ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ.ಡಿಯಿಂದ ಸೋಮವಾರ ಮತ್ತೆ ರಿಯಾ ವಿಚಾರಣೆ

ಕೇಂದ್ರದಿಂದ ಸಿಬಿಐ, ಇ.ಡಿ ದುರ್ಬಳಕೆ: ಶಿವಸೇನಾ ಆರೋಪ
Last Updated 9 ಆಗಸ್ಟ್ 2020, 14:14 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್ ರಜಪೂತ್‌‌ ಅಸಹಜ ಸಾವಿನ ಪ್ರಕರಣದಲ್ಲಿ ಸುಶಾಂತ್‌ ತಂದೆ ಕೆ.ಕೆ.ಸಿಂಗ್‌ ಅವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯ(ಇ.ಡಿ) ನಟಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರ ಶೌವಿಕ್‌ ವಿರುದ್ಧದ ವಿಚಾರಣೆಯನ್ನು ಚುರುಕುಗೊಳಿಸಿದೆ.

ರಿಯಾ ಹಣಕಾಸು ವ್ಯವಹಾರ, ಖಾರ್‌ ಹಾಗೂ ನವೀ ಮುಂಬೈನಲ್ಲಿ ಇರುವ ಆಕೆಯ ಎರಡು ಆಸ್ತಿಯ ಕುರಿತು ಈಗಾಗಲೇ ಪ್ರಾಥಮಿಕ ಮಾಹಿತಿ ಕಲೆ ಹಾಕಿರುವ ಇ.ಡಿ, ಮತ್ತಷ್ಟು ಮಾಹಿತಿ ಕಲೆ ಹಾಕುವ ಉದ್ದೇಶದಿಂದ ಸೋಮವಾರ ರಿಯಾ ಅವರನ್ನು ಮತ್ತೆ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ರಿಯಾ ಹಾಗೂ ಆಕೆಯ ಕುಟುಂಬ ಸುಶಾಂತ್‌ಗೆ ₹15 ಕೋಟಿಗೂ ಅಧಿಕ ಮೋಸ ಮಾಡಿದೆ ಎಂದು ಕೆ.ಕೆ.ಸಿಂಗ್‌ ಆರೋಪಿಸಿದ್ದರು.

ಶುಕ್ರವಾರವಷ್ಟೇ ರಿಯಾ, ಶೌವಿಕ್‌, ರಿಯಾ ಮ್ಯಾನೇಜರ್‌ ಶ್ರುತಿ ಮೋದಿ ಮತ್ತು ರಿತೇಶ್‌ ಶಾ ಅವರನ್ನು ಇ.ಡಿ ಎಂಟು ಗಂಟೆಗಳ ಕಾಲ ಪ್ರಶ್ನಿಸಿತ್ತು. ಶನಿವಾರ ಮತ್ತೆ ಶೌವಿಕ್‌ ಅವರನ್ನು ಕರೆಸಿಕೊಂಡಿದ್ದ ಇ.ಡಿ ಭಾನುವಾರ ಬೆಳಗಿನವರೆಗೂ ವಿಚಾರಣೆಗೆ ಒಳಪಡಿಸಿದೆ. ಮೂಲಗಳ ಅನ್ವಯ ರಿಯಾ ಹಾಗೂ ಶೌವಿಕ್‌ ಇಬ್ಬರೂ ನುಣುಚಿಕೊಳ್ಳುವಂಥ ಪ್ರತಿಕ್ರಿಯೆ ನೀಡಿದ್ದರು ಎನ್ನಲಾಗಿದೆ.

ದಿಶಾ ಮೃತದೇಹ ನಗ್ನ ಸ್ಥಿತಿಯಲ್ಲಿರಲಿಲ್ಲ: ಸುಶಾಂತ್‌ ಸಿಂಗ್‌ ಅವರ ಬಳಿ ಮ್ಯಾನೇಜರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ದಿಶಾ ಸಾಲ್ಯಾನ್‌ ಅವರ ಮೃತದೇಹ ನಗ್ನ ಸ್ಥಿತಿಯಲ್ಲಿ ಇರಲಿಲ್ಲ ಎಂದು ಸ್ಪಷ್ಟನೆ ನೀಡಿರುವ ಮುಂಬೈ ಪೊಲೀಸರು, ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿದ್ದಾರೆ. ‘ದಿಶಾ ಆತ್ಮಹತ್ಯೆ ಘಟನೆಯ ಮಾಹಿತಿ ದೊರೆಯುತ್ತಿದ್ದಂತೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಅವರ ಪಾಲಕರ ಸಮ್ಮುಖದಲ್ಲೇ ಮಹಜರು ನಡೆಸಿದ್ದಾರೆ’ ಎಂದು ಉಪ ಪೊಲೀಸ್‌ ಆಯುಕ್ತ ವಿಶಾಲ್‌ ಠಾಕೂರ್‌ ತಿಳಿಸಿದ್ದಾರೆ. ಜೂನ್‌ 8ರ ಮಧ್ಯರಾತ್ರಿ ಮಲಾಡ್‌ ಪ್ರದೇಶದಲ್ಲಿ ಇರುವ ಗ್ಯಾಲೆಕ್ಸಿ ರೀಜೆಂಟ್‌ ಕಟ್ಟಡದ 14ನೇ ಮಹಡಿಯಿಂದ ಹಾರಿ ದಿಶಾ ಮೃತಪಟ್ಟಿದ್ದರು.

ಸಿಬಿಐ, ಇ.ಡಿ ದುರ್ಬಳಕೆ: ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿ ಇರುವ ಮಹಾ ವಿಕಾಸ್‌ ಅಘಾಡಿಯನ್ನು ಗುರಿಯಾಗಿಸಿಕೊಂಡು, ಸುಶಾಂತ್‌ ಸಿಂಗ್‌ ಸಾವಿನ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಸಿಬಿಐ ಹಾಗೂ ಇ.ಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಶಿವಸೇನಾ ಆರೋಪಿಸಿದೆ. ‘ಮಹಾರಾಷ್ಟ್ರದ ವಿರುದ್ಧದ ಪಿತೂರಿ ಇದು. ಮುಂಬೈ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿರುವಾಗಲೇ, ಬಿಹಾರ ಸರ್ಕಾರ ಪ್ರಕರಣದ ಸಿಬಿಐ ತನಿಖೆಗೆ ಶಿಫಾರಸು ಮಾಡುತ್ತದೆ. ಇದಕ್ಕೆ ಕೇಂದ್ರ ಸರ್ಕಾರ ತಕ್ಷಣವೇ ಒಪ್ಪಿಗೆ ನೀಡುತ್ತದೆ. ಇದನ್ನು ಗಮನಿಸಿದಾಗಸುಶಾಂತ್‌ ಪ್ರಕರಣದಲ್ಲಿ ಮೊದಲೇ ಆರೋಪಪಟ್ಟಿ ಸಿದ್ಧಪಡಿಸಿಕೊಂಡಂತಿದೆ’ ಎಂದು ಶಿವಸೇನಾ ರಾಜ್ಯಸಭಾ ಸದಸ್ಯ ಸಂಜಯ್‌ ರಾವತ್‌ ಶಿವಸೇನಾ ಮುಖವಾಣಿ ‘ಸಾಮ್ನಾ’ದಲ್ಲಿ ‘ರೋಕ್‌ಠೋಕ್‌’ ಅಂಕಣದಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT