ಬುಧವಾರ, ಮೇ 19, 2021
22 °C

ನ್ಯಾಯಾಂಗ ನಿಂದನೆ ದಾಖಲಿಸಬೇಕೇ: ಕೇಂದ್ರಕ್ಕೆ ದೆಹಲಿ ಹೈಕೋರ್ಟ್‌ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

dh file

ನ‌ವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಆಸ್ಪತ್ರೆಗಳಿಗೆ ಅಗತ್ಯವಾದ ಆಮ್ಲಜನಕ ಪೂರೈಸಲು ವಿಫಲವಾಗಿರುವ ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಏಕೆ ದಾಖಲಿಸಿಕೊಳ್ಳಬಾರದು ಎಂದು ದೆಹಲಿ ಹೈಕೋರ್ಟ್‌ ಮಂಗಳವಾರ ಪ್ರಶ್ನಿಸಿದೆ. ‘ನೀವು ನಿಮ್ಮ ತಲೆಯನ್ನು ಆಸ್ಟ್ರಿಚ್‌ ಪಕ್ಷಿಯಂತೆ ಮರಳಿನಲ್ಲಿ ಹೂತಿಡಬಹುದು. ಆದರೆ ನಾವು ಹಾಗೆ ಮಾಡಲಾಗದು’ ಎಂದು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರ ಪೀಠವು ಹೇಳಿದೆ. 

ದೆಹಲಿಗೆ ಪ್ರತಿ ದಿನ 700 ಟನ್‌ ಆಮ್ಲಜನಕ ಕೊಡಲಾಗದು ಎಂದು ಕೇಂದ್ರದ ಪರವಾಗಿ ವಾದಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಚೇತನ್‌ ಶರ್ಮಾ ಹೇಳಿದ್ದು ಪೀಠವನ್ನು ಕೆರಳಿಸಿತು.

‘ನೀವು ಈ ನಗರದಲ್ಲಿಯೇ ವಾಸಿಸುತ್ತಿದ್ದೀರಿ ಮತ್ತು ಪರಿಸ್ಥಿತಿಯನ್ನು ನೋಡುತ್ತಿದ್ದೀರಿ. ಹಾಗಿದ್ದರೂ ನಿಮಗೆ ಗೊತ್ತಿಲ್ಲ. ನೀವೇನು ದಂತ ಗೋಪುರದಲ್ಲಿ ಇದ್ದೀರಾ’ ಎಂದು ಪೀಠವು ಪ್ರಶ್ನಿಸಿತು. 

ದಿನಕ್ಕೆ 700 ಟನ್‌ ಆಮ್ಲಜನಕ ಪೂರೈಸುವಂತೆ ಸುಪ್ರೀಂ ಕೋರ್ಟ್‌ ಈಗಾಗಲೇ ನಿರ್ದೇಶನ ನೀಡಿದೆ. ಈಗ ಹೈಕೋರ್ಟ್‌ ಕೂಡ ಅದನ್ನೇ ಹೇಳುತ್ತಿದೆ. ಏನಾದರೂ ಮಾಡಿ, ದೆಹಲಿಗೆ 700 ಟನ್‌ ಆಮ್ಲಜನಕ ಪೂರೈಸಿ ಎಂದು ನ್ಯಾಯಮೂರ್ತಿಗಳು ಹೇಳಿದರು. 

‘ಈಗ ನೀಡುತ್ತಿರುವಂತೆ 490 ಟನ್‌ ಅಲ್ಲ, ಪ್ರತಿ ದಿನ 700 ಟನ್‌ ಆಮ್ಲಜನಕ ಒದಗಿಸಬೇಕು ಎಂದು ಏಪ್ರಿಲ್‌ 30ರಂದು ವಿವರವಾದ ಆದೇಶವನ್ನು ಸುಪ್ರೀಂ ಕೋರ್ಟ್‌ ನೀಡಿದೆ. ನ್ಯಾಯಾಂಗ ನಿಂದನೆ ನಮ್ಮಲ್ಲಿರುವ ಕೊನೆಯ ಅಸ್ತ್ರ. ಆದರೆ, ಆ ವಿಚಾರ ನಮ್ಮ ತಲೆಯಲ್ಲಿ ಖಂಡಿತವಾಗಿಯೂ ಇದೆ. ಅಲ್ಲಿಯ ತನಕ ಹೋಗುವಂತೆ ಮಾಡಬೇಡಿ. ಈವರೆಗೆ ಆಗಿರುವುದು ಸಾಕಾಗಿದೆ. ಇದು ಕಾರ್ಯರೂಪಕ್ಕೆ ಬರಬೇಕಾದ ಮಾತು. ದೆಹಲಿಗೆ ದಿನಕ್ಕೆ 700 ಟನ್‌ ಆಮ್ಲಜನಕ ಪೂರೈಸುವ ವಿಚಾರದಲ್ಲಿ ‘ಇಲ್ಲ’ ಎಂಬುದನ್ನು ನಾವು ಕೇಳಿಸಿಕೊಳ್ಳುವುದೇ ಇಲ್ಲ’ ಎಂದು ಹೈಕೋರ್ಟ್ ಹೇಳಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು