ಶುಕ್ರವಾರ, ಜನವರಿ 27, 2023
27 °C
ದೆಹಲಿ ಅಬಕಾರಿ ನೀತಿ ಹಗರಣ: ಆರೋಪಿ ವಿಜಯ್‌ ನಾಯರ್‌ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌

ಮಾಧ್ಯಮಗಳಲ್ಲಿ ಬರುವ ಸುದ್ದಿ ಸಿಬಿಐ, ಇ.ಡಿ ಮಾಹಿತಿ ಆಧರಿಸಿರಲಿ: ದೆಹಲಿ ಹೈಕೋರ್ಟ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಬಿತ್ತರಿಸಲಾಗುವ ಸುದ್ದಿಗಳು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕೃತ ಪತ್ರಿಕಾ ಪ್ರಕಟಣೆಗಳನ್ನು ಆಧರಿಸಿರಬೇಕು’ ಎಂದು ದೆಹಲಿ ಹೈಕೋರ್ಟ್‌, ಕೆಲ ಮಾಧ್ಯಮ ಸಂಸ್ಥೆಗಳಿಗೆ ಸೋಮವಾರ ತಾಕೀತು ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ತನಿಖಾ ಸಂಸ್ಥೆಗಳು ಮಾಧ್ಯಮಗಳಿಗೆ ಸೋರಿಕೆ ಮಾಡಿವೆ. ಅದರಿಂದ ತನ್ನ ಹಕ್ಕಿಗೆ ಧಕ್ಕೆಯಾಗಿದೆ ಎಂದು ಪ್ರಕರಣದ ಆರೋಪಿ ವಿಜಯ್‌ ನಾಯರ್‌ ದೂರಿದ್ದರು. ಈ ಸಂಬಂಧ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಯಶವಂತ್‌ ವರ್ಮಾ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.

ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಸುದ್ದಿಯು ಇ.ಡಿ ಮತ್ತು ಸಿಬಿಐ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಗಳನ್ನು ಆಧರಿಸಿಲ್ಲ ಎಂದು ಹೇಳಿದ ನ್ಯಾಯಮೂರ್ತಿ ಯಶವಂತ್‌ ಅವರು ಅರ್ಜಿಯಲ್ಲಿ ಉಲ್ಲೇಖಿಸಲಾಗಿದ್ದ ಮಾಧ್ಯಮ ಸಂಸ್ಥೆಗಳಿಗೆ ನೋಟಿಸ್‌ ಜಾರಿಗೊಳಿಸಿದರು.

‘ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಸುದ್ದಿಗಳು ನಮ್ಮ ಅಧಿಕೃತ ಪ್ರಕಟಣೆಗಳನ್ನು ಆಧರಿಸಿಲ್ಲ’ ಎಂದು ಜಾರಿ ನಿರ್ದೇಶನಾಲಯವು ನ್ಯಾಯಪೀಠಕ್ಕೆ ತಿಳಿಸಿತು. 

ಪ್ರಕರಣಕ್ಕೆ ಸಂಬಂಧಪಟ್ಟಂತೆ ತಾನು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪ್ರಕಟಣೆಗಳನ್ನು ಸಿಬಿಐ, ನ್ಯಾಯಾಲಯಕ್ಕೆ ಸಲ್ಲಿಸಿತು. ಅದನ್ನು ಪರಿಶೀಲಿಸಿದ ನ್ಯಾಯಾಮೂರ್ತಿಯವರು ಈಗಾಗಲೇ ಪ್ರಸಾರವಾಗಿರುವ ಸುದ್ದಿಗಳಿಗೂ ಈ ಪ್ರಕಟಣೆಯಲ್ಲಿ ನೀಡಲಾಗಿರುವ ಮಾಹಿತಿಗಳಿಗೂ ಸಂಬಂಧವೇ ಇಲ್ಲ. ತನಿಖಾ ಸಂಸ್ಥೆಗಳು ಮಾಧ್ಯಮಗಳಿಗೆ ಯಾವುದೇ ಮಾಹಿತಿ ಸೋರಿಕೆ ಮಾಡಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಹೇಳಿದರು.

‘ಮಾಧ್ಯಮಗಳಲ್ಲಿ ಬಿತ್ತರವಾಗಿರುವ ಸುದ್ದಿಗಳು ತನಿಖಾ ಸಂಸ್ಥೆಗಳ ಅಧಿಕೃತ ಪ್ರಕಟಣೆಗಳನ್ನು ಆಧರಿಸಿಲ್ಲ. ಹೀಗಿದ್ದ ಮೇಲೆ ಆ ಸುದ್ದಿಗಳ ಮೂಲ ಯಾವುದು. ಆ ಸಂಸ್ಥೆಗಳ ವಿರುದ್ಧ ಯಾವ ಬಗೆಯ ಕ್ರಮ ಕೈಗೊಂಡಿದ್ದೀರಿ ಎಂದು ನ್ಯಾಯಾಲಯವು ದಿ ನ್ಯೂಸ್‌ ಬ್ರಾಡ್‌ಕಾಸ್ಟರ್ಸ್‌ ಆ್ಯಂಡ್‌ ಡಿಜಿಟಲ್‌ ಅಸೋಸಿಯೇಷನ್‌ಗೆ (ಎನ್‌ಬಿಡಿಎ) ಪ್ರಶ್ನಿಸಿತು. 

‘ಮಾಧ್ಯಮಗಳನ್ನು ನಿರ್ಬಂಧಿಸುವ ಅಧಿಕಾರ ತಮಗೆ ಇಲ್ಲ’ ಎಂದು ಎನ್‌ಬಿಡಿಎ ಪರ ವಕೀಲರು ನ್ಯಾಯಾಲಯಕ್ಕೆ ಹೇಳಿದರು. 

‘ಎನ್‌ಬಿಡಿಎಯನ್ನು ನಾವು ವಿಸರ್ಜಿಸಬೇಕೆ. ಸ್ವಯಂ ನಿಯಂತ್ರಣ ಎಂಬುದು ಕಣ್ಣಾಮುಚ್ಚಾಲೆ ಆಗಿದ್ದಲ್ಲಿ ಎನ್‌ಬಿಡಿಎಯನ್ನು ಏಕೆ ವಿಸರ್ಜಿಸಬಾರದು. ಸೂಕ್ಷ್ಮ ಮಾಹಿತಿಗಳು ಸುದ್ದಿ ವಾಹಿನಿಗಳಿಗೆ ಹೇಗೆ ದೊರೆತವು’ ಎಂದು ಪ್ರಶ್ನಿಸಿತು. 

ಈ ಸಂಬಂಧ ವಿವರವಾದ ವರದಿ ಸಲ್ಲಿಸುವಂತೆ ಎನ್‌ಬಿಡಿಎಗೆ ಸೂಚಿಸಿದ ನ್ಯಾಯಾಲಯವು ವಿಚಾರಣೆಯನ್ನು ಫೆಬ್ರುವರಿಗೆ ಮುಂದೂಡಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು