ಪಿಜ್ಜಾ, ಬರ್ಗರ್ ನೀಡಬಹುದಾದರೆ ಪಡಿತರ ಯಾಕಾಗಬಾರದು? - ಕೇಜ್ರಿವಾಲ್ ಗರಂ

ನವದೆಹಲಿ: ಜನರ ಮನೆ ಬಾಗಿಲಿಗೆ ಪಡಿತರ ವಿತರಣೆ ತಲುಪಿಸುವ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಏಕೆ ತಡೆಯೊಡ್ಡುತ್ತಿದೆ ಎಂದು ಪ್ರಶ್ನಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ದೇಶದ ಹಿತಾಸಕ್ತಿಯ ದೃಷ್ಟಿಕೋನದಲ್ಲಿ ಆದಷ್ಟು ಬೇಗನೇ ಯೋಜನೆ ಅನುಷ್ಠಾನಗೊಳಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
ಕೋವಿಡ್-19 ದೃಷ್ಟಿಯಿಂದ ದೇಶದಾದ್ಯಂತ ಈ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೆ ತರಬೇಕು. ಇಲ್ಲದಿದ್ದರೆ ಪಡಿತರ ಅಂಗಡಿಗಳು 'ಸೂಪರ್ ಸ್ಪ್ರೆಡರ್' ಗಳಾಗಿ ಮಾರ್ಪಾಡುಗೊಳ್ಳಲಿವೆ ಎಂದು ಎಚ್ಚರಿಸಿದ್ದಾರೆ.
ಪಿಜ್ಜಾ, ಬರ್ಗರ್, ಸ್ಮಾರ್ಟ್‌ಫೋನ್ ಮತ್ತು ಬಟ್ಟೆಗಳನ್ನು ಮನೆಗಳಿಗೆ ತಲುಪಿಸಬಹುದಾದರೆ ಪಡಿತರವನ್ನು ಮನೆ ಬಾಗಿಲಿಗೆ ಏಕೆ ತಲುಪಿಸಬಾರದು ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮಲೆಯಾಳಂ ಮಾತಾಡಬಾರದೆಂಬ ಸುತ್ತೋಲೆ ರದ್ದು ಮಾಡಿದ ದೆಹಲಿ ಆಸ್ಪತ್ರೆ
ಕೇಂದ್ರ ಸರ್ಕಾರವು ಎಲ್ಲರ ವಿರುದ್ಧ ಹೋರಾಟಕ್ಕಿಳಿದಿದೆ ಎಂದವರು ಆರೋಪಿಸಿದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ, ದೆಹಲಿ, ಜಾರ್ಖಂಡ್ ಸರ್ಕಾರಗಳು, ರೈತರು ಮತ್ತು ಲಕ್ಷದ್ವೀಪದ ಜನತೆ ಸೇರಿದಂತೆ ಎಲ್ಲರ ವಿರುದ್ಧವೂ ಕೇಂದ್ರ ಹೋರಾಟ ನಡೆಸುತ್ತಿದೆ. ಕೇಂದ್ರ ಸರ್ಕಾರದ ಈ ಧೋರಣೆಯಿಂದ ಜನ ಸಾಮಾನ್ಯರು ಬೇಸರಗೊಂಡಿದ್ದಾರೆ. ನಾವು ಈ ರೀತಿ ಹೋರಾಡಿದರೆ ಕೋವಿಡ್-19 ಬಿಕ್ಕಟ್ಟನ್ನು ನಿಭಾಯಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಯೋಜನೆ ಜಾರಿಗೊಳಿಸಲು ದೆಹಲಿ ಸರ್ಕಾರಕ್ಕೆ ಕೇಂದ್ರದ ಅನುಮೋದನೆಯ ಅಗತ್ಯವಿಲ್ಲ. ಆದರೂ ಯಾವುದೇ ವಿವಾದವನ್ನು ತಪ್ಪಿಸಲು ಐದು ಬಾರಿ ಅನುಮತಿ ಕೋರಲಾಗಿದೆ ಎಂದು ಕೇಜ್ರಿವಾಲ್ ಸ್ಪಷ್ಟಪಡಿಸಿದರು.
ಮನೆ ಬಾಗಿಲಿಗೆ ಪಡಿತರ ವಿತರಣೆ ಯೋಜನೆಯನ್ನು ಲೆಫ್ಟಿನೆಂಟ್ ಗವರ್ನರ್ ತಿರಸ್ಕರಿಸಿದ್ದಾರೆ ಎಂದು ದೆಹಲಿ ಸರ್ಕಾರ ಶನಿವಾರ ತಿಳಿಸಿತ್ತು.
ಈ ಯೋಜನೆ ಮೂಲಕ ಪಡಿತರ ಮಾಫಿಯಾವನ್ನು ತಡೆಗಟ್ಟಬಹುದು ಎಂದು ಕೇಜ್ರಿವಾಲ್ ಅಭಿಪ್ರಾಯಪಟ್ಟಿದ್ದಾರೆ. ನೀವು ಪಡಿತರ ಮಾಫಿಯಾ ವಿರುದ್ಧ ನಿಂತರೆ, ಜನರ ಪರವಾಗಿ ಇದ್ದಂತೆ. ಈ ಯೋಜನೆಯಿಂದ 72 ಲಕ್ಷ ಜನರಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.