ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಯಿರಿ: ಆನೆ ದುರಂತದ ಹಿನ್ನೆಲೆಯಲ್ಲಿ ಸಿಜೆಐಗೆ ಪತ್ರ

ಆನೆಯ ಮೇಲೆ ಬೆಂಕಿ ಹಚ್ಚಿದ ಚಕ್ರ ಎಸೆದ ಘಟನೆ ಬೆನ್ನಲ್ಲೇ ಸಿಜೆಐಗೆ ಪತ್ರ
Last Updated 23 ಜನವರಿ 2021, 11:45 IST
ಅಕ್ಷರ ಗಾತ್ರ

ನವದೆಹಲಿ: ತಮಿಳುನಾಡಿನಲ್ಲಿ ಕೆಲ ಜನರು ಆನೆಯೊಂದರ ಮೇಲೆ ಬೆಂಕಿಹಚ್ಚಿದ್ದ ಟೈರ್‌ ಎಸೆದ ಘಟನೆ ಬೆನ್ನಲ್ಲೇ ಪ್ರಾಣಿಗಳ ಮೇಲೆ ನಡೆಯುತ್ತಿರುವ ಕ್ರೌರ್ಯವನ್ನು ಕೊನೆಗಾಣಿಸಲು ತಾವು ಮಧ್ಯಪ್ರವೇಶಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ ವಕೀಲರೊಬ್ಬರು ಮುಖ್ಯ ನ್ಯಾಯಮೂರ್ತಿಯವರಿಗೆ ಪತ್ರ ಬರೆದಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಜನರು ಎಸೆದ ಚಕ್ರವು 50 ವರ್ಷದ ಈ ಆನೆಯ ತಲೆಯಲ್ಲಿ ಸಿಲುಕಿದ ಕಾರಣ, ಸುಟ್ಟ ಗಾಯಗಳಿಂದ ಅದು ಮೃತಪಟ್ಟಿದೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ‘ಈ ಹೃದಯವಿದ್ರಾವಕ ದೃಶ್ಯವು ಯಾವುದೇ ವ್ಯಕ್ತಿಯ ಮನಸ್ಸಾಕ್ಷಿಯನ್ನು ಕದಡಬಲ್ಲದು’ ಎಂದು ವಕೀಲರಾದ ಕೆ.ನೆಡುಂಪರ ಅವರು ಎಸ್‌.ಎ.ಬೊಬಡೆ ಅವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಮಿಳುನಾಡಿನ ನೀಲ್‌ಗಿರಿ ಜಿಲ್ಲೆಯಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಮುದುಮಲೈ ಅರಣ್ಯ ಇಲಾಖೆಯು ಇಬ್ಬರನ್ನು ಬಂಧಿಸಿದ್ದಾರೆ. ಈ ಘಟನೆಯು, ಕಳೆದ ವರ್ಷ ಕೇರಳದಲ್ಲಿ ನಡೆದ ಗರ್ಭಿಣಿ ಆನೆಯ ಹತ್ಯೆಯ ನೆನಪನ್ನು ಮರುಕಳಿಸಿದೆ. ಈ ಘಟನೆ ನಡೆದ ಸಂದರ್ಭದಲ್ಲೂ ನೆಡುಂಪರ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

‘ನಾನು ಇತ್ತೀಚೆಗೆ ಸಲ್ಲಿಸಿರುವ ಈ ಪತ್ರವನ್ನು ಅರ್ಜಿ ಎಂದೇ ಪರಿಗಣಿಸಿ. ಈ ಹಿಂದೆ ಕೇವಲ ಕೇಂದ್ರ ಸರ್ಕಾರಕ್ಕೆ ಕೆಲ ನಿರ್ದೇಶನಗಳನ್ನು ನೀಡಿ, ಕಳೆದ ಬಾರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಲಾಗಿತ್ತು. ಇದು ಸಮರ್ಪಕವಾಗಿಲ್ಲ. ಈ ಬಾರಿ ನನ್ನ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಎಂದು ಪರಿಗಣಿಸಿ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಗಾಯಗೊಂಡಿದ್ದ ಈ ಆನೆಯು ಮೊದಲ ಬಾರಿಗೆ ನವೆಂಬರ್‌ನಲ್ಲಿ ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಅದನ್ನು ಹಿಡಿದು, ಚಿಕಿತ್ಸೆ ನೀಡಿ ಮತ್ತೆ ಅರಣ್ಯಕ್ಕೆ ಬಿಡಲಾಗಿತ್ತು. ಇತ್ತೀಚೆಗೆ ಈ ಆನೆಯು ಮನುಷ್ಯರು ವಾಸಿಸುವ ಪ್ರದೇಶಕ್ಕೆ ಹತ್ತಿರ ಬಂದಿದೆ. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಅದನ್ನು ಓಡಿಸಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲೇ ಬೆಂಕಿ ಹಚ್ಚಿದ ಟೈರ್‌ವೊಂದನ್ನು ಅದರ ಮೇಲೆ ಎಸೆದಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದರು.

ಬೆಂಕಿ ಹೊತ್ತಿ ಉರಿಯುತ್ತಿದ್ದ ಚಕ್ರವು ಅದರ ತಲೆಗೆ ಸಿಲುಕಿರುವುದು ಹಾಗೂ ಗಾಬರಿಗೊಂಡ ಆನೆಯು ಓಡುತ್ತಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ನಂತರದಲ್ಲಿ ಸುಟ್ಟ ಗಾಯಗಳಿಂದ ಆನೆಯು ಮೃತಪಟ್ಟಿದೆ ಎಂದು ಅಧಿಕಾರಿಗಳು ಹೇಳಿದರು. ವಿಡಿಯೊ ಸಾಕ್ಷಿ ಆಧರಿಸಿ, ಪ್ರಸಾದ್‌ ಹಾಗೂ ರೇಮಂಡ್‌ ಎಂಬಿಬ್ಬರನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ರಿಕಿ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT