ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ–ಭಾರತ ರಕ್ಷಣಾ ಸಂಬಂಧ ವೃದ್ಧಿಗೆ ಆದ್ಯತೆ: ಲಾಯ್ಡ್‌ ಆಸ್ಟಿನ್‌

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌– ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌ ಮಾತುಕತೆ
Last Updated 20 ಮಾರ್ಚ್ 2021, 17:14 IST
ಅಕ್ಷರ ಗಾತ್ರ

ನವದೆಹಲಿ: ‘ಅಮೆರಿಕ–ಭಾರತ ರಕ್ಷಣಾ ಸಹಭಾಗಿತ್ವವನ್ನು ಬಲಪಡಿಸುವುದು ಜೋ ಬೈಡನ್‌ ನೇತೃತ್ವದ ಆಡಳಿತದ ಆದ್ಯತೆಯಾಗಿದೆ’ ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಜನರಲ್‌ ಲಾಯ್ಡ್‌ ಆಸ್ಟಿನ್‌ ಶನಿವಾರ ಹೇಳಿದ್ದಾರೆ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಜತೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಉಭಯ ದೇಶಗಳ ಸಂಬಂಧ ಬಲಿಷ್ಠವಾಗಿದೆ. ಭಾರತದ ಜತೆಗಿನ ಜತೆ ರಕ್ಷಣಾ ಒಪ್ಪಂದಗಳನ್ನು ಮುಂದುವರಿಸಲು ಬದ್ಧವಾಗಿದ್ದೇವೆ’ ಎಂದು ಹೇಳಿದ್ದಾರೆ.

ಶುಕ್ರವಾರ ಇಲ್ಲಿಗೆ ಆಗಮಿಸಿರುವ ಅವರು, ’ಜಗತ್ತು ಸಾಂಕ್ರಾಮಿಕ ಕಾಯಿಲೆಯಿಂದ ಹಲವು ಸಮಸ್ಯೆಗಳು ಮತ್ತು ಸವಾಲುಗಳನ್ನು ಎದುರಿಸುತ್ತಿದೆ. ಇಂಡೊ–ಪೆಸಿಫಿಕ್‌ ಪ್ರದೇಶದಲ್ಲಿ ಪರಸ್ಪರ ಸಹಕಾರ ಅಗತ್ಯವಾಗಿದೆ. ಭವಿಷ್ಯದ ದೃಷ್ಟಿಯಿಂದ ಸಮಾನ ಮನಸ್ಕ ರಾಷ್ಟ್ರಗಳ ನಡುವಣ ಸ್ನೇಹ ಸಂಬಂಧ ವೃದ್ಧಿಸಬೇಕಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಮುಸ್ಲಿಂ ಸಮುದಾಯದ ಜತೆ ತಾರತಮ್ಯ ಮಾಡಲಾಗುತ್ತಿದೆ ಎನ್ನುವ ಆರೋಪಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಪ್ರಸ್ತಾಪಿಸಲಾಗಿದೆಯೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈ ವಿಷಯದ ಬಗ್ಗೆ ಅವರ ಜತೆ ಚರ್ಚಿಸಲು ಅವಕಾಶ ದೊರೆಯಲಿಲ್ಲ. ಆದರೆ, ಕೇಂದ್ರ ಸಚಿವ ಸಂಪುಟದ ಸದಸ್ಯರೊಬ್ಬರ ಜತೆ ಚರ್ಚಿಸಿದ್ದೇನೆ’ ಎಂದು ಹೇಳಿದರು.

‘ಭಾರತದ ಜತೆ ನಾವು ಉತ್ತಮ ಸ್ನೇಹ ಹೊಂದಿದ್ದೇವೆ. ಈ ಸ್ನೇಹವನ್ನು ನಾವು ಗೌರವಿಸುತ್ತೇವೆ. ಹೀಗಾಗಿ, ಸ್ನೇಹಿತರು ಇಂತಹ ಯಾವುದೇ ವಿಷಯಗಳ ಬಗ್ಗೆಯೂ ಚರ್ಚಿಸಬಹುದು. ಅರ್ಥಪೂರ್ಣವಾಗಿ ಚರ್ಚೆ ನಡೆಸಿ ಪ್ರಗತಿ ಸಾಧಿಸಬಹುದು. ಪ್ರಜಾಪ್ರಭುತ್ವದಲ್ಲಿ ಮಾನವ ಹಕ್ಕುಗಳು ಮತ್ತು ಕಾನೂನು ಮಹತ್ವ ಪಡೆದಿವೆ’’ ಎಂದು ಪ್ರತಿಪಾದಿಸಿದರು.

ಅಮೆರಿಕ ನಿರ್ಬಂಧ ವಿಧಿಸುವ ಬೆದರಿಕೆಯ ನಡುವೆಯೂ ರಷ್ಯಾದಿಂದ ಎಸ್‌–400 ಕ್ಷಿಪಣಿಗಳನ್ನು ಭಾರತ ಖರೀದಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಆಸ್ಟಿನ್‌ ‘ಭಾರತಕ್ಕೆ ಇನ್ನೂ ಕ್ಷಿಪಣಿಗಳನ್ನು ವಿತರಿಸಿಲ್ಲ. ಹೀಗಾಗಿ, ನಿರ್ಬಂಧ ವಿಧಿಸುವ ಬಗ್ಗೆ ಯಾವುದೇ ರೀತಿ ಮಾತುಕತೆ ನಡೆಸಿಲ್ಲ. ಆದರೆ, ರಷ್ಯಾದಿಂದ ಉಪಕರಣಗಳನ್ನು ಖರೀದಿಸಬಾರದು ಎಂದು ನಮ್ಮ ಆಪ್ತ ರಾಷ್ಟ್ರಗಳನ್ನು ಒತ್ತಾಯಿಸುತ್ತೇವೆ’ ಎಂದು ಹೇಳಿದರು.

ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಅವರನ್ನು ಆಸ್ಟಿನ್‌ ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಭಾರತ ಪ್ರವಾಸ ಕೈಗೊಳ್ಳುವ ಮುನ್ನ ಜಪಾನ್‌ ಮತ್ತು ದಕ್ಷಿಣ ಕೊರಿಯಾಕ್ಕೆ ಆಸ್ಟಿನ್‌ ಭೇಟಿ ನೀಡಿದ್ದರು. ಇಂಡೊ–ಪೆಸಿಫಿಕ್‌ ಪ್ರದೇಶ ರಾಷ್ಟ್ರಗಳಲ್ಲಿನ ಆಪ್ತ ರಾಷ್ಟ್ರಗಳ ಜತೆಗಿನ ಸಂಬಂಧವನ್ನು ವೃದ್ಧಿಸುವ ನಿಟ್ಟಿನಲ್ಲಿ ಜೋ ಬೈಡನ್‌ ಆಡಳಿತ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೀಗಾಗಿಯೇ ಆಸ್ಟಿನ್‌ ಅವರು ಈ ಮೂರು ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT