ಬುಧವಾರ, ಮಾರ್ಚ್ 22, 2023
20 °C

ಚೀನಾಕ್ಕೆ ರಹಸ್ಯ ಮಾಹಿತಿ ಸೋರಿಕೆ: ದೆಹಲಿ ಮೂಲದ ಹವ್ಯಾಸಿ ಪತ್ರಕರ್ತ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಚೀನಾದ ಗುಪ್ತಚರ ಅಧಿಕಾರಿಗಳಿಗೆ ಸೂಕ್ಷ್ಮ ಮಾಹಿತಿ ಸೋರಿಕೆ ಮಾಡಿದ ಆರೋಪ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ದೆಹಲಿ ಮೂಲದ ಹವ್ಯಾಸಿ ಪತ್ರಕರ್ತನನ್ನು ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ತಿಳಿಸಿದೆ.

ಬಂಧಿತ ಹವ್ಯಾಸಿ ಪತ್ರಕರ್ತ ರಾಜೀವ್ ಶರ್ಮಾನನ್ನು ಜುಲೈ 1ರಂದು ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯ (ಪಿಎಂಎಲ್‌ಎ) ಕ್ರಿಮಿನಲ್ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಲಾಗಿದ್ದು, ಸ್ಥಳೀಯ ನ್ಯಾಯಾಲಯಕ್ಕೆ ಶುಕ್ರವಾರ ಹಾಜರುಪಡಿಸಲಾಯಿತು. ನ್ಯಾಯಾಲಯವು ಶರ್ಮಾನನ್ನು ಏಳು ದಿನಗಳವರೆಗೆ ಇ.ಡಿ ಕಸ್ಟಡಿಗೆ ನೀಡಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

‘ಚೀನಾದ ಗುಪ್ತಚರ ಅಧಿಕಾರಿಗಳಿಗೆ ಗೋಪ್ಯ ಮತ್ತು ಸೂಕ್ಷ್ಮ ಮಾಹಿತಿ ಒದಗಿಸಿದ್ದಕ್ಕಾಗಿ, ಚೀನಾ ಮೂಲದ ಶೆಲ್‌ ಕಂಪನಿಯೊಂದರ ಮೂಲಕ ಹವಾಲ ಹಣವನ್ನು ಶರ್ಮಾ ಮತ್ತು ಇತರ ಅಪರಿಚಿತ ವ್ಯಕ್ತಿಗಳು ಸಂಭಾವನೆಯಾಗಿ ಪಡೆದಿದ್ದಾರೆ’ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.

ನಗದು ಪಡೆದಿರುವುದರ ಹೊರತಾಗಿ, ಚೀನಾದ ವಿವಿಧ ಕಂಪನಿಗಳು ಮತ್ತು ಭಾರತದ ಇತರ ಕೆಲವು ವ್ಯಾಪಾರ ಕಂಪನಿಗಳೊಂದಿಗೆ ಬೃಹತ್ ವಹಿವಾಟು ಕೂಡ ನಡೆಸಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಇ.ಡಿ ತಿಳಿಸಿದೆ.

ಶರ್ಮಾ ವಿರುದ್ಧದ ಇ.ಡಿ ಪ್ರಕರಣ ಆಧರಿಸಿ ದೆಹಲಿ ಪೊಲೀಸರು ಅಧಿಕೃತ ರಹಸ್ಯ ಕಾಯ್ದೆ (ಒಎಸ್ಎ) ಮತ್ತು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿ ಕಳೆದ ವರ್ಷವೇ ಎಫ್ಐಆರ್ ದಾಖಲಿಸಿದ್ದರು. ಕಳೆದ ವರ್ಷದ ಸೆಪ್ಟೆಂಬರ್‌ 14ರಂದು ದೆಹಲಿ ಪೊಲೀಸರು ಈತನನ್ನು ಬಂಧಿಸಿದ್ದರು. ಭಾರತೀಯ ಸೇನೆಯ ನಿಯೋಜನೆ ಮತ್ತು ದೇಶದ ಗಡಿ ಕಾರ್ಯತಂತ್ರದ ಬಗ್ಗೆ ಚೀನಾದ ಗುಪ್ತಚರ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ ಆರೋಪ ಶರ್ಮಾ ಮೇಲೆ ಇದೆ.

ಬಂಧನಕ್ಕೊಳಗಾದ 60 ದಿನಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಪತ್ರಕರ್ತನಿಗೆ 2020ರ ಡಿಸೆಂಬರ್‌ನಲ್ಲಿ ದೆಹಲಿ ಹೈಕೋರ್ಟ್ ಜಾಮೀನು ನೀಡಿತ್ತು.

ಶರ್ಮಾ ಸಾವಿರಾರು ಅನುಯಾಯಿಗಳನ್ನು ಹೊಂದಿರುವ ‘ರಾಜೀವ್ ಕಿಷ್ಕಿಂಧಾ’ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಬಂಧನದ ದಿನ ಅವರು ಎರಡು ವೀಡಿಯೊಗಳನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದ್ದಾರೆ. ಒಂದು ಗಡಿ ಉದ್ವಿಗ್ನತೆ ಬಗ್ಗೆ ಇದ್ದರೆ, ಇನ್ನೊಂದರಲ್ಲಿ ಸದ್ಯದ ಪತ್ರಿಕೋದ್ಯಮದ ಸ್ಥಿತಿಯ ಕುರಿತು ವಿವರಗಳಿವೆ.

ಇದನ್ನೂ ಓದಿ... ನಿರಾಶ್ರಿತರು, ಭಿಕ್ಷುಕರು ದುಡಿಯಬೇಕು; ಎಲ್ಲ ಪೂರೈಸಲು ಸಾಧ್ಯವಿಲ್ಲ: ಹೈಕೋರ್ಟ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು