ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್‌ ಪ್ರಕರಣ: ಮಹಾರಾಷ್ಟ್ರ ಸಚಿವರ ಅಳಿಯನ ಮನೆಯಲ್ಲಿ ತಪಾಸಣೆ

Last Updated 14 ಜನವರಿ 2021, 12:55 IST
ಅಕ್ಷರ ಗಾತ್ರ

ಮುಂಬೈ: ‘ಡ್ರಗ್ಸ್‌ ಜಾಲದೊಂದಿಗೆ ನಂಟು ಹೊಂದಿರುವ ಆರೋಪದಡಿಯಲ್ಲಿ ಬಂಧನಕ್ಕೊಳಗಾಗಿರುವ ಸಮೀರ್‌ ಖಾನ್‌ ಅವರ ನಿವಾಸದಲ್ಲಿ ಗುರುವಾರ ತಪಾಸಣೆ ನಡೆಸಲಾಗಿದೆ’ ಎಂದು ಮಾದಕ ವಸ್ತು ನಿಯಂತ್ರಣ ದಳದ (ಎನ್‌ಸಿಬಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಾರಾಷ್ಟ್ರದ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆಯ ಸಚಿವ ನವಾಬ್‌ ಮಲಿಕ್‌ ಅಳಿಯನಾಗಿರುವ ಸಮೀರ್‌ ಅವರನ್ನು ಎನ್‌ಸಿಬಿ ಅಧಿಕಾರಿಗಳು ಬುಧವಾರ ಬಂಧಿಸಿದ್ದರು. ಬಳಿಕ ಮುಂಬೈನ ಸ್ಥಳೀಯ ನ್ಯಾಯಾಲಯದ ಎದುರು ಹಾಜರುಪಡಿಸಿದ್ದರು.

‘ಹೆಚ್ಚಿನ ವಿಚಾರಣೆಯ ಅಗತ್ಯವಿರುವುದರಿಂದ ಸಮೀರ್‌ ಅವರನ್ನು ಇದೇ 18ರವರೆಗೆ ಎನ್‌ಸಿಬಿ ವಶಕ್ಕೆ ನೀಡಲಾಗುವುದು’ ಎಂದು ನ್ಯಾಯಾಲಯ ಹೇಳಿತ್ತು.

‘ಎನ್‌ಸಿಬಿ ಅಧಿಕಾರಿಗಳ ತಂಡವು ಬಾಂದ್ರಾ ಉಪನಗರದಲ್ಲಿರುವ ಸಮೀರ್‌ ಅವರ ನಿವಾಸ ಹಾಗೂ ಜುಹುನಲ್ಲಿ ತಪಾಸಣೆ ನಡೆಸಿದೆ. ಸಮೀರ್‌ ಅವರ ನಿವಾಸದಿಂದ ಯಾವುದೇ ದಾಖಲೆಯನ್ನು ವಶಪಡಿಸಿಕೊಂಡಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡ್ರಗ್ಸ್‌ ಜಾಲವನ್ನು ಭೇದಿಸಿದ್ದ ಎನ್‌ಸಿಬಿ, ಬ್ರಿಟನ್‌ ಪ್ರಜೆಯಾಗಿರುವ ಕರಣ್‌ ಸಜ್ನಾನಿ ಸೇರಿದಂತೆ ಮೂವರು ಆರೋಪಿಗಳನ್ನು ಕಳೆದ ವಾರ ಬಂಧಿಸಿತ್ತು. ಅವರಿಂದ 200 ಕೆ.ಜಿ. ಮಾದಕ ವಸ್ತು ವಶಪಡಿಸಿಕೊಳ್ಳಲಾಗಿತ್ತು.

‘ಡ್ರಗ್ಸ್‌ ಪ್ರಕರಣದ ಆರೋಪಿಯೊಬ್ಬರೊಂದಿಗೆ ಸಮೀರ್‌ ಸಂಪರ್ಕ ಇಟ್ಟುಕೊಂಡಿದ್ದರು. ಆನ್‌ಲೈನ್‌ ಮೂಲಕ ಅವರ ಖಾತೆಗೆ ₹20 ಸಾವಿರ ವರ್ಗಾಯಿಸಿದ್ದು ತನಿಖೆಯಿಂದ ದೃಢಪಟ್ಟಿತ್ತು. ಹೀಗಾಗಿ ಅವರಿಗೆ ಸಮನ್ಸ್‌ ಕೂಡ ನೀಡಲಾಗಿತ್ತು’ ಎಂದು ಮೂಲಗಳು ಮಾಹಿತಿ ನೀಡಿವೆ.

‘ಮಲಿಕ್‌ ಅವರ ಮೇಲೆ ಯಾವುದೇ ಆರೋಪಗಳಿಲ್ಲ. ಡ್ರಗ್ಸ್‌ ಜಾಲದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವವರು ಎನ್‌ಸಿಬಿ ಅಧಿಕಾರಿಗಳ ತನಿಖೆಗೆ ಸಹಕರಿಸಬೇಕು’ ಎಂದು ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಗುರುವಾರ ನುಡಿದಿದ್ದಾರೆ.

‘ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಕಾನೂನು ಎಲ್ಲರಿಗೂ ಒಂದೇ. ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಸತ್ಯಕ್ಕೆ ಎಂದಿಗೂ ಜಯವಿದೆ’ ಎಂದು ನವಾಬ್‌ ಮಲಿಕ್‌ ಗುರುವಾರ ಟ್ವೀಟ್‌ ಮಾಡಿದ್ದಾರೆ. ಅವರು ಎಲ್ಲಿಯೂ ತಮ್ಮ ಅಳಿಯನ ಪ್ರಕರಣವನ್ನು ಉಲ್ಲೇಖಿಸಿಲ್ಲ.

ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ಅಧಿಕಾರಿಗಳು ಮಂಗಳವಾರ ಮುಂಬೈನ ಪ್ರಸಿದ್ಧ ಮುಚ್ಚಾಡ್‌ ಪಾನ್‌ವಾಲಾ ಅಂಗಡಿಯ ಮಾಲೀಕರಲ್ಲಿ ಒಬ್ಬರಾದ ರಾಮಕುಮಾರ್‌ ತಿವಾರಿ ಅವರನ್ನು ಬಂಧಿಸಿದ್ದರು. ನ್ಯಾಯಾಲಯವು ಅವರಿಗೆ ಬುಧವಾರ ಜಾಮೀನು ಮಂಜೂರು ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT