ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವಿ ಕೋರ್ಸ್‌: ಸಿಯುಇಟಿ: ಮುಂದುವರಿದ ಗೊಂದಲ

Last Updated 18 ಆಗಸ್ಟ್ 2022, 14:04 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ಹಲವು ವಿಶ್ವವಿದ್ಯಾಲಯಗಳಲ್ಲಿನ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುತ್ತಿರುವ ನಾಲ್ಕನೇ ಹಂತದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಯುಇಟಿ) ಎರಡನೇ ದಿನವಾದ ಗುರುವಾರವೂ ಹಲವು ಲೋಪ ಮತ್ತು ಗೊಂದಲಗಳು ಮುಂದುವರಿದಿವೆ.

ಯಾವುದೇ ಮುನ್ಸೂಚನೆ ನೀಡದೆ ಪರೀಕ್ಷಾ ದಿನಾಂಕ ಬದಲಾವಣೆ ಮತ್ತು ಕೊನೆಗಳಿಗೆಯಲ್ಲಿ ಪರೀಕ್ಷಾ ಕೇಂದ್ರಗಳ ಬದಲಾವಣೆಯಿಂದ ಹಲವು ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಅಲ್ಲದೆ ಈ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ನಡೆಸುವ ಕುರಿತು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಅಥವಾ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯಿಂದ (ಎನ್‌ಟಿಎ)ಯಾವುದೇ ಮಾಹಿತಿ ಬಂದಿಲ್ಲ.

ಇದೇ 30ರಂದು ನಡೆಯುವ ಪರೀಕ್ಷೆಯನ್ನು ಆಯ್ಕೆ ಮಾಡಿಕೊಂಡಿದ್ದ ಹಲವು ಅಭ್ಯರ್ಥಿಗಳಿಗೆ ಗುರುವಾರವೇ ಪರೀಕ್ಷೆ ನಿಗದಿಯಾಗಿದ್ದು ಅವರ ಆತಂಕಕ್ಕೆ ಕಾರಣವಾಗಿತ್ತು. ಅಲ್ಲದೆ ಪರೀಕ್ಷಾ ಕೇಂದ್ರಗಳು ದೂರದ ಊರುಗಳಲ್ಲಿ ಇದ್ದಿದ್ದರಿಂದ ಹಲವರಿಗೆ ಈ ಪರೀಕ್ಷೆಯನ್ನೂ ಬರೆಯಲು ಸಾಧ್ಯವಾಗಲಿಲ್ಲ.

ಯಾವುದೇ ಮಾಹಿತಿ ನೀಡದೆ ತಮ್ಮ ಪರೀಕ್ಷಾ ದಿನಾಂಕವನ್ನು ಬದಲಿಸಿರುವುದಕ್ಕೆ ಅಭ್ಯರ್ಥಿಗಳು ಎನ್‌ಟಿಎ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಾನು ಆಯ್ಕೆ ಮಾಡಿಕೊಂಡ ನಗರದಲ್ಲಿಯೇ ಪರೀಕ್ಷಾ ಕೇಂದ್ರ ಇರುವುದಾಗಿ ನನಗೆ ನೀಡಲಾದ ಸೂಚನಾ ಪತ್ರದಲ್ಲಿ ಹೇಳಲಾಗಿತ್ತು. ಆದರೆ ಕೊನೆಗಳಿಗೆಯಲ್ಲಿ ನನಗೆ ದೊರೆತ ಪ್ರವೇಶ ಪತ್ರದಲ್ಲಿ ನಮೂದಾಗಿದ್ದ ಕೇಂದ್ರವು ನಾನಿದ್ದ ಊರಿನಿಂದ 150 ಕಿ.ಮೀ ದೂರದಲ್ಲಿತ್ತು. ಪರೀಕ್ಷಾ ಕೇಂದ್ರಕ್ಕೆ ಬೆಳಿಗ್ಗೆ 8.30ರೊಳಗೆ ಹೋಗಬೇಕಿತ್ತು’ ಎಂದು ಅಭ್ಯರ್ಥಿ ನೇಹಾ ಸಿಂಘಾಲ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಬುಧವಾರ ಮಧ್ಯಾಹ್ನದವರೆಗೂ ನನ್ನ ಪ್ರವೇಶ ಪತ್ರದಲ್ಲಿ ತೋರಿಸುತ್ತಿದ್ದ ಪರೀಕ್ಷಾ ಕೇಂದ್ರ, ಗುರುವಾರ ಬೆಳಿಗ್ಗೆಯಷ್ಟರಲ್ಲಿ ಬದಲಾಗಿತ್ತು. ಕೊನೆಗಳಿಗೆಯಲ್ಲಿ ಈ ಬದಲಾವಣೆ ಮಾಡಿದ್ದರ ಬಗ್ಗೆ ಯಾವುದೇ ಸೂಚನೆಯನ್ನೂ ನೀಡಿರಲಿಲ್ಲ’ ಎಂದು ಮತ್ತೊಬ್ಬರು ಅಭ್ಯರ್ಥಿ ಅಂಜಲಿ ಮಿಶ್ರಾ ದೂರಿದರು.

‘ವೆಬ್‌ಸೈಟ್‌ನಲ್ಲಿ ಬುಧವಾರ ರಾತ್ರಿಯವರೆಗೂ ನನ್ನ ಪ್ರವೇಶ ಪತ್ರವನ್ನು ಹಾಕಿರಲಿಲ್ಲ. ಗುರುವಾರ ಬೆಳಿಗ್ಗೆ ಪ್ರವೇಶ ಪತ್ರ ನನಗೆ ದೊರೆಯುವಷ್ಟರಲ್ಲಿ ಪರೀಕ್ಷೆಯೇ ಆರಂಭವಾಗಿತ್ತು. ಇನ್ನು, ನಾನಿರುವ ಸ್ಥಳದಿಂದ ಪರೀಕ್ಷಾ ಕೇಂದ್ರಕ್ಕೆ ಹೋಗಲು ಎರಡೂವರೆ ತಾಸಾಗುತ್ತಿತ್ತು’ ಎಂದು ಇನ್ನೊಬ್ಬ ಅಭ್ಯರ್ಥಿ ನಿಖಿಲ್‌ ಮಿಶ್ರಾ ಅಳಲು ತೋಡಿಕೊಂಡರು.

‘ವೆಬ್‌ಸೈಟ್‌ನಲ್ಲಿ ಆಗಸ್ಟ್‌ 16ರಂದು ಹೊರಡಿಸಿದ್ದ ಪ್ರಕಟಣೆ ಪ್ರಕಾರ, ಪರೀಕ್ಷೆ ಆಗಸ್ಟ್‌ 18 ಮತ್ತು ಆಗಸ್ಟ್‌ 30ರಂದು ನಿಗದಿಯಾಗಿತ್ತು. ಪರೀಕ್ಷಾ ಕೇಂದ್ರ ತಾವು ಬಯಸಿದ್ದ ನಗರದಲ್ಲಿಯೇ ಇರಬೇಕೆಂದು ಬಯಸುವ ಅಭ್ಯರ್ಥಿಗಳು ಆಗಸ್ಟ್‌ 30ರ ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಸೂಚಿಸಲಾಗಿತ್ತು. ಅದರಂತೆ ನಾನು ಆಗಸ್ಟ್‌ 30 ಅನ್ನು ಆಯ್ಕೆ ಮಾಡಿಕೊಂಡಿದ್ದೆ. ಅದಕ್ಕೆ ಅನುಮತಿಯೂ ದೊರೆತಿತ್ತು. ಆದರೆ ಗುರುವಾರ ಬೆಳಿಗ್ಗೆ ದೊರೆತ ಪ್ರವೇಶ ಪತ್ರದಲ್ಲಿ ನನ್ನ ಪರೀಕ್ಷಾ ದಿನಾಂಕ ಆಗಸ್ಟ್‌ 18 ಎಂದು ನಮೂದಾಗಿತ್ತು. ಇದು ನನಗೆ ಗೊತ್ತಾಗುವ ವೇಳೆಗೆ ಪರೀಕ್ಷೆಯೇ ಆರಂಭವಾಗಿತ್ತು’ ಎಂದು ಅಭ್ಯರ್ಥಿ ಹಿಮಾಂಕ್‌ ನಾಸ್ಸಾ ಬೇಸರ ವ್ಯಕ್ತಪಡಿಸಿದ್ದಾರೆ.

ಸಿಯುಇಟಿಯ ಬುಧವಾರದ ಪರೀಕ್ಷೆ ವೇಳೆಯಲ್ಲೂ 13 ಕೇಂದ್ರಗಳಲ್ಲಿ ತಾಂತ್ರಿಕ ಲೋಪಗಳು ಎದುರಾಗಿದ್ದವು. ಇದರಿಂದ 8600 ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ. ಅವರಿಗೆ ಇದೇ 25ರಂದು ಮತ್ತೆ ಪರೀಕ್ಷೆ ನಡೆಸುವುದಾಗಿ ಯುಜಿಸಿ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT