ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀದಿಯಿಂದ ಮುಸ್ಲಿಮರ ಮತಯಾಚನೆ: ನಾವು ಹಿಂದೂಗಳ ಮತ ಕೇಳಿದರೆ ಟೀಕಿಸುತ್ತಾರೆ: ಮೋದಿ

Last Updated 6 ಏಪ್ರಿಲ್ 2021, 11:01 IST
ಅಕ್ಷರ ಗಾತ್ರ

ಕೂಚ್ ಬೆಹರ್ (ಬಿಹಾರ):ಮುಸ್ಲಿಮರು ಟಿಎಂಸಿಗೆ ಮತ ಚಲಾಯಿಸುವಂತೆ ಕೋರಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ಮೋದಿ, ನಮ್ಮ ಪಕ್ಷ ಹಿಂದೂಗಳಿಗೆ ಇದೇ ರೀತಿ ಮತ ಚಲಾಯಿಸುವಂತೆ ಮನವಿ ಮಾಡಿದ್ದರೆ ಅದನ್ನು ಟೀಕಿಸುತ್ತಾರೆ ಎಂದು ಹೇಳಿದ್ದಾರೆ.

ಜನರು ತಿಲಕ ಇಡುವುದು ಮತ್ತು ಕೇಸರಿ ಧರಿಸುವುದರಲ್ಲಿ ಮಮತಾ ಬ್ಯಾನರ್ಜಿಯವರಿಗೆ ಸಮಸ್ಯೆಗಳಿವೆ ಎಂದು ಪ್ರತಿಪಾದಿಸಿದ ಅವರು, ಮುಸ್ಲಿಮರು ಮತ ನೀಡುವಂತೆ ಟಿಎಂಸಿ ಮುಖ್ಯಸ್ಥೆ ಮಾಡಿರುವ ಮನವಿಯು, 'ಅಲ್ಪಸಂಖ್ಯಾತರ ಮತಗಳು ಅವರ ಕೈಯಿಂದ ಜಾರುತ್ತಿವೆ' ಎನ್ನುವುದನ್ನು ಸೂಚಿಸುತ್ತದೆ ಎಂದು ಹೇಳಿದರು.

ಪಶ್ಚಿಮ ಬಂಗಾಳದಾದ್ಯಂತ ಬಿಜೆಪಿ ಅಲೆಯು ಬೀಸುತ್ತಿದೆ ಮತ್ತು ನಮ್ಮ ಪಕ್ಷವೇ ಮುಂದಿನ ಸರ್ಕಾರವನ್ನು ರಚಿಸುತ್ತದೆ. ಬ್ಯಾನರ್ಜಿ ಅವರು ನೀಡುವ ಕೋಪದ ಪ್ರತಿಕ್ರಿಯೆಗಳು ಆಕೆ ಚುನಾವಣೆಯಲ್ಲಿ ಸೋತಿದ್ದಾರೆ ಎಂಬುದನ್ನು ಸೂಚಿಸುತ್ತದೆ ಎಂದು ಮೋದಿ ವಾಗ್ದಾಳಿ ನಡೆಸಿದರು.

ಇಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ದೀದಿ ಇತ್ತೀಚೆಗಷ್ಟೇ ಎಲ್ಲಾ ಮುಸ್ಲಿಮರಿಗೆ ತಮ್ಮ ಪಕ್ಷಕ್ಕೆ ಮತ ಚಲಾಯಿಸುವಂತೆ ಕೇಳಿಕೊಂಡರು. ಇದನ್ನು ನೋಡಿದರೆ ಮುಸ್ಲಿಂ ಮತ ಬ್ಯಾಂಕ್ ಆಕೆಯ ಕೈಯಿಂದ ಜಾರಿಬೀಳುತ್ತಿದೆ ಎಂಬುದು ತಿಳಿಯುತ್ತದೆ. ಎಲ್ಲಾ ಹಿಂದೂಗಳು ಒಂದಾಗಬೇಕೆಂಬ ಒಂದೇ ಮಾತನ್ನು ನಾವು ಹೇಳಿದ್ದರೆ, ಎಲ್ಲರೂ ನಮ್ಮನ್ನು ಟೀಕಿಸುತ್ತಿದ್ದರು. ಚುನಾವಣಾ ಆಯೋಗ ನಮಗೆ ನೋಟಿಸ್ ಕಳುಹಿಸುತ್ತಿತ್ತು. ನಾವು ತಪ್ಪಿತಸ್ಥರಾಗುತ್ತಿದ್ದೆವು' ಎಂದು ಹೇಳಿದರು.

ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ವಿಜಯ ದಾಖಲಿಸಿದೆ ಎಂದು ಭವಿಷ್ಯ ನುಡಿಯಲು ಪ್ರಧಾನಿ ನರೇಂದ್ರ ಮೋದಿ ಯಾರು? ದೇವರು ಅಥವಾ ಸೂಪರ್ ಹ್ಯೂಮನ್ ಆಗಿದ್ದಾರೆಯೇ ಎಂದು ಪ್ರಶ್ನಿಸಿದ್ದ ಮಮತಾ ವಿರುದ್ದ ಕಿಡಿಕಾರಿದ ಮೋದಿ, ಬಿಜೆಪಿ ಅಲೆಯು ಹೆಚ್ಚಾಗುತ್ತಿರುವುದರಿಂದಾಗಿ ಬಿಜೆಪಿಯ ವಿಜಯವನ್ನು ಊಹಿಸಲು ಯಾರೂ ಅತಿಮಾನುಷರಾಗಿರಬೇಕಿಲ್ಲ'. 'ದೀದಿ ನಿರ್ಗಮನ ಸನ್ನಿಹಿತವಾಗಿದೆ. ಮತದಾನದ ಮೊದಲ ಎರಡು ಹಂತಗಳ ನಂತರ ಅದು ಸ್ಪಷ್ಟವಾಗಿದೆ' ಎಂದು ಅವರು ಹೇಳಿದರು.

ಹಣಕ್ಕಾಗಿ ತಮ್ಮ ರ‍್ಯಾಲಿಗಳಿಗೆ ಜನರು ಬರುತ್ತಾರೆ ಎಂದು ಆರೋಪಿಸಿ ಬ್ಯಾನರ್ಜಿ ಅವರು ಬಂಗಾಳಿಗಳ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ. ಟಿಎಂಸಿ ಅತಿರೇಕದ ಭ್ರಷ್ಟಾಚಾರದಲ್ಲಿ ತೊಡಗಿದೆ. 'ದೀದಿ ಬಂಗಾಳದಲ್ಲಿ ಹೊಸ ತೆರಿಗೆ 'ಭೈಪೋ ಸೇವಾ ತೆರಿಗೆ'ಯನ್ನು ಪ್ರಾರಂಭಿಸಿದ್ದಾರೆ!' ಎಂದು ದೂರಿದರು.

10 ವರ್ಷಗಳಿಂದ ನಿಮ್ಮ ಗೂಂಡಾಗಳು ಬಂಗಾಳವನ್ನು ಲೂಟಿ ಮಾಡುತ್ತಲೇ ಇದ್ದರು ಮತ್ತು ನೀವು ಮೂಕ ಪ್ರೇಕ್ಷಕರಾಗಿದ್ದೀರಿ. 10 ವರ್ಷಗಳಿಂದ ಉತ್ತರ ಬಂಗಾಳದಲ್ಲಿ ಅನ್ಯಾಯ ಮುಂದುವರೆದಿದೆ, ಆದರೂ ನೀವು ಮೂಕ ಪ್ರೇಕ್ಷಕರಾಗಿರುವುದನ್ನು ಆಯ್ಕೆ ಮಾಡಿಕೊಂಡಿದ್ದೀರಿ'. ಸೋಲನ್ನು ಗ್ರಹಿಸಿರುವ ದೀದಿ, ಇಸಿಯಿಂದ ಇವಿಎಂವರೆಗಿನ ಎಲ್ಲವನ್ನೂ ಎಲ್ಲರನ್ನೂ ಟೀಕಿಸುತ್ತಿದ್ದಾರೆ ಎಂದು ಮೋದಿ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT