ಮಂಗಳವಾರ, ಆಗಸ್ಟ್ 16, 2022
22 °C
ಪ್ರಧಾನಿ ಮಧ್ಯಪ್ರವೇಶಕ್ಕೆ ವಿರೋಧಪಕ್ಷಗಳ ಒತ್ತಾಯ, ವಿದ್ಯಾರ್ಥಿಗಳಿಂದ ಹೋರಾಟಕ್ಕೆ ಬೆಂಬಲ

ರೈತರ ಪ್ರತಿಭಟನೆಗೆ ‘ಭೀಮ’ಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಿವಿಧ ರಾಜ್ಯಗಳಿಂದ ಬಂದು ದೆಹಲಿ ಗಡಿಯಲ್ಲಿ ಆರು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ವಿವಿಧ ಕ್ಷೇತ್ರಗಳ ಗಣ್ಯರು, ವಿದ್ಯಾರ್ಥಿಗಳು, ಹೋರಾಟಗಾರರು ಬೆಂಬಲ ಸೂಚಿಸಿದ್ದಾರೆ. ಜತೆಗೆ ವಿವಿಧ ರಾಜ್ಯಗಳಲ್ಲೂ ಪ್ರತಿಭಟನೆಗಳು ಆರಂಭವಾಗಿವೆ.

ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಜಾದ್‌ ಅವರು ತಮ್ಮ ನೂರಾರು ಮಂದಿ ಬೆಂಬಲಿಗರೊಂದಿಗೆ ದೆಹಲಿ- ಗಾಜಿಪುರ್‌ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಜತೆಗೆ ಮಂಗಳವಾರ ಸೇರಿಕೊಂಡರು.

‘ನಡುಗುವ ಚಳಿಯಲ್ಲೂ ರೈತರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ನಾವು ಅವರ ಜತೆಗಿದ್ದೇವೆ. ಹೊಸ ಕೃಷಿ ಕಾನೂನುಗಳನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ವಿದ್ಯಾರ್ಥಿಗಳ ಬೆಂಬಲ: ದೆಹಲಿಯ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆಯಲ್ಲಿ ಪಾಲ್ಗೊಂಡು ರೈತರಿಗೆ ಬೆಂಬಲ ಸೂಚಿಸಿದರು.

‘ಹೋರಾಟಕ್ಕೆ ಬೆಂಬಲ ಸೂಚಿಸಿ ನಾವು ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆ ಆರಂಭಿಸಿದ್ದೇವೆ. ಹೊಸ ಕೃಷಿ ಕಾನೂನುಗಳ ಮೂಲಕ ಬಿಜೆಪಿ ನೇತೃತ್ವದ ಸರ್ಕಾರವು ಕಾರ್ಪೊರೇಟ್‌ ಸಂಸ್ಥೆಗಳು ಹಾಗೂ ಶ್ರೀಮಂತ ರೈತರಿಗೆ ಅನುಕೂಲ ಮಾಡಿಕೊಡಲು ಮುಂದಾಗಿದೆ’ ಎಂದು ಕ್ರಾಂತಿಕಾರಿ ಯುವ ಸಂಘಟನ್‌ (ಕೆವೈಎಸ್‌) ಆರೋಪಿಸಿದೆ.

ಈ ನಡುವೆ, ಪ್ರಧಾನಿ ಮಧ್ಯಪ್ರವೇಶಕ್ಕೆ ಹಲವು ನಾಯಕರು ಒತ್ತಾಯಿಸಿದ್ದಾರೆ. ‘ಮೋದಿ ಅವರು ನಾಯಕತ್ವ ವಹಿಸಿಕೊಂಡು, ರೈತರು ಹಾಗೂ ಸರ್ಕಾರದ ನಡುವೆ ಉಂಟಾಗಿರುವ ಬಿಕ್ಕಟ್ಟನ್ನು ಶಮನಗೊಳಿಸಬೇಕು’ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹೇಳಿದ್ದಾರೆ.

‘ಸರ್ಕಾರವು ರೈತರ ಸಂಘಟನೆಗಳನ್ನು ಮಾತುಕತೆಗೆ ಆಹ್ವಾನಿಸಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಈ ನಿರ್ಧಾರ ಕೈಗೊಳ್ಳುವುದು ತುಂಬ ವಿಳಂಬವಾಯಿತು. ರೈತರ ಬೇಡಿಕೆಗಳನ್ನು ಈಡೇರಿಸುವುದು ಅಗತ್ಯ’ ಎಂದು ಟ್ವೀಟ್‌ ಮಾಡಿದ್ದಾರೆ.

ಮಾತುಕತೆ ನಡೆಸಿ: ‘ನೀವು ದೇಶದ ಒಳಿತನ್ನು ಬಯಸುವವರು. ದೇಶಕ್ಕೆ ಒಳ್ಳೆಯದಾಗಬೇಕಾದರೆ ಕೃಷಿ ಕ್ಷೇತ್ರ ಚೆನ್ನಾಗಿರಬೇಕು. ಅದಕ್ಕೆ ರೈತರ ಜತೆಗೆ ಮಾತುಕತೆ ನಡೆಸುವುದು ಅಗತ್ಯ. ಆ ಕೆಲಸವನ್ನು ಸಾಕಷ್ಟು ಮೊದಲೇ ಮಾಡಬೇಕಾಗಿತ್ತು’ ಎಂದು ಮಕ್ಕಳ್‌ ನೀದಿ ಮಯ್ಯಂ ಅಧ್ಯಕ್ಷ, ನಟ ಕಮಲ್‌ಹಾಸನ್‌ ಸಲಹೆ ನೀಡಿದ್ದಾರೆ.

ಅಹವಾಲು ಆಲಿಸಿ: ‘ರೈತರು ದೇಶದ ಜೀವನಾಡಿಗಳು. ಅವರ ಅಹವಾಲುಗಳನ್ನು ಸರ್ಕಾರ ಆಲಿಸಬೇಕು’ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಟ್ವೀಟ್‌ ಮಾಡಿದ್ದಾರೆ.

ಭೂಕಬಳಿಕೆ ಹುನ್ನಾರ: ‘ಆದಾಯವನ್ನು ದ್ವಿಗುಣಗೊಳಿಸುವುದಾಗಿ ರೈತರಿಗೆ ಹುಸಿ ಭರವಸೆ ನೀಡಿದ್ದ ಸರ್ಕಾರವು ಈಗ ಕೃಷಿ ಕಾನೂನುಗಳ ಮೂಲಕ ರೈತರ ಭೂಮಿಯನ್ನು ಹಬಳಿಸುವ ಸಂಚು ರೂಪಿಸಿದೆ’ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಆರೋಪಿಸಿದ್ದಾರೆ.

ಕೇಂದ್ರಕ್ಕೆ ಮೈತ್ರಿ ಪಕ್ಷಗಳ ಸಲಹೆ

ಪ್ರತಿಭಟನಾ ನಿರತ ರೈತರ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳುವಂತೆ ಬಿಜೆಪಿಯ ಮಿತ್ರಪಕ್ಷಗಳು  ಸಲಹೆಗಳನ್ನು ನೀಡಿವೆ.

‘ಹೊಸ ಕೃಷಿ ಕಾನೂನಿನಿಂದ ಕನಿಷ್ಠ ಬೆಂಬಲಬೆಲೆ ವ್ಯವಸ್ಥೆ ನಾಶವಾಗುತ್ತದೆ, ಕೃಷಿ ಉತ್ಪನ್ನಗಳ ಸಂಗ್ರಹದ ಮೇಲೆ ಹೊಸ ಕಾನೂನುಗಳು ವ್ಯತಿರಿಕ್ತ ಪಡಿಣಾಮ ಬೀರುತ್ತವೆ ಎಂಬ ಭಯ ರೈತರಲ್ಲಿದೆ. ಈ ಭಯವನ್ನು ಸರ್ಕಾರ ದೂರಮಾಡಬೇಕು’ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸಲಹೆ ನೀಡಿದ್ದಾರೆ.

‘ಬಿಹಾರದಲ್ಲಿ 2006ರಲ್ಲಿಯೇ ಎಪಿಎಂಸಿಗಳನ್ನು ಮುಚ್ಚಿ, ಪಿಎಸಿಎಸ್‌ ಮೂಲಕ ಕೃಷಿ ಉತ್ಪನ್ನಗಳನ್ನು ಖರೀದಿಸಲಾಗುತ್ತದೆ. ಈ ವ್ಯವಸ್ಥೆ ಬಂದ ಬಳಿಕವೇ ಖರೀದಿ ಪ್ರಮಾಣ ಹೆಚ್ಚಾಗಿದೆ. ಆದ್ದರಿಂದ ಹೊಸ ಕಾನೂನುಗಳ ಬಗ್ಗೆಯಾಗಲಿ, ಬೆಂಬಲ ಬೆಲೆಯ ಬಗ್ಗೆಯಾಗಲಿ ಭಯಪಡುವ ಅಗತ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.

ಲಿಖಿತ ಭರವಸೆ ಕೊಡಿ: ಹೊಸ ಕಾನೂನುಗಳು ಜಾರಿಯಾದರೂ ಕನಿಷ್ಠ ಬೆಂಬಲಬೆಲೆ ವ್ಯವಸ್ಥೆ ರದ್ದಾಗುವುದಿಲ್ಲ ಎಂಬುದನ್ನು ಸರ್ಕಾರ ರೈತರಿಗೆ ಲಿಖಿತ ಭರವಸೆ ನೀಡಬೇಕು ಎಂದು ಹರಿಯಾಣದಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿರುವ ಜನನಾಯಕ ಜನತಾಪಾರ್ಟಿಯ ಅಧ್ಯಕ್ಷ ಅಜಯ್‌ಸಿಂಗ್‌ ಚೌಟಾಲ ಸಲಹೆ ನೀಡಿದ್ದಾರೆ.

ಬೆಂಬಲಬೆಲೆ ವ್ಯವಸ್ಥೆ ಮುಂದುವರಿಯಲಿದೆ ಎಂದು ಪ್ರಧಾನಿಯೇ ಹಲವು ಬಾರಿ ಹೇಳಿದ್ದಾರೆ. ಆದ್ದರಿಂದ ಲಿಖಿತವಾಗಿ ಆ ಭರವಸೆಯನ್ನು ನೀಡಲು ಹಿಂಜರಿಯುವುದೇಕೆ? ಎಂದು ಅವರು ಪ್ರಶ್ನಿಸಿದ್ದಾರೆ.

ಹೊಸ ಕೃಷಿ ಕಾನೂನುಗಳ ವಿಚಾರದಲ್ಲಿ ವಿರೋಧಪಕ್ಷಗಳು ರೈತರ ಹಾದಿ ತಪ್ಪಿಸುತ್ತಿವೆ ಎಂದು ಅಜಯ್‌ಸಿಂಗ್‌ ಈ ಹಿಂದೆ ಆರೋಪಿಸಿದ್ದರು. ಅವರ ಪುತ್ರ, ಉಪಮುಖ್ಯಮಂತ್ರಿ ದುಷ್ಯಂತ್‌ ಚೌಟಾಲ ಅವರು, ‘ಬೆಂಬಲಬೆಲೆ ವ್ಯವಸ್ಥೆ ರದ್ದುಪಡಿಸಿದರೆ ನಾನು ರಾಜೀನಾಮೆ ನೀಡುತ್ತೇನೆ’ ಎಂದೂ ಹೇಳಿದ್ದರು.

ಬಿಲ್ಕಿಸ್‌ ಬಾನುಗೆ ತಡೆ

ಪೌರತ್ವ ಕಾನೂನನ್ನು ವಿರೋಧಿಸಿ ಶಾಹೀನ್‌ಬಾಗ್‌ನಲ್ಲಿ ನಡೆದಿದ್ದ ಸುದೀರ್ಘ ಹೋರಾಟದ ಮುಂಚೂಣಿಯಲ್ಲಿದ್ದ ಬಿಲ್ಕಿಸ್‌ ಬಾನು (ಬಿಲ್ಕಿಸ್‌ ದೀದಿ) ಅವರನ್ನು ಪೊಲೀಸರು ತಡೆದು ಪುನಃ ಮನೆಗೆ ಕಳುಹಿಸಿದ ಘಟನೆ ಮಂಗಳವಾರ ನಡೆದಿದೆ.

ರೈತರಿಗೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು 82 ವರ್ಷ ವಯಸ್ಸಿನ ಬಿಲ್ಕಿಸ್ ಬಾನು ಅವರು ದೆಹಲಿ– ಹರಿಯಾಣ ಗಡಿಭಾಗದ ಸಿಂಘುಗೆ ಬಂದಿದ್ದರು. ಆದರೆ ಅಲ್ಲಿ ಅವರನ್ನು ಪೊಲೀಸರು ತಡೆದರು.

‘ಸಿಂಘು ಗಡಿಯಲ್ಲಿ ಬಿಲ್ಕಿಸ್‌ ಅವರನ್ನು ತಡೆದು ದೆಹಲಿಯಲ್ಲಿರುವ ಅವರ ಮನೆಗೆ ವಾಪಸ್‌ ಕಳುಹಿಸಲಾಗಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹರಿಯಾಣದಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದ ಪಕ್ಷೇತರ ಅಭ್ಯರ್ಥಿ ಸೋಂಬಿರ್‌ ಸಂಗ್ವಾನ್‌ ಅವರು ಬಿಜೆಪಿಗೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿದ್ದಾರೆ. ‘ರೈತರಿಗೆ ಸಹಾನುಭೂತಿ ತೋರಿಸುವುದಕ್ಕೆ ಸೀಮಿತವಾಗದೆ, ರೈತವಿರೋಧಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ನಾನು ಹಿಂತೆಗೆದುಕೊಳ್ಳುತ್ತೇನೆ’ ಎಂದು ಅವರು ಹೇಳಿದ್ದಾರೆ.

ಪ್ರಶಸ್ತಿ ಮರಳಿಸಲು ತೀರ್ಮಾನ

ಪದ್ಮಶ್ರೀ, ಅರ್ಜುನ ಸೇರಿದಂತೆ ತಾವು ಪಡೆದ ಪ್ರಶಸ್ತಿಗಳನ್ನು ಸರ್ಕಾರಕ್ಕೆ ವಾಪಸ್‌ ಕೊಡುವ ಮೂಲಕ ರೈತರ ಹೋರಾಟವನ್ನು ಬೆಂಬಲಿಸಲು ಪಂಜಾಬ್‌ನ ಕೆಲವು ಮಾಜಿ ಕ್ರೀಡಾಪಟುಗಳು ತೀರ್ಮಾನಿಸಿದ್ದಾರೆ.

ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತ ಕುಸ್ತಿಪಟು ಕರ್ತಾರ್‌ ಸಿಂಗ್‌,  ಅರ್ಜುನ ಪ್ರಶಸ್ತಿ ಪುರಸ್ಕೃತರಾದ ಬ್ಯಾಸ್ಕೆಟ್‌ಬಾಲ್‌ ಪಟು ಸಜ್ಜನ್‌ಸಿಂಗ್‌ ಚೀಮಾ, ಹಾಕಿ ಆಟಗಾರ ರಾಜ್‌ಬೀರ್‌ ಕೌರ್‌ ಅವರು ಪ್ರಶಸ್ತಿ ಮರಳಿಸಲು ಮುಂದಾಗಿದ್ದಾರೆ.

ಪ್ರತಿಭಟನಾನಿರತ ರೈತರ ಮೇಲೆ ಜಲಫಿರಂಗಿ ಹಾಗೂ ಆಶ್ರುವಾಯು ಶೆಲ್‌ಗಳನ್ನು ಬಳಸಿದ್ದನ್ನು ವಿರೋಧಿಸಿರುವ ಈ ಕ್ರೀಡಾಪಟುಗಳು, ‘ಡಿ.5ರಂದು ದೆಹಲಿಗೆ ತೆರಳಿ ನಾವು ಪಡೆದ ಪ್ರಶಸ್ತಿಗಳನ್ನು ರಾಷ್ಟ್ರಪತಿಭವನದ ಹೊರಗೆ ಇಟ್ಟು ಬರುತ್ತೇವೆ. ಅನೇಕ ಮಾಜಿ ಕ್ರೀಡಾಪಟುಗಳು ನಮ್ಮ ಈ ತೀರ್ಮಾನಕ್ಕೆ ಬೆಂಬಲ ಸೂಚಿಸಿದ್ದಾರೆ’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು