ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾಂಗ್‌ಸ್ಟರ್‌ಗೆ ಜಾಮೀನು ನೀಡದ್ದಕ್ಕೆ ವಾಹನ ಗುದ್ದಿಸಿ ನ್ಯಾಯಾಧೀಶರ ಹತ್ಯೆ!

ಜಾರ್ಖಂಡ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಜತೆ ಪ್ರಕರಣದ ಕುರಿತು ‘ಸುಪ್ರೀಂ’ ಮುಖ್ಯ ನ್ಯಾಯಮೂರ್ತಿ ಚರ್ಚೆ
Last Updated 29 ಜುಲೈ 2021, 18:56 IST
ಅಕ್ಷರ ಗಾತ್ರ

ರಾಂಚಿ:ಜಾರ್ಖಂಡ್‌ನ ಧನಬಾದ್ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಉತ್ತಮ್ ಆನಂದ್ ಅವರ ಸಾವಿನ ತನಿಖೆಗೆ ಜಾರ್ಖಂಡ್ ಹೈಕೋರ್ಟ್‌ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ಬುಧವಾರ ಬೆಳಿಗ್ಗೆ ಅಪಘಾತದಲ್ಲಿ ಅವರು ಮೃತಪಟ್ಟಿದ್ದರು. ಅದು ಪೂರ್ವಯೋಜಿತ ಕೊಲೆ ಎಂಬ ಅನುಮಾನ ವ್ಯಕ್ತವಾಗಿರುವ ಕಾರಣ ಎಸ್‌ಐಟಿ ತನಿಖೆಗೆ ಆದೇಶಿಸಲಾಗಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಉತ್ತಮ್ ಆನಂದ್ ಅವರು ಧನಬಾದ್ ಪಟ್ಟಣದ ಜಡ್ಜಸ್ ಕಾಲೊನಿಯಲ್ಲಿ ಬುಧವಾರ ಬೆಳಿಗ್ಗೆ 5 ಗಂಟೆಯಲ್ಲಿ ಜಾಗಿಂಗ್ ಹೊರಟಿದ್ದರು. ಆಗ ವಾಹನವೊಂದು ಡಿಕ್ಕಿ ಹೊಡೆದು, ಪರಾರಿಯಾಗಿತ್ತು.ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ದಾರಿಹೋಕರೊಬ್ಬರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆ ತಲುಪುವ ಮುನ್ನವೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ಘೋಷಿಸಿದ್ದರು.

ಬೆಳಿಗ್ಗೆ 7 ಗಂಟೆಯಾದರೂ ಉತ್ತಮ್ ಆನಂದ್ ಅವರು ಮನೆಗೆ ಬರದೇ ಇದ್ದ ಕಾರಣ, ಅವರ ಪತ್ನಿ ಪೊಲೀಸರಿಗೆ ತಮ್ಮ ಪತಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಬೆಳಿಗ್ಗೆ 10ರ ವೇಳೆಗೆ ಅಪಘಾತದಲ್ಲಿ ಅವರು ಮೃತಪಟ್ಟಿರುವುದು ಪತ್ತೆಯಾಯಿತು. ಆದರೆ ಸಂಜೆ 5ರ ಹೊತ್ತಿಗೆ ಅಪಘಾತದ ವಿಡಿಯೊ ವೈರಲ್ ಆಗಿತ್ತು.

ನಿರ್ಜನವಾಗಿದ್ದ ರಸ್ತೆಯಲ್ಲಿ ಉತ್ತಮ್ ಆನಂದ್ ಅವರು ಜಾಗಿಂಗ್ ಮಾಡುತ್ತಿದ್ದರು. ಅದೇ ರಸ್ತೆಯಲ್ಲಿ ಬಂದ ಆಟೊರಿಕ್ಷಾವೊಂದು ಉತ್ತಮ್ ಆನಂದ್ ಅವರಿಗೆ ಡಿಕ್ಕಿ ಹೊಡೆಯಿತು. ನಂತರ ಅಲ್ಲಿಂದ ಪರಾರಿಯಾಯಿತು. ಈ ವಿಡಿಯೊ ವೈರಲ್ ಆದ ನಂತರ ಆನಂದ್ ಅವರ ಪತ್ನಿ ಕೊಲೆ ದೂರು ದಾಖಲಿಸಿದರು. ಆದರೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಲು ನಿರಾಕರಿಸಿದರು.

ಗುರುವಾರ ಬೆಳಿಗ್ಗೆ ಜಾರ್ಖಂಡ್ ವಕೀಲರ ಸಂಘವು ಜಾರ್ಖಂಡ್ ಹೈಕೋರ್ಟ್‌ನ ಗಮನಕ್ಕೆ ಈ ವಿಷಯವನ್ನು ತಂದಿತು. ಅದೇ ಸಮಯದಲ್ಲಿ ಸುಪ್ರೀಂ ಕೋರ್ಟ್ ವಕೀಲರ ಸಂಘವೂ ಈ ವಿಚಾರವನ್ನು, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರಿದ್ದ ಪೀಠದ ಗಮನಕ್ಕೆ ತಂದಿತು. ಆ ವೇಳೆಗೆ ಧನಬಾದ್ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿದ್ದರು. ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ ಕಾರಣಕ್ಕೆ ಧನಬಾದ್ ಪೊಲೀಸರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.

ಅಪಘಾತ ನಡೆಸಿದ್ದ ಆಟೊಚಾಲಕ ಮತ್ತು ಆತನ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ಆಟೊರಿಕ್ಷಾವನ್ನು ವಶಕ್ಕೆ ಪಡೆದಿದ್ದಾರೆ.

ಜಾಮೀನು ನೀಡದ್ದಕ್ಕೆ ಹತ್ಯೆ?

ಉತ್ತಮ್ ಆನಂದ್ ಅವರ ಸಾವು ಪೂರ್ವಯೋಜಿತ ಕೊಲೆ ಎಂದು ಜಾರ್ಖಂಡ್ ವಕೀಲರ ಸಂಘ ಅನುಮಾನ ವ್ಯಕ್ತಪಡಿಸಿದೆ. ‘ಹಲವು ಅಪರಾಧ ಪ್ರಕರಣಗಳಲ್ಲಿ ಅವರು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿದ್ದರು. ಈಚೆಗೆ ಇಬ್ಬರು ದೊಡ್ಡ ಗ್ಯಾಂಗ್‌ಸ್ಟರ್‌ಗಳ ಜಾಮೀನು ಅರ್ಜಿಯನ್ನು ಅವರು ತಿರಸ್ಕರಿಸಿದ್ದರು. ಜಾಮೀನು ನೀಡದಿದ್ದ ಕಾರಣಕ್ಕೇ ಅವರನ್ನು ಕೊಲೆ ಮಾಡಿರುವ ಸಾಧ್ಯತೆ ಇದೆ’ ಎಂದು ಜಾರ್ಖಂಡ್ ಹೈಕೋರ್ಟ್‌ಗೆ ಬರೆದ ಪತ್ರದಲ್ಲಿ ಸಂಘವು ಅನುಮಾನ ವ್ಯಕ್ತಪಡಿಸಿದೆ.

ಈ ಪತ್ರ ಮತ್ತು ವೈರಲ್ ಆದ ವಿಡಿಯೊ ಆಧಾರದಲ್ಲಿ ಎಸ್‌ಐಟಿ ತನಿಖೆಗೆ ಹೈಕೋರ್ಟ್‌ ಆದೇಶಿಸಿದೆ.

ಸುಪ್ರೀಂ ಕೋರ್ಟ್‌ನಲ್ಲಿಯೂ ಇದೇ ಅಭಿಪ್ರಾಯ ವ್ಯಕ್ತವಾಗಿದ್ದು, ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರು ಜಾರ್ಖಂಡ್ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರವಿ ರಂಜನ್ ಅವರಿಗೆ ಕರೆ ಮಾಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದಿದ್ದಾರೆ. ತನಿಖೆ ಸರಿಯಾಗಿ ನಡೆಯಬೇಕು ಎಂದು ಹೇಳಿದ್ದಾರೆ. ‘ನ್ಯಾಯಾಲಯವೇ ತನಿಖೆಯ ಮೇಲ್ವಿಚಾರಣೆ ನಡೆಸಲಿದೆ’ ಎಂದು ರವಿ ರಂಜನ್ ಅವರು ಮಾಹಿತಿ ನೀಡಿದ್ದಾರೆ.

‘ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಇದು ಅಪಘಾತವೋ ಅಥವಾ ಕೊಲೆಯೋ ಎಂಬುದನ್ನು ಪತ್ತೆ ಮಾಡಿ. ಕೊಲೆಯೇ ಆಗಿದ್ದರೆ ಸಂಚು ರೂಪಿಸಿದವರು ಯಾರು ಎಂಬುದನ್ನು ಪತ್ತೆ ಮಾಡಿ’ ಎಂದು ಜಾರ್ಖಂಡ್ ಪೊಲೀಸ್ ಮಹಾ ನಿರ್ದೇಶಕರಿಗೆ ಜಾರ್ಖಂಡ್ ಹೈಕೋರ್ಟ್‌ ಸೂಚನೆ ನೀಡಿದೆ.

***

ಇದು ನ್ಯಾಯಾಂಗದ ಮೇಲೆ ನಡೆದ ಹೀನ ದಾಳಿ. ಜಾಮೀನು ನೀಡದೇ ಇದ್ದ ಕಾರಣಕ್ಕೆ ಹತ್ಯೆ ನಡೆದಿರುವ ಅನುಮಾನವಿದೆ. ‌ ಸಿಬಿಐ ತನಿಖೆಗೆ ಒಪ್ಪಿಸಬೇಕು

- ವಿಕಾಸ್ ಸಿಂಗ್, ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷ

***
ಎಸ್‌ಐಟಿ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿಲ್ಲ ಎಂದು ನ್ಯಾಯಾಲಯಕ್ಕೆ ಭಾಸವಾದರೆ, ತಕ್ಷಣವೇ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗುತ್ತದೆ

- ರವಿ ರಂಜನ್, ಜಾರ್ಖಂಡ್ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT