ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Election Result 2022 | 4 ರಾಜ್ಯ ಬಿಜೆಪಿಗೆ; AAP ಅಚ್ಚರಿ, ಕಾಂಗ್ರೆಸ್‌ಗೆ ಆಘಾತ

Last Updated 10 ಮಾರ್ಚ್ 2022, 15:27 IST
ಅಕ್ಷರ ಗಾತ್ರ

ನವದೆಹಲಿ: ದೇಶದ ರಾಜಕೀಯದ ಮೇಲೆ ಹಿಡಿತವಿರುವ ಉತ್ತರ ಪ್ರದೇಶದಲ್ಲಿ ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳೊಂದಿಗೆ ಅಧಿಕಾರ ಉಳಿಸಿಕೊಂಡಿರುವ ಬಿಜೆಪಿಯು ಉತ್ತರಾಖಂಡ, ಗೋವಾ ಮತ್ತು ಮಣಿಪುರಗಳಲ್ಲೂ ಸರಕಾರವನ್ನು ಉಳಿಸಿಕೊಂಡಿದ್ದರೆ, ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಅಲೆಯ ನಡುವೆ ಆಡಳಿತಾರೂಢ ಕಾಂಗ್ರೆಸ್‌ಗೆ ಆಘಾತಕಾರಿ ಸೋಲಾಗಿದೆ. ಇದರೊಂದಿಗೆ, ಮತ್ತೊಂದು ರಾಜ್ಯವು ಕಾಂಗ್ರೆಸ್‌ನ ಕೈತಪ್ಪಿದಂತಾಗಿದೆ.

2024ರ ಸಾರ್ವತ್ರಿಕ ಚುನಾವಣೆಯ ಸೆಮಿ ಫೈನಲ್ ಎನ್ನಲಾಗುತ್ತಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶವು ಗುರುವಾರ ಹೊರಬಿದ್ದಿದ್ದು, 690 ಕ್ಷೇತ್ರಗಳ 6,944 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಿದೆ. 80 ಸದಸ್ಯರನ್ನು ಸಂಸತ್ತಿಗೆ ಕಳುಹಿಸುವ ಉತ್ತರ ಪ್ರದೇಶವನ್ನು ಗೆದ್ದವರು ದೇಶವನ್ನೇ ಗೆದ್ದಂತೆ ಎಂಬ ಮಾತು ಇರುವುದರಿಂದ, ಎಲ್ಲ ರಾಜಕೀಯ ಪಕ್ಷಗಳಿಗೂ ಇದೊಂದು ಕುತೂಹಲದ ರಾಜಕೀಯ ಕದನವಾಗಿತ್ತು. ಆದರೆ, ಉತ್ತರ ಪ್ರದೇಶದಲ್ಲಿ ಭಾರಿ ಭರವಸೆ ಮೂಡಿಸಿದ್ದ ಕಾಂಗ್ರೆಸ್ ಪಕ್ಷವು ತನ್ನ ಕೈಯಲ್ಲಿದ್ದ 7ರಲ್ಲಿ ಕೇವಲ 2 ಸ್ಥಾನಗಳನ್ನಷ್ಟೇ ಉಳಿಸಿಕೊಳ್ಳುವಲ್ಲಿ ತೃಪ್ತಿ ಪಡಬೇಕಾಗಿರುವುದು ಆ ಪಕ್ಷದ ಭವಿಷ್ಯದ ಮೇಲೆ ಕರಿಛಾಯೆ ಮೂಡಿಸಿದಂತಾಗಿದೆ.

ಎಕ್ಸಿಟ್ (ಮತದಾನೋತ್ತರ) ಸಮೀಕ್ಷೆಗಳಲ್ಲಿ ಹೆಚ್ಚಿನವು ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರಗಳಲ್ಲಿ ಬಿಜೆಪಿ, ಪಂಜಾಬಿನಲ್ಲಿ ಆಮ್ ಆದ್ಮೀ ಪಾರ್ಟಿ ಅಧಿಕಾರ ಸ್ಥಾಪಿಸಲಿವೆ ಮತ್ತು ಗೋವಾದಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ಪ್ರಬಲ ಪೈಪೋಟಿ ಎಂದೇ ಭವಿಷ್ಯ ನುಡಿದಿದ್ದವು. ಅದೀಗ ಬಹುತೇಕ ನಿಜವಾಗಿದೆ.

ಆಡಳಿತ-ವಿರೋಧಿ ಅಲೆಯ ಬದಲಾಗಿ ಬಿಜೆಪಿ ಗೆದ್ದ ನಾಲ್ಕು ರಾಜ್ಯಗಳಲ್ಲಿಯೂ ಆಡಳಿತ-ಪರ ಅಲೆ ಏರ್ಪಟ್ಟಿದ್ದು, ಹೊಸ ಸಾಧ್ಯತೆಯ ಚರ್ಚೆಗೆ ಕಾರಣವಾಗಿದೆ. ಉತ್ತರ ಪ್ರದೇಶದಲ್ಲಿ 1985ರ ಬಳಿಕ ಇದೇ ಮೊದಲ ಬಾರಿಗೆ ಅಧಿಕಾರಾರೂಢ ಸರಕಾರವು ಮರಳಿ ಗದ್ದುಗೆಯೇರುವಪ್ರಸಂಗವಿದು. ಅಲ್ಲಿ 1950ರ ದಶಕದ ಬಳಿಕ ಪೂರ್ಣಾವಧಿ ಪೂರೈಸಿದ ಮುಖ್ಯಮಂತ್ರಿಯೊಬ್ಬರು ಮರಳಿ ಅಧಿಕಾರಕ್ಕೆ ಬರುವುದರಲ್ಲಿ ಕೂಡ ಯೋಗಿ ಆದಿತ್ಯನಾಥ್ ಇತಿಹಾಸ ಸೃಷ್ಟಿಸಿದ್ದಾರೆ. ಅವರು ಮೊದಲ ಬಾರಿ ವಿಧಾನಸಭೆ ಚುನಾವಣೆ ಎದುರಿಸಿ ಗೆದ್ದಿದ್ದಾರೆ. ಉತ್ತರಾಖಂಡದಲ್ಲಿಯೂ ಆಡಳಿತಾರೂಢ ಸರಕಾರ ಮೊದಲ ಬಾರಿಗೆ ಮರಳಿ ಅಧಿಕಾರಕ್ಕೇರುವ ಇತಿಹಾಸ ಸೃಷ್ಟಿಸಿದೆ ಈ ಫಲಿತಾಂಶ.

ಕಾಂಗ್ರೆಸ್ ಕೈತಪ್ಪಿತು ಮತ್ತೊಂದು ರಾಜ್ಯ
ಈಗಾಗಲೇ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಸರಕಾರವನ್ನು ಉಳಿಸಿಕೊಂಡಿದೆ. ಆದರೆ, ಪಂಜಾಬ್‌ನಲ್ಲಿ ಕಾಂಗ್ರೆಸ್ ಪಕ್ಷವನ್ನು ಇಳಿಸಿ ಆಮ್ ಆದ್ಮೀ ಪಾರ್ಟಿ ಗೆಲುವಿನ ಧಾವಂತದಲ್ಲಿರುವುದು 'ಚುನಾವಣೆ ಗೆಲ್ಲುವುದು ಹೇಗೆ' ಎಂಬ ಬಗ್ಗೆ ಉಳಿದ ರಾಜಕೀಯ ಪಕ್ಷಗಳಿಗೂ ಪಾಠವಾಗಿದೆ. ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಗಳಿಗಾಗುತ್ತಿರುವ ಸೋಲು, ಆ ಪಕ್ಷದ ರಾಜಕೀಯ ಭವಿಷ್ಯದ ಪಂಚಾಂಗವನ್ನೇ ಬುಡಮೇಲು ಮಾಡಿದಂತಾಗಿದೆ. ಈ ಸೋಲಿನ ಸಂಚಲನವು ಕಾಂಗ್ರೆಸ್ ಮೇಲೆ ದೂರಗಾಮಿ ಪರಿಣಾಮದ ಬೆಳವಣಿಗೆಗಳಿಗೆ ಕಾರಣವಾಗಲಿವೆ.

ಪಂಜಾಬ್ ಕೂಡ ಕಾಂಗ್ರೆಸ್ ಕೈತಪ್ಪಿರುವುದರೊಂದಿಗೆ ಒಂದು ಕಾಲದಲ್ಲಿ ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರ ಹೊಂದಿದ್ದ ಕಾಂಗ್ರೆಸ್ ಪಕ್ಷದ ಬಳಿ ಈಗ ರಾಜಸ್ಥಾನ ಮತ್ತು ಛತ್ತೀಸಗಢ ರಾಜ್ಯಗಳಲ್ಲಿ ಮಾತ್ರ ಪೂರ್ಣಪ್ರಮಾಣದ ಅಧಿಕಾರ ಇರುವಂತಾಗಿದೆ. ಮಹಾರಾಷ್ಟ್ರ ಮತ್ತು ಜಾರ್ಖಂಡ್‌ಗಳಲ್ಲಿ ಅದು ಆಡಳಿತಾರೂಢ ಮೈತ್ರಿಕೂಟದ ಜೊತೆ ಸೇರಿಕೊಂಡು ಸರಕಾರದ ಭಾಗವಾಗಿದೆ. 2014ರಲ್ಲಿ ಯುಪಿಎ ಅಧಿಕಾರ ಕಳೆದುಕೊಂಡ ಬಳಿಕ ಕಾಂಗ್ರೆಸ್ ಪಕ್ಷವು ರಾಜ್ಯಗಳಲ್ಲಿಯೂ ಅಧಿಕಾರ ಕಳೆದುಕೊಳ್ಳುತ್ತಾ ಹೋಗಿದೆ.

ಕಾಂಗ್ರೆಸ್‌ನ ಈ ದುರ್ಬಲ ಪ್ರದರ್ಶನವು, ಮುಂದೊತ್ತಿ ಬರುತ್ತಿರುವ ಬಿಜೆಪಿ ವಿರುದ್ಧ 2024ರ ಚುನಾವಣೆಗೆ ಪ್ರತಿಪಕ್ಷಗಳನ್ನು ಒಗ್ಗಟ್ಟಾಗಿಸುವ ಪ್ರಕ್ರಿಯೆಗೆ ದೊಡ್ಡ ಹಿನ್ನಡೆಯಾದರೆ, ಬಿಜೆಪಿಗೆ ಆನೆ ಬಲ ಬಂದಂತಾಗಿದೆ. ಕಾಂಗ್ರೆಸ್ ಪಕ್ಷ ಮತ್ತೆ ಏಕಾಂಗಿಯಾಗುತ್ತಿದ್ದು, ಅದರ ನಾಯಕತ್ವದ ಮೇಲೂ ಪ್ರಭಾವ ಬೀರಲಿದೆ. ಸೋನಿಯಾ ಗಾಂಧಿ ಕುಟುಂಬವು ಬಿಕ್ಕಟ್ಟು ಎದುರಿಸುವ ಸಾಧ್ಯತೆಗಳಿವೆ. ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಗೆ ಆಗ್ರಹಿಸಿದ್ದ ಜಿ–23 ಅಭಿಯಾನಕ್ಕೂ ದೈತ್ಯಬಲವೇ ಸಿಕ್ಕಿದೆ.

ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ
ಮತದಾನೋತ್ತರ ಸಮೀಕ್ಷೆಗಳಲ್ಲಿ ವ್ಯಕ್ತವಾದ ಮುನ್ಸೂಚನೆಗಳಂತೆಯೇ ಪ್ರಧಾನಿ ನರೇಂದ್ರ ಮೋದಿ- ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿಯು ಬಹುಮತದತ್ತ ದಾಪುಗಾಲಿಡುತ್ತಿದ್ದು, ಸಮಾಜವಾದಿ ಪಕ್ಷ ಮೈತ್ರಿಕೂಟವು ಬಿಜೆಪಿ ಕ್ಷೇತ್ರಗಳಲ್ಲಿ ಅನೇಕ ಸ್ಥಾನಗಳನ್ನು ಕಸಿದುಕೊಳ್ಳುತ್ತಿರುವಂತಿದೆ. ಕಳೆದ ಬಾರಿ ಕೇವಲ 47 ಸ್ಥಾನ ಗೆದ್ದಿದ್ದ ಎಸ್ಪಿ ಮೈತ್ರಿಕೂಟವು ಈ ಬಾರಿ 115ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವುದು ಬಿಜೆಪಿಗೆ ಎಚ್ಚರಿಕೆಯ ಕರೆಗಂಟೆ. ಬಿಜೆಪಿಯು 312ರಿಂದ 250ರ ಆಸುಪಾಸಿನ ಸಂಖ್ಯೆಗೆ ಇಳಿದಿದೆಯಾದರೂ, ಪೂರ್ಣ ಬಹುಮತ ಪಡೆಯುವಲ್ಲಿ ಸಫಲವಾಗಲಿದೆ.

[object Object]

ಸಮಾಜವಾದಿ ಪಕ್ಷದ ಸಾಧನೆ ಉತ್ತಮ ಎಂದು ಹೇಳಬಹುದಾದರೂ, ಮಿತ್ರಕೂಟದ ಪಕ್ಷಗಳ ಜೊತೆಗಿನ ರಾಜಕೀಯ ಹೊಂದಾಣಿಕೆಯೇ ಅದಕ್ಕೆ ಮುಳುವಾಗಿರುವುದು ಹಲವು ಕ್ಷೇತ್ರಗಳ ಫಲಿತಾಂಶವನ್ನು ಪರಾಮರ್ಶಿಸಿದಾಗ ತಿಳಿದುಬರುವ ಅಂಶ. ಒಂದು ಕಾಲದಲ್ಲಿ ರಾಜ್ಯವಾಳಿದ್ದ ಬಹುಜನ ಸಮಾಜ ಪಕ್ಷದ ನಿಗೂಢ ಮೌನ, ಆರ್‌ಎಲ್‌ಡಿ-ಎಸ್ಪಿ ಮೈತ್ರಿ - ಇವೆಲ್ಲವೂ ಚುನಾವಣೆಯಲ್ಲಿ ಪ್ರಧಾನ ಪಾತ್ರ ವಹಿಸಿವೆ.

403 ಕ್ಷೇತ್ರಗಳಿರುವ ಉತ್ತರಪ್ರದೇಶದಲ್ಲಿ 2017ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟವು ಭರ್ಜರಿ 312 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಿತ್ತು. ಎಸ್ಪಿ 47, ಬಿಎಸ್ಪಿ 19, ಕಾಂಗ್ರೆಸ್ 7 ಹಾಗೂ ಇತರರು 18 ಸ್ಥಾನಗಳನ್ನು ಗೆದ್ದುಕೊಂಡಿದ್ದರು.

ಪಂಜಾಬ್‌ನಲ್ಲಿ ಒಳಜಗಳಕ್ಕೆ ಬೆಲೆ ತೆತ್ತ ಕಾಂಗ್ರೆಸ್, ಆಮ್ ಆದ್ಮಿಗೆ ಲಾಭ
ಪಂಜಾಬ್‌ನಲ್ಲಿ ಎಎಪಿ ಸಾಧಿಸಿರುವ ಮುನ್ನಡೆಯು, ಕಾಂಗ್ರೆಸ್, ಬಿಜೆಪಿ ಹಾಗೂ ಅಕಾಲಿ ದಳಗಳಿಗೆ ತೊಡಕಾಗಲಿದೆ. ಮತಗಟ್ಟೆ ಸಮೀಕ್ಷೆಗಳೆಲ್ಲವೂ ಪಂಜಾಬ್‌ನಲ್ಲಿ ಎಎಪಿ ಗೆಲ್ಲಲಿದೆ ಎಂದೇ ಹೇಳಿದ್ದವು. ಇಲ್ಲಿ ಆಡಳಿತಾರೂಢ ಕಾಂಗ್ರೆಸ್ ಸಂಖ್ಯಾಬಲವು ಕುಸಿಯುತ್ತಿದ್ದು, ಕಾಂಗ್ರೆಸ್ ತೊರೆದಿದ್ದ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹಾಗೂ ಪಿಸಿಸಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ನಡುವಿನ ಅಂತರ್ಕಲಹ ದೊಡ್ಡ ವ್ರಣದಂತೆ ಬೆಳೆದಿತ್ತು. ಇದೇ ಕಾಂಗ್ರೆಸ್‌ಗೆ ಮುಳುವಾಗಿ, ಕೊನೆ ಕ್ಷಣದಲ್ಲಿ ದಲಿತ ಮುಖ್ಯಮಂತ್ರಿಯನ್ನು ಸ್ಥಾಪಿಸಿದ್ದರೂ ಅದರಿಂದ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇಲ್ಲಿ ಕಾಂಗ್ರೆಸ್ ಸ್ಥಾನವು 77 ಇದ್ದದ್ದು 18ಕ್ಕೆ ನಿಲ್ಲುವ ಸಾಧ್ಯತೆಗಳಿವೆ.

[object Object]

ಆಮ್ ಆದ್ಮೀ ಪಕ್ಷದ ಗೆಲುವು ಅಚ್ಚರಿಯನ್ನೇ ಮೂಡಿಸಿದೆ. ಕಳೆದ ಬಾರಿ ಕೇವಲ 20 ಸ್ಥಾನ ಗೆದ್ದಿದ್ದ ಆಪ್, ಈ ಬಾರಿ 92 ಕ್ಷೇತ್ರಗಳನ್ನು ಗೆದ್ದುಕೊಳ್ಳಲು ಸಿದ್ಧವಾಗಿದ್ದು, ದೆಹಲಿಯಾಚೆಗೂ ತನ್ನ ಹಿಡಿತವನ್ನು ವಿಸ್ತರಿಸಿದಂತಾಗಿದೆ. ಇಷ್ಟು ಭರ್ಜರಿ ಸ್ಥಾನಗಳೊಂದಿಗೆ ಅದು ತನ್ನ ಚುನಾವಣಾ ಚಿಹ್ನೆಯಾದ ಪೊರಕೆಯಿಂದ ಕಾಂಗ್ರೆಸ್ಸನ್ನು ಗುಡಿಸಿದೆ ಎಂದೇ ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕರು ಬರೆದುಕೊಂಡಿದ್ದಾರೆ.

ಕಳೆದ (2017) ಚುನಾವಣೆಗಳಲ್ಲಿ 77 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್, ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದಲ್ಲಿ ಸರಕಾರ ರಚಿಸಿತ್ತು. ಆಂತರಿಕ ಕಲಹದಿಂದಾಗಿ ಮುಖ್ಯಮಂತ್ರಿ ಅಮರಿಂದರ್ ಪಕ್ಷದಿಂದಲೇ ಹೊರಬಂದಿದ್ದರೆ, ಸಿಧು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದರು. ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಕಳೆದ ಚುನಾವಣೆಗಳಲ್ಲಿ ಕಾಂಗ್ರೆಸ್ 77, ಆಪ್ 20, ಶಿರೋಮಣಿ ಅಕಾಲಿ ದಳ (SAD) 15, ಬಿಜೆಪಿ 3 ಹಾಗೂ ಇತರರು (ಲೋಕ ಇನ್ಸಾಫ್ ಪಾರ್ಟಿ) 2 ಸ್ಥಾನಗಳನ್ನು ಗೆದ್ದಿದ್ದರು. ಒಟ್ಟು 117 ಸ್ಥಾನಗಳಲ್ಲಿ ಬಹುಮತಕ್ಕೆ ಬೇಕಾಗಿರುವುದು 59.

ಗೋವಾದಲ್ಲಿ ಅತಂತ್ರ
ಪಕ್ಷಾಂತರಕ್ಕೆ ಹೆಸರಾಗಿರುವ ಪುಟ್ಟ ರಾಜ್ಯ ಗೋವಾದಲ್ಲಿ, ಸಮೀಕ್ಷೆಗಳು ಪ್ರಕಟವಾಗುತ್ತಿರುವಂತೆಯೇ ಕಾಂಗ್ರೆಸ್ ಪಕ್ಷವು ಕರ್ನಾಟಕದ ಪಿಸಿಸಿ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ವಿಶೇಷ ವೀಕ್ಷಕರಾಗಿ ಕಳುಹಿಸಿ, ಹೇಗಾದರೂ ಮಾಡಿ ಸರಕಾರ ರಚಿಸುವ ಯಾವುದೇ ಅವಕಾಶ ತಪ್ಪಿಸಬಾರದು ಎಂದು ಯೋಚಿಸಿ, ಎಲ್ಲ ಅಭ್ಯರ್ಥಿಗಳನ್ನೂ ರೆಸಾರ್ಟ್‌ಗೆ ಕಳುಹಿಸಿತ್ತು. ಆದರೆ, ಫಲಿತಾಂಶವು ಬಿಜೆಪಿಯ ಕಡೆಗೇ ವಾಲುತ್ತಿದೆ.

[object Object]

2017ರ (ಹಿಂದಿನ) ಚುನಾವಣೆಗಳಲ್ಲಿ ಗೋವಾದ 40 ಸ್ಥಾನಗಳಲ್ಲಿ 13 ಸ್ಥಾನ ಗೆದ್ದ ಬಿಜೆಪಿಯು ಇತರ 10 ಮಂದಿಯ ಬೆಂಬಲದೊಂದಿಗೆ ಸರಕಾರ ರಚಿಸಿತ್ತು. ಕಾಂಗ್ರೆಸ್ 17 ಸ್ಥಾನಗಳನ್ನು ಗಳಿಸಿತ್ತು. ಬಹುಮತಕ್ಕೆ 21 ಸ್ಥಾನಗಳ ಅಗತ್ಯವಿದೆ. ಈ ಬಾರಿಯ ಫಲಿತಾಂಶದ ಪ್ರಕಾರ, ಕಾಂಗ್ರೆಸ್ 11, ಬಿಜೆಪಿ 20, ಆಪ್ 2 ಹಾಗೂ ಇತರರು 7 ಕ್ಷೇತ್ರಗಳನ್ನು ಗೆದ್ದು, ಬಿಜೆಪಿಯು ಅತಿದೊಡ್ಡ ಪಕ್ಷವಾಗಿ ಮೂಡಿಬಂದಿದೆ.

ಉತ್ತರಾಖಂಡದಲ್ಲಿ ಮತ್ತೆ ಬಿಜೆಪಿ
ಈ ರಾಜ್ಯದಲ್ಲಿ 70 ಸ್ಥಾನಗಳ ಪೈಕಿ ಬಹುಮತಕ್ಕೆ ಬೇಕಿರುವುದು 36 ಸ್ಥಾನಗಳು. ಅಧಿಕಾರಾರೂಢ ಬಿಜೆಪಿಯು ಈ ಬಾರಿಯೂ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿದೆ. ಕಳೆದ ಬಾರಿ (2017) ಚುನಾವಣೆಗಳಲ್ಲಿ ಇಲ್ಲಿ ಬಿಜೆಪಿ 57, ಕಾಂಗ್ರೆಸ್ 11 ಹಾಗೂ ಇತರರು 2 ಸ್ಥಾನಗಳನ್ನು ಗೆದ್ದಿದ್ದರು. ಈ ಬಾರಿ ಬಿಜೆಪಿ 47, ಕಾಂಗ್ರೆಸ್ 19 ಹಾಗೂ ಇತರರು 4 ಸ್ಥಾನ ಗೆಲ್ಲುವತ್ತ ದಾಪುಗಾಲಿಟ್ಟಿದ್ದಾರೆ. ಈ ಬಾರಿಯ ಫಲಿತಾಂಶದ ಪ್ರಕಾರ, ಕಾಂಗ್ರೆಸ್ ಇಲ್ಲಿ ತನ್ನ ಬಲವನ್ನು ಒಂದಿಷ್ಟು ಹೆಚ್ಚಿಸಿಕೊಂಡಿದ್ದಂತೂ ಸತ್ಯ. ಬಿಜೆಪಿಯ ಸಂಖ್ಯಾ ಬಲ ಕುಸಿದಿದೆ.

[object Object]

ಮಣಿಪುರದಲ್ಲೂ ಕಮಲ
ಕಳೆದ ಚುನಾವಣೆಗಳಲ್ಲಿ ಬಿಜೆಪಿ 21 ಸ್ಥಾನಗಳನ್ನು ಗೆದ್ದು ಇತರರ ನೆರವಿನೊಂದಿಗೆ ಅಧಿಕಾರಕ್ಕೇರಿತ್ತು. ಇತರರು 10, ಟಿಎಂಸಿ 1 ಹಾಗೂ ಕಾಂಗ್ರೆಸ್ 28 ಸ್ಥಾನಗಳಲ್ಲಿ ವಿಜಯಿಯಾಗಿತ್ತು. ಒಟ್ಟು 60 ಸ್ಥಾನಗಳಲ್ಲಿ ಬಹುಮತಕ್ಕೆ ಬೇಕಿರುವುದು 31 ಸಂಖ್ಯೆ. ಈ ಬಾರಿಯ ಫಲಿತಾಂಶದ ಪ್ರಕಾರ, ಬಿಜೆಪಿಯು ತನ್ನ ಬಲವನ್ನು ಹೆಚ್ಚಿಸಿಕೊಂಡಿದೆ. ಈ ಬಾರಿ 25 ಕ್ಷೇತ್ರಗಳಲ್ಲಿ ಅದು ಮುನ್ನಡೆಯಲ್ಲಿದ್ದರೆ, ಕಾಂಗ್ರೆಸ್ ಸಂಖ್ಯಾಬಲದಲ್ಲಿ ಹೀನಾಯವಾಗಿ ಸ್ಥಾನಗಳನ್ನು ಕಳೆದುಕೊಂಡಿದೆ. ಹಿಂದೆ 28 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 5 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಇತರರು, ಸ್ವತಂತ್ರರು 19 ಮಂದಿ ಮುನ್ನಡೆಯಲ್ಲಿರುವುದು ವಿಶೇಷ.

[object Object]

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT