ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ ಚುನಾವಣೆ: ಸ್ಪರ್ಧೆಗೆ ಸಜ್ಜಾಗುತ್ತಿವೆ ವಿವಿಧ ಪಕ್ಷಗಳು

ಟಿಎಂಸಿ, ಎರಡು ಪ್ರಾದೇಶಿಕ ಪಕ್ಷಗಳ ಪ್ರವೇಶ
Last Updated 3 ಅಕ್ಟೋಬರ್ 2021, 9:34 IST
ಅಕ್ಷರ ಗಾತ್ರ

ಪಣಜಿ: ಮುಂದಿನ ವರ್ಷ ನಡೆಯಲಿರುವ ಗೊವಾ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಹಾಗೂ ಎರಡು ಪ್ರಾದೇಶಿಕ ಪಕ್ಷಗಳು ಮುಂದಾಗಿವೆ. ಇದರಿಂದ ಗೋವಾದಲ್ಲಿ ಚುನಾವಣಾ ಕಾವು ಈಗಿನಿಂದಲೇ ಏರತೊಡಗಿದ್ದು ಬಹು ಪಕ್ಷೀಯ ಪೈಪೋಟಿ ತೀವ್ರವಾಗುವ ಸಾಧ್ಯತೆಗಳಿವೆ.

ಆಡಳಿತಾರೂಢ ಬಿಜೆಪಿ, ವಿರೋಧ ಪಕ್ಷ ಕಾಂಗ್ರೆಸ್‌, ಎಎಪಿ ಮತ್ತು ಶಿವಸೇನಾ ಕೂಡಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ಚಿಂತಿಸಿರುವುದು ಕುತೂಹಲ ಮೂಡಿಸಿದೆ.

ಇದೇ ಮೊದಲ ಬಾರಿಗೆ ಗೋವಾ ಫಾರ್ವರ್ಡ್‌ ಪಾರ್ಟಿ (ಜಿಎಫ್‌ಪಿ) ಮತ್ತು ಮಹಾರಾಷ್ಟ್ರವಾದಿ ಗೋಮಂತಕ್‌ ಪಾರ್ಟಿ (ಎಂಜಿಪಿ) ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿವೆ.

ರಾಜ್ಯದಲ್ಲಿ 2012ರಿಂದ ಅಧಿಕಾರದಲ್ಲಿರುವ ಬಿಜೆಪಿ ಸತತ ಮೂರನೇ ಅವಧಿಗೂ ಅಧಿಕಾರದ ಚುಕ್ಕಾಣಿ ಹಿಡಿಯಲು ಹವಣಿಸುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಗಳು ಕಣದಲ್ಲಿ ಇದ್ದರೆ ವಿರೋಧ ಪಕ್ಷಗಳ ಮತಗಳು ವಿಭಜನೆಯಾಗಿ ತನಗೆ ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ.

ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ಟಿಎಂಸಿ, ಗೋವಾದ ಎಲ್ಲ 40 ಸ್ಥಾನಗಳಿಗೆ ಸ್ಪರ್ಧಿಸುವುದಾಗಿ ಇತ್ತೀಚೆಗೆ ಘೋಷಿಸಿದೆ. ಕಾಂಗ್ರೆಸ್‌ನ ಮಾಜಿ ಶಾಸಕ ಲುಯಿಜಿನೊ ಫೆಲೆರೊ ಹಾಗೂ ಎಂಜಿಪಿಯ ನಾಯಕ ಲಾವು ಮಮ್ಲದರ್ ಅವರು ಈಚೆಗೆ ಟಿಎಂಸಿ ಸೇರಿದ್ದಾರೆ.

2017ರ ಗೋವಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಎಪಿ, ಖಾತೆ ತೆರೆಯುವಲ್ಲಿ ವಿಫಲವಾಗಿತ್ತು. ಈ ಬಾರಿ ಮತ್ತೆ ಸ್ಪರ್ಧಿಸಿ ಖಾತೆ ತೆರೆಯುವ ನಿರೀಕ್ಷೆಯಲ್ಲಿದೆ.

ವಿರೋಧ ಪಕ್ಷ ಕಾಂಗ್ರೆಸ್‌ ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲು ರಣತಂತ್ರ ಹೆಣೆಯುತ್ತಿದೆ. 40 ವಿಧಾನಸಭಾ ಕ್ಷೇತ್ರಗಳಿರುವ ಗೋವಾದಲ್ಲಿ 2017ರಲ್ಲಿ ಕಾಂಗ್ರೆಸ್‌ 17 ಕ್ಷೇತ್ರಗಳಲ್ಲಿ, ಬಿಜೆಪಿ 13 ಕ್ಷೇತ್ರಗಳಲ್ಲಿ ಜಯಗಳಿಸಿದ್ದವು. ಆದರೆ ಬಿಜೆಪಿಯು ವಿವಿಧ ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿತ್ತು.

ರಾಜ್ಯದಲ್ಲಿ ಎನ್‌ಸಿಪಿ ಏಕೈಕ ಶಾಸಕನನ್ನು ಹೊಂದಿದ್ದು ಅಸ್ತಿತ್ವದಲ್ಲಿದೆ. ಶಿವಸೇನಾ ಪಕ್ಷವು ಗೋವಾದಲ್ಲಿ 22ರಿಂದ 25 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಇತ್ತೀಚೆಗೆ ಶಿವಸೇನಾ ನಾಯಕ ಸಂಜಯ್‌ ರಾವತ್‌ ಅವರು ಹೇಳಿದ್ದರು.

ಗೋವಾದಲ್ಲಿ ಬಿಜೆಪಿಯನ್ನು ಸೋಲಿಸಲು ವಿರೋಧ ಪಕ್ಷಗಳೆಲ್ಲ ಒಗ್ಗೂಡಬೇಕಿದೆ ಎಂದು ಕೆಲ ನಾಯಕರು ಭಾವಿಸಿದ್ದಾರೆ. ಇದಕ್ಕಾಗಿ ವಿರೋಧ ಪಕ್ಷಗಳ ಒಕ್ಕೂಟವನ್ನು ಸಂಘಟಿಸುವ ಅಗತ್ಯವಿದೆ ಎಂದೂ ಕೆಲವರು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT