ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಲಭೆಗೆ ದಿಶಾ ನಂಟು: ಪುರಾವೆ ಏನಿದೆ?: ದೆಹಲಿ ಪೊಲೀಸರಿಗೆ ನ್ಯಾಯಾಧೀಶರ ಪ್ರಶ್ನೆ

Last Updated 20 ಫೆಬ್ರುವರಿ 2021, 21:40 IST
ಅಕ್ಷರ ಗಾತ್ರ

ನವದೆಹಲಿ: ‘ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ಹಿಂಸಾಚಾರದ ಜತೆಗೆ ಈ ಯುವತಿಗೆ (ದಿಶಾ ರವಿ) ನಂಟು ಇದೆ ಎಂಬುದನ್ನು ತೋರಿಸುವ ಯಾವ ಪುರಾವೆ ನಿಮ್ಮ ಬಳಿ ಇದೆ’ ಎಂದು ಟೂಲ್‌ಕಿಟ್‌ ಪ್ರಕರಣದಲ್ಲಿ ದೆಹಲಿ ಪೊಲೀಸರ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ. ರಾಜು ಅವರನ್ನು ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಧರ್ಮೇಂದ್ರ ರಾಣಾ ಪ್ರಶ್ನಿಸಿದ್ದಾರೆ.

ರೈತರ ಪ್ರತಿಭಟನೆಗೆ ಬೆಂಬಲ ಕ್ರೋಡೀಕರಿಸಲು ಟೂಲ್‌ಕಿಟ್‌ ಸಿದ್ಧಪಡಿಸಿ ಹಂಚಿಕೊಂಡ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರ ಜಾಮೀನು ಅರ್ಜಿಯ ವಿಚಾರಣೆ ಶನಿವಾರ ನಡೆಯಿತು. ದಿಶಾ ಮೇಲೆ ಹೊರಿಸಲಾಗಿರುವ ಆರೋಪಗಳ ಬಗ್ಗೆ ನ್ಯಾಯಾಲಯದ ಆತ್ಮಸಾಕ್ಷಿಯನ್ನು ತೃಪ್ತಿಪಡಿಸಬೇಕು ಎಂದು ರಾಜು ಅವರಿಗೆ ನ್ಯಾಯಾಧೀಶರು ಹೇಳಿದರು.

ನಿಷೇಧಿತ ಸಂಘಟನೆ ‘ಸಿಖ್ಸ್‌ ಫಾರ್‌ ಜಸ್ಟಿಸ್‌’ನೊಂದಿಗೆ ನಂಟು ಇರುವ ವ್ಯಕ್ತಿಗಳ ಜತೆಗೆ ದಿಶಾ ಅವರು ನಿರಂತರ ಸಂಪರ್ಕದಲ್ಲಿದ್ದರು. ಅವರು ಸಾಕ್ಷ್ಯ ನಾಶಕ್ಕೂ ಯತ್ನಿಸಿದ್ದಾರೆ ಎಂದು ರಾಜು ವಾದಿಸಿದರು.

ಆದರೆ, ‘ಅಂತಹ ವ್ಯಕ್ತಿಗಳ ಜತೆಗೆ ಸಂಪರ್ಕದಲ್ಲಿದ್ದರು ಎಂಬ ಒಂದೇ ಕಾರಣಕ್ಕೆ ದಿಶಾ ಅವರು ಕೂಡ ಆ ವ್ಯಕ್ತಿಗಳಿಗೆ ಇರುವ ಉದ್ದೇಶವನ್ನೇ ಹೊಂದಿದ್ದಾರೆ ಎಂದು ಹೇಳಲು ಸಾಧ್ಯವೇ? ದೇವಾಲಯಕ್ಕೆ ದೇಣಿಗೆ ನೀಡುವಂತೆ ನಾನು ಡಕಾಯಿತನೊಬ್ಬನನ್ನು ಸಂಪರ್ಕಿಸಿದರೆ, ಡಕಾಯಿತಿಯಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಅರ್ಥವೇ’ ಎಂದು ನ್ಯಾಯಾಧೀಶರು ಪ್ರಶ್ನಿಸಿದರು.

‘ಪೋಯೆಟಿಕ್‌ ಜಸ್ಟಿಸ್‌ ಫೌಂಡೇಶನ್‌’ ಎಂಬ ನಿಷೇಧಿತ ಸಂಘಟನೆಯ ವ್ಯಕ್ತಿಗಳ ಜತೆಗೂಡಿ ದಿಶಾ ಅವರು ಸಂಚು ರೂಪಿಸಿದ್ದಾರೆ. ಇದು (ಟೂಲ್‌ಕಿಟ್‌) ಮೇಲ್ನೋಟಕ್ಕೆ ಕಾಣಿಸುವಷ್ಟು ನಿರಪಾಯಕಾರಿ ಅಲ್ಲ. ಕೆನಡಾದಲ್ಲಿರುವ ವ್ಯಕ್ತಿಗಳ ಜತೆಗೂಡಿ ಟೂಲ್‌ಕಿಟ್‌ ಸಿದ್ಧಪಡಿಸಿರುವುದು ಭಾರತೀಯ ದಂಡ ಸಂಹಿತೆಯ 124 ಎ (ದೇಶದ್ರೋಹ) ಅಡಿಯಲ್ಲಿ ಪ್ರಕರಣ ದಾಖಲಿಸುವಂತಹ ಕೃತ್ಯ’ ಎಂದು ರಾಜು ವಾದಿಸಿದರು.

ಪ್ರತ್ಯೇಕ ಖಾಲಿಸ್ತಾನದ ಪರವಾಗಿರುವ ವ್ಯಕ್ತಿಗಳ ಒತ್ತಾಸೆಯಂತೆ, ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸುವ ಹೆಸರಿನಲ್ಲಿ ಟೂಲ್‌ಕಿಟ್‌ ರಚಿಸಲಾಗಿದೆ ಎಂಬ ಆರೋಪದಲ್ಲಿ ದಿಶಾ ಅವರನ್ನು ಇದೇ 13ರಂದು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ರೈತರ ಪ್ರತಿಭಟನೆಗೆ ಬೆಂಬಲ ನೀಡುವ ನೆಪದಲ್ಲಿ ದೇಶವಿರೋಧಿ ಚಟುವಟಿಕೆ ನಡೆಸಲು ಆರೋಪಿ ಬಯಸಿದ್ದರು. ಜಾಗತಿಕ ಮಟ್ಟದಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವ ಮೂಲಕ ಗಣರಾಜ್ಯೋತ್ಸವ ದಿನ ಕಾರ್ಯಕ್ರಮವನ್ನು ಹಾಳುಗೆಡವಲು ಅವರೆಲ್ಲರೂ ಜತೆಗೂಡಿ ಪಿತೂರಿ ನಡೆಸಿದ್ದಾರೆ. ಇದು ಕಾಕತಾಳೀಯ ಏನಲ್ಲ, ಯೋಜಿತ ಪಿತೂರಿ. ಇದಕ್ಕಾಗಿ ಅವರು ವಾಟ್ಸ್‌ಆ್ಯಪ್‌ ಗುಂಪುಗಳನ್ನು ಮಾಡಿಕೊಂಡಿದ್ದಾರೆ; ಝೂಮ್‌ ಸಭೆಗಳನ್ನು ನಡೆಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

‘ರೈತರಿಗೆ ಬೆಂಬಲ ದೇಶದ್ರೋಹವೇ?’
ಟೂಲ್‌ಕಿಟ್ ರಚನೆಯು‌ ಯಾವ ದೃಷ್ಟಿಯಲ್ಲಿಯೂ ದೇಶದ್ರೋಹದ ಕೃತ್ಯ ಅಲ್ಲ. ಈ ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಶಾಂತನು ಮುಲುಕ್‌ ಮತ್ತು ನಿಕಿತಾ ಜೇಕಬ್‌ ಅವರು ಜಾಮೀನು ಪಡೆದುಕೊಂಡಿದ್ದಾರೆ. ತನಿಖೆಗೆ ಸೋಮವಾರ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿದೆ. ದೆಹಲಿ ಬಿಟ್ಟು ಹೋಗಬಾರದು ಎಂಬ ಷರತ್ತಿನೊಂದಿಗೆ ದಿಶಾ ಅವರಿಗೂ ಜಾಮೀನು ನೀಡಬಹುದು ಎಂದು ದಿಶಾ ಪರ ವಕೀಲ ಸಿದ್ಧಾರ್ಥ ಅಗರ್‌ವಾಲ್‌ ವಾದಿಸಿದರು.

‘ದಿಶಾ ಅವರು ಹವಾಮಾನ ಮತ್ತು ಪರಿಸರ ರಕ್ಷಣೆ ಕಾರ್ಯಕರ್ತೆ. ಪ್ರತ್ಯೇಕತಾವಾದಿ ಚಳವಳಿಯ ಜತೆಗೆ ಅವರಿಗೆ ಯಾವುದೇ ಸಂಪರ್ಕ ಇಲ್ಲ. ರೈತರ ಪ್ರತಿಭಟನೆಗೆ ಬೆಂಬಲ ನೀಡುವುದು ದೇಶದ್ರೋಹ ಎಂದಾದರೆ, ನಾನೂ ತಪ್ಪಿತಸ್ಥನೇ. ನಮಗಿಂತ ಭಿನ್ನವಾದ ಅಭಿಪ್ರಾಯ ಹೊಂದುವುದೇ ಸರಿಯಿಲ್ಲ ಎನ್ನುವ ಮೂಲಕ ಚಿಂತನೆಯ ಮಟ್ಟವನ್ನೇ ನಾವು ಕೆಳಕ್ಕೆ ಇಳಿಸುತ್ತಿದ್ದೇವೆ’ ಎಂದು ಅಗರ್‌ವಾಲ್‌ ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT