ಬುಧವಾರ, ಮಾರ್ಚ್ 29, 2023
24 °C
ಪುದುಚೇರಿಯಲ್ಲಿ ಕಡಲ್ಕೊರೆತ; ಮನೆಗಳಿಗೆ ಹಾನಿ

ಮಾಂಡೂಸ್‌ ಚಂಡಮಾರುತ: ತಮಿಳುನಾಡಿನಲ್ಲಿ ಭಾರಿ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ‘ಮಾಂಡೂಸ್‌’ ಚಂಡಮಾರುತದಿಂದಾಗಿ ತಮಿಳುನಾಡಿನ ಉತ್ತರ ಕರಾವಳಿಯಲ್ಲಿ ಸಾಧಾರಣ ಮತ್ತು ಕೆಲವು ಭಾಗಗಳಲ್ಲಿ ಭಾರಿ ಮಳೆ ಸುರಿಸಿದೆ. ರಾಜ್ಯದ ಕರಾವಳಿಗೆ ಮತ್ತಷ್ಟು ಹತ್ತಿರ ಚಲಿಸುತ್ತಿರುವ ‘ಮಾಂಡೂಸ್‌’ ಶನಿವಾರದ ನಸುಕಿನೊಳಗೆ ಕರಾವಳಿ ದಾಟಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ತಿಳಿಸಿದೆ.

ತಮಿಳುನಾಡಿನ ಚೆಂಗಲ್‌ಪೇಟೆ ಮತ್ತು ನಾಗಪಟ್ಟಣಂ ಸೇರಿ ಕರಾವಳಿ ಪ್ರದೇಶದಲ್ಲಿ 24 ತಾಸುಗಳಲ್ಲಿ ದಾಖಲೆಯ ಮಳೆಯಾಗಿದೆ. ಕನಿಷ್ಠ 3 ಸೆ.ಮೀ.ಯಿಂದ 7 ಸೆ.ಮೀ. ವರೆಗೆ ಮಳೆ ಸುರಿದಿದೆ. ಕೊಡೈಕೆನಾಲ್‌ನಲ್ಲಿ 5 ಸೆಂ.ಮೀ ಮಳೆ ದಾಖಲಾಗಿದೆ. ಚಂಡಮಾರುತ ಬಾಧಿತ ಪ್ರದೇಶಗಳ ಸಂತ್ರಸ್ತರಿಗೆ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ.

ತಮಿಳುನಾಡಿನ ಉತ್ತರ ಒಳನಾಡು, ಪುದುಚೇರಿ, ರಾಯಲಸೀಮಾ ಮತ್ತು ದಕ್ಷಿಣ ಆಂಧ್ರಪ್ರದೇಶದ ಪಕ್ಕದ ಭಾಗದಲ್ಲಿ ಶನಿವಾರ ಭಾರಿ ಮಳೆಯ ಮುನ್ಸೂಚನೆ ಇದೆ. ರಾಜ್ಯದ ಕರಾವಳಿ ಮತ್ತು ಪುದುಚೇರಿಯಲ್ಲಿ ಶನಿವಾರವೂ ಶಾಲಾ ಕಾಲೇಜುಗಳಿಗೆ ಪ್ರಾದೇಶಿಕ ಆಡಳಿತ ರಜೆ ಘೋಷಿಸಿದೆ. 

ವಾಯುವ್ಯ ದಿಕ್ಕಿನತ್ತ ಚಲಿಸುತ್ತಿರುವ ಚಂಡಮಾರುತವು, ಮಹಾಬಲಿಪುರಂ, ಪುದುಚೇರಿ, ಕಾರೈಕಲ್‌ ದಕ್ಷಿಣ ಆಂಧ್ರಪ್ರದೇಶದ ಕರಾವಳಿ, ಶ್ರೀಹರಿಕೋಟಾದಲ್ಲಿ ಮಳೆ ತರಲಿದೆ. ಚಂಡಮಾರುತದ ಮೇಲೆ ಡಾಪ್ಲರ್‌ ವೆದರ್‌ ರೆಡಾರ್‌ಗಳ ಮೂಲಕ ನಿಗಾವಹಿಸಲಾಗಿದೆ. 24 ತಾಸುಗಳಲ್ಲಿ ಚಂಡಮಾರುತ ದುರ್ಬಲವಾಗಲಿದೆ ಎಂದು ಐಎಂಡಿ ಹೇಳಿದೆ.

ಚೆಂಗಲ್‌ಪೇಟೆ, ವಿಲ್ಲುಪುರಂ ಮತ್ತು ಕಾಂಚೀಪುರಂ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕಾವೇರಿ ಕಣಿವೆ ಸೇರಿ ಕರಾವಳಿಯಲ್ಲಿ ರಕ್ಷಣಾ ಕಾರ್ಯಕ್ಕಾಗಿ ಎನ್‌ಡಿಆರ್‌ಎಫ್‌ ಮತ್ತು ಎಸ್‌ಟಿಆರ್‌ಎಫ್‌ ಒಳಗೊಂಡ ವಿಪತ್ತು ಸ್ಪಂದನಾ ಪಡೆಗಳನ್ನು ತಮಿಳುನಾಡು ಸರ್ಕಾರ ನಿಯೋಜಿಸಿದೆ. 

ಚಂಡಮಾರುತದಿಂದಾಗಿ ಶುಕ್ರವಾರ ಚೆನ್ನೈನಿಂದ ಹೊರಡಬೇಕಿದ್ದ 4 ವಿಮಾನಗಳ ಸಂಚಾರ ರದ್ದುಪಡಿಸಲಾಯಿತು. ಮಧ್ಯರಾತ್ರಿವರೆಗೆ ಒಟ್ಟು 13 ವಿಮಾನಗಳ ಸಂಚಾರ ರಾಜ್ಯದಲ್ಲಿ ರದ್ದುಪಡಿಸಲಾಗಿತ್ತು. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಕಟ್ಟೆಚ್ಚರ ನೀಡಲಾಗಿದೆ.

ಚಂಡಮಾರುತಕ್ಕೆ ಅರೆಬಿಕ್‌ ಹೆಸರು

‘ಮಾಂಡೂಸ್‌’ ಅರೆಬಿಕ್‌ ಮೂಲದ ಪದ. ಮಾಂಡೂಸ್‌ ಎಂದರೆ ‘ಟ್ರೆಷರ್‌ ಬಾಕ್ಸ್ (ಖಜಾನೆ ಪೆಟ್ಟಿಗೆ)’ ಎನ್ನುವ ಅರ್ಥವಿದೆ. ‘ಮ್ಯಾನ್-ಡೌಸ್’ ಎಂದೂ ಉಚ್ಚರಿಸಲಾಗುತ್ತದೆ. ಇದು ಬಂಗಾಳಕೊಲ್ಲಿಯಲ್ಲಿ ರೂಪುಗೊಂಡು ನಿಧಾನವಾಗಿ ಚಲಿಸುವ ಮತ್ತು ಬಹಳಷ್ಟು ತೇವಾಂಶ ಹೀರಿಕೊಳ್ಳುವ ಈ ಚಂಡಮಾರುತಕ್ಕೆ ‘ಮಾಂಡೂಸ್‌’ ಹೆಸರನ್ನು ಅರಬ್ ಸಂಯುಕ್ತ ಸಂಸ್ಥಾನವು (ಯುಎಇ) ಸೂಚಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.