ಶನಿವಾರ, ಸೆಪ್ಟೆಂಬರ್ 18, 2021
30 °C

ಸಂತ್ರಸ್ತೆಯರು ಕಡಲ ತಡಿಯಲ್ಲಿ ಏಕಿದ್ದರು?: ಗೋವಾ ಸಿಎಂ ಹೇಳಿಕೆಗೆ ಆಕ್ಷೇಪ

ಪಿಟಿಐ Updated:

ಅಕ್ಷರ ಗಾತ್ರ : | |

ಪಣಜಿ: ಅತ್ಯಾಚಾರಕ್ಕೆ ಒಳಗಾದ 14 ವರ್ಷ ವಯಸ್ಸಿನ ಇಬ್ಬರು ಬಾಲಕಿಯರು ಕಡಲ ಕಿನಾರೆಯಲ್ಲಿ ತಡರಾತ್ರಿ ಇದ್ದದ್ದು ಏಕೆ ಎಂದು ಗೋವಾ ಮುಖ್ಯಮಂತ್ರಿ ಪ್ರಶ್ನಿಸಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 

ಗೋವಾದ ಕಡಲ ತೀರವೊಂದರಲ್ಲಿ ಇಬ್ಬರು ಬಾಲಕಿಯರ ಮೇಲೆ ಭಾನುವಾರ ನಡೆದಿರುವ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಬುಧವಾರ ಚರ್ಚೆ ನಡೆದ ಸಂದರ್ಭದಲ್ಲಿ ಸಾವಂತ್‌ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ‘14 ವರ್ಷ ವಯಸ್ಸಿನ ತಮ್ಮ ಮಕ್ಕಳು ರಾತ್ರಿಪೂರ್ತಿ ಸಮುದ್ರ ತೀರದಲ್ಲಿ ಇರುತ್ತಾರೆ ಎಂದರೆ ಮಕ್ಕಳ ಪೋಷಕರು ಆತ್ಮಶೋಧನೆ ಮಾಡಿಕೊಳ್ಳಬೇಕಾಗುತ್ತದೆ. ಮಕ್ಕಳು ಮಾತು ಕೇಳುವುದಿಲ್ಲ ಎಂದ ಮಾತ್ರಕ್ಕೆ ಸರ್ಕಾರ ಮತ್ತು ಪೊಲೀಸರ ಮೇಲೆ ಜವಾಜ್ದಾರಿ ಹೊರಿಸಲು ಆಗುವುದಿಲ್ಲ’ ಎಂದಿದ್ದರು.

ಪೋಷಕರು ತಮ್ಮ ಮಕ್ಕಳ ಸುರಕ್ಷತೆಯ ಜವಾಬ್ದಾರಿಯನ್ನು ಹೊತ್ತಿರಬೇಕು. ಅಪ್ರಾಪ್ತರನ್ನು ತಡ ರಾತ್ರಿ ಹೊರಗೆ ಬಿಡಬಾರದು ಎಂದು ಗೃಹ ಸಚಿವರೂ ಆಗಿರುವ ಅವರು ಹೇಳಿದ್ದರು.

ಈ ಹೇಳಿಕೆಗೆ ವಿಪಕ್ಷಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೋವಾ ಕಾಂಗ್ರೆಸ್‌ ವಕ್ತಾರ ಅಲ್ಟೋನ್‌ ಡಿ’ಕೋಸ್ಟ, ‘ಗೋವಾದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾತ್ರಿ ಹೊರಗಡೆ ಓಡಾಡಲು ನಾವೇಕೆ ಹೆದರಬೇಕು. ಅಪರಾಧಿಗಳು ಜೈಲಿನಲ್ಲಿ ಇರಬೇಕು ಮತ್ತು ಸಾರ್ವಜನಿಕರು ಹೊರಗಡೆ ಮುಕ್ತವಾಗಿ ಓಡಾಡುವಂತಿರಬೇಕು’ ಎಂದಿದ್ದಾರೆ.

ಗೋವಾ ಫಾರ್ವರ್ಡ್‌ ಪಕ್ಷದ ಶಾಸಕ ವಿಜಯ್‌ ಸರ್ದೇಸಾಯಿ ಪ್ರತಿಕ್ರಿಯೆ ನೀಡಿ, ‘ಮುಖ್ಯಮಂತ್ರಿ ಅಂತಹ ಹೇಳಿಕೆ ನೀಡಿರುವುದು ಅಸಹ್ಯ ತರಿಸಿದೆ. ರಾಜ್ಯದ ಜನರ ರಕ್ಷಣೆಯು ಪೊಲೀಸರು ಮತ್ತು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ಜನರಿಗೆ ಭದ್ರತೆ ಒದಗಿಸಲು ಆಗದಿದ್ದರೆ ಮುಖ್ಯಮಂತ್ರಿಗೆ ಆ ಸ್ಥಾನದಲ್ಲಿ ಕೂರುವ ಅರ್ಹತೆ ಇರುವುದಿಲ್ಲ’ ಎಂದಿದ್ದಾರೆ.

ಪಕ್ಷೇತರ ಶಾಸಕ ರೋಹನ್‌ ಕೌಂತೆ ಈ ಕುರಿತು ಟ್ವೀಟ್‌ ಮಾಡಿದ್ದಾರೆ, ‘ಮಕ್ಕಳನ್ನು ರಾತ್ರಿವೇಳೆ ಹೊರಬಿಟ್ಟಿದ್ದಕ್ಕೆ ಮುಖ್ಯಮಂತ್ರಿ ಪೋಷಕರನ್ನು ದೂಷಿಸಿದ್ದು ನನಗೆ ಆಶ್ಚರ್ಯ ತರಿಸಿತು. ಮಹಿಳೆಯರಿಗೆ ಸುರಕ್ಷಿತ ರಾಜ್ಯ ಎಂಬ ಇತಿಹಾಸ ಗೋವಾಕ್ಕೆ ಇತ್ತು. ಬಿಜೆಪಿ ಅಧಿಕಾರ ಹಿಡಿದ ಬಳಿಕ ಆ ಹೆಗ್ಗಳಿಗೆ ಮರೆಯಾಯಿತು’ ಎಂದಿದ್ದಾರೆ.

ನಡೆದದ್ದು ಏನು?: ದಕ್ಷಿಣ ಗೋವಾದ ಬೆನೌಲಿಯಂ ಕರಾವಳಿ ತೀರಕ್ಕೆ ಭಾನುವಾರ 10 ಜನ ಯುವಕ ಯುವತಿಯರ ಗುಂಪೊಂದು ತೆರಳಿತ್ತು. ಅವರಲ್ಲಿ ಇಬ್ಬರು ಯುವಕರು ಮತ್ತು ಇಬ್ಬರು ಯುವತಿಯರು ರಾತ್ರಿ ಪೂರ್ತಿ ಸಮುದ್ರ ತೀರದಲ್ಲೇ ಕಾಲ ಕಳೆದಿದ್ದರು. ತಾವು ಪೊಲೀಸರು ಎಂದು ಹೇಳಿಕೊಂಡು ಬಂದ ನಾಲ್ವರು ಪುರುಷರು ಸ್ನೇಹಿತರ ಗುಂಪಿನಲ್ಲಿದ್ದ ಇಬ್ಬರು ಯುವಕರನ್ನು ಥಳಿಸಿ ಯುವತಿಯರ ಮೇಲೆ ಅತ್ಯಾಚಾರ ನಡೆಸಿದ್ದಾರೆ. ನಾಲ್ವರು ದುಷ್ಕರ್ಮಿಗಳನ್ನು ಬಂಧಿಸಲಾಗಿದೆ ಎಂದು ಸಾವಂತ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು