ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಜಾಹೀರಾತು ಪ್ರಕಟಣೆ: ಅಸ್ಸಾಂನ 8 ದಿನಪತ್ರಿಕೆಗಳಿಗೆ ಚುನಾವಣಾ ಆಯೋಗ ನೋಟಿಸ್

Last Updated 31 ಮಾರ್ಚ್ 2021, 1:21 IST
ಅಕ್ಷರ ಗಾತ್ರ

ಗುವಾಹಟಿ: ಮೊದಲ ಹಂತದಲ್ಲಿ ಶನಿವಾರ ಚುನಾವಣೆ ನಡೆದ ಎಲ್ಲಾ 47 ಸ್ಥಾನಗಳನ್ನು ಪಕ್ಷವು ಗೆಲ್ಲುತ್ತದೆ ಎಂದು ಹೇಳುವ ಶೀರ್ಷಿಕೆಯ ರೂಪದಲ್ಲಿ ಬಿಜೆಪಿಯ ಜಾಹೀರಾತನ್ನು ಪ್ರಕಟಿಸಿದ್ದ ಅಸ್ಸಾಂನ ಎಂಟು ಪತ್ರಿಕೆಗಳಿಗೆ ಭಾರತ ಚುನಾವಣಾ ಆಯೋಗ (ಇಸಿಐ) ನೋಟಿಸ್ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಜೆಪಿ ನೀಡಿರುವ ಈ ಜಾಹೀರಾತು ಇಸಿಐ ನೀಡಿರುವ ನಿರ್ದೇಶನ, ಚುನಾವಣೆಯ ಮಾದರಿ ನೀತಿ ಸಂಹಿತೆ ಮತ್ತು ಜನಪ್ರತಿನಿಧಿ ಕಾಯ್ದೆ 1951 ಅನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಕಾಂಗ್ರೆಸ್ ಸಲ್ಲಿಸಿದ ದೂರು ಪರಿಶೀಲಿಸಿದ ಬಳಿಕ ಪತ್ರಿಕೆಗಳಿಗೆ ನೋಟಿಸ್ ನೀಡಲಾಗಿದೆ.

ನೋಟಿಸ್‌ಗಳಲ್ಲಿ ಅಸ್ಸಾಂ ಮುಖ್ಯ ಚುನಾವಣಾ ಅಧಿಕಾರಿ ನಿತಿನ್ ಖಡೆ ಅವರು, ಸೋಮವಾರ ಸಂಜೆ 7 ಗಂಟೆಯೊಳಗೆ ಆಯೋಗಕ್ಕೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವ ವರದಿಯನ್ನು ಕಳುಹಿಸುವಂತೆ ಪತ್ರಿಕೆಗಳಿಗೆ ಕೇಳಿದ್ದಾರೆ.

ನೋಟಿಸ್ ಪಡೆದುಕೊಂಡಿದ್ದ ಪತ್ರಿಕೆಗಳು ಈಗಾಗಲೇ ತಮ್ಮ ವರದಿಗಳನ್ನು ಇಸಿಐಗೆ ರವಾನಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಜಾಹೀರಾತನ್ನು ಮರೆಮಾಚಿ ಸುದ್ದಿ ರೂಪದಲ್ಲಿ ನೀಡಿದ್ದಾರೆ’ ಎಂದು ಆರೋಪಿಸಿ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್‌, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಅಸ್ಸಾಂ ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ರಂಜೀತ್‌ ಕುಮಾರ್‌ ದಾಸ್ ಹಾಗೂ ಎಂಟು ಪತ್ರಿಕೆಗಳ ವಿರುದ್ಧ ಅಸ್ಸಾಂ ಕಾಂಗ್ರೆಸ್‌ ಘಟಕ ಭಾನುವಾರ ರಾತ್ರಿ ಡಿಸ್ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿತ್ತು.

ರಾಜ್ಯ ಕಾಂಗ್ರೆಸ್ ಕಾನೂನು ವಿಭಾಗದ ಅಧ್ಯಕ್ಷ ನಿರನ್ ಬೋರಾಹ್ ಮಾತನಾಡಿ, 'ಮಾದರಿ ನೀತಿ ಸಂಹಿತೆ (ಎಂಸಿಸಿ), ಜನರ ಪ್ರಾತಿನಿಧ್ಯ ಕಾಯ್ದೆ 1951, ಭಾರತದ ಚುನಾವಣಾ ಆಯೋಗ ಹೊರಡಿಸಿದ ಸಂಬಂಧಿತ ಸೂಚನೆಗಳು ಮತ್ತು ಮಾಧ್ಯಮ ನೀತಿಗಳನ್ನು ಬಿಜೆಪಿ ಮುಖಂಡರು ಮತ್ತು ಸದಸ್ಯರು ಉಲ್ಲಂಘಿಸಿದ್ದಾರೆ. ಅವರ ಸೋಲು ಖಾತ್ರಿಯಾದ ನಂತರ ರಾಜ್ಯಾದ್ಯಂತ ಮತದಾರರ ಮೇಲೆ ಪ್ರಭಾವ ಬೀರಲು ಹತಾಶ ಕಾನೂನುಬಾಹಿರ ಮತ್ತು ಅಸಂವಿಧಾನಿಕ ವಿಧಾನಗಳನ್ನು ಆಶ್ರಯಿಸಿದ್ದಾರೆ' ಎಂದು ದೂರಿದ್ದಾರೆ.

ಕಾಂಗ್ರೆಸ್ ರಾಜ್ಯ ಅಧ್ಯಕ್ಷ ರಿಪುನ್ ಬೋರಾ ಮಾತನಾಡಿ, ಬಿಜೆಪಿ ನಾಯಕರು 'ಗೊಂದಲಕ್ಕೊಳಗಾಗಿದ್ದಾರೆ' ಮತ್ತು ಅಸ್ಸಾಂ ಜನರನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಅಸ್ಸಾಂನ ಎಲ್ಲಾ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಪತ್ರಿಕೆಗಳಲ್ಲಿ ಕಟ್ಟುಕಥೆಗಳನ್ನು ಪ್ರಕಟಿಸುವ ಮೂಲಕ ತಮ್ಮ ವೈಫಲ್ಯವನ್ನು ಮರೆಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ದಿ ಅಸ್ಸಾಂ ಟ್ರಿಬ್ಯೂನ್, ಅಸೋಮಿಯಾ ಪ್ರತಿದಿನ್, ಅಮರ್ ಅಸೋಮ್, ನಿಯೋಮಿಯಾ ಬಾರ್ತಾ, ಅಸೋಮಿಯಾ ಖಬೋರ್, ದೈನಿಕ್ ಅಸ್ಸಾಂ, ದೈನಿಕ್ ಜುಗಶಂಕಾ ಮತ್ತು ದೈನಿಕ್ ಪೂರ್ಣೋದಯ ಸೇರಿ ಪ್ರಮುಖ ಇಂಗ್ಲಿಷ್, ಅಸ್ಸಾಮೀಸ್, ಹಿಂದಿ ಮತ್ತು ಬಂಗಾಳಿ ಪತ್ರಿಕೆಗಳು ಬಿಜೆಪಿ ನೀಡಿದ್ದ ಜಾಹಿರಾತನ್ನು ಪ್ರಕಟಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT