ಮಾಹಿತಿಯನ್ನು ಆಧರಿಸಿ ಹಲವು ಕಡೆ ದಾಳಿ ನಡೆಸಿರುವ ಎನ್‌ಸಿಬಿ ತಂಡ, ಮತ್ತಷ್ಟು ಮಾದಕ ವಸ್ತುಗಳನ್ನು ವಶ ಪಡಿಸಿಕೊಂಡಿದೆ. ಕೋರ್ಟ್‌ ಗುರುವಾರದ ವರೆಗೂ ಆರ್ಯನ್‌ ಖಾನ್‌ ಮತ್ತು ಇತರೆ ಏಳು ಜನರಿಗೆ ಎನ್‌ಸಿಬಿ ವಶಕ್ಕೆ ನೀಡಿದ್ದು, ಉಳಿದವರನ್ನು ಅಕ್ಟೋಬರ್‌ 11ರ ವರೆಗೂ ಕಸ್ಟಡಿಗೆ ಕೊಡಲಾಗಿದೆ. ಆರ್ಯನ್‌ ಖಾನ್‌ ಹಾಗೂ ಇನ್ನಿಬ್ಬರ ವಾಟ್ಸ್‌ಆ್ಯಪ್‌ ಚಾಟ್‌ಗಳಲ್ಲಿ ಆಘಾತಕಾರಿ ಅಂಶಗಳು ಪತ್ತೆಯಾಗಿವೆ ಎಂದು ಎನ್‌ಸಿಬಿ ಹೇಳಿದೆ.

ಆರ್ಯನ್‌ ಖಾನ್‌ ಮತ್ತು ತನ್ನ ಮಗ ಅರ್ಬಾಜ್‌ ಮರ್ಚಂಟ್‌ ಮುಗ್ದರು ಎಂದು ಅಸ್ಲಾಮ್‌ ಮರ್ಚಂಟ್‌ ಮಾಧ್ಯಮಗಳಿಗೆ ಹೇಳಿದ್ದಾರೆ. 'ಕಳೆದ 15 ವರ್ಷಗಳಿಂದ ಆರ್ಯನ್‌ ಮತ್ತು ಅರ್ಬಾಜ್‌ ಆಪ್ತ ಸ್ನೇಹಿತರು. ಅವರಿಬ್ಬರೂ ಹಡಗಿನ ಒಳಗೂ ಪ್ರವೇಶಿಸಿರಲಿಲ್ಲ. ಆರ್ಯನ್‌ನನ್ನು ಸೆಬ್ರಿಟಿಯಾಗಿ ಹಡಗಿಗೆ ಆಹ್ವಾನಿಸಲಾಗಿತ್ತು ಹಾಗೂ ಅರ್ಬಾಜ್‌ ಸ್ನೇಹಿತನಾಗಿ ಆರ್ಯನ್‌ ಜೊತೆಗೆ ಹೋಗಿದ್ದ' ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು