ಶುಕ್ರವಾರ, ಮೇ 14, 2021
32 °C
ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಸಿಗದ ಆಮ್ಲಜನಕ; ವಿವಿಧ ರಾಜ್ಯಗಳಲ್ಲಿ ಅಭಾವ

ಆಮ್ಲಜನಕ ಲಭ್ಯತೆ ಪರಿಶೀಲಿಸಿ: ಹೈಕೋರ್ಟ್

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್ ಪ್ರಕರಣಗಳು ತೀವ್ರಗತಿ ಯಲ್ಲಿ ಏರುತ್ತಿರುವ ಕಾರಣ ವಿವಿಧ ರಾಜ್ಯಗಳಲ್ಲಿ ಆಮ್ಲಜನಕ ಸಿಲಿಂಡರ್ ಲಭ್ಯತೆ ಬಗ್ಗೆ ಪರಿಶೀಲನೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಸೋಮವಾರ ಸೂಚನೆ ನೀಡಿದೆ.

ಆಮ್ಲಜನಕ ಕೊರತೆ ಬಗ್ಗೆ ಆತಂಕ ವ್ಯಕ್ತವಾಗುತ್ತಿದ್ದು, ತುರ್ತಾಗಿ ಪೂರೈಸಲು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ. ಕೋವಿಡ್ ಪ್ರಕರಣಗಳು ಹೆಚ್ಚಿರುವ ಕಡೆಗಳಿಗೆ ಆ‌ಮ್ಲಜನಕ ಪೂರೈಕೆಯನ್ನು ಆದ್ಯತೆಯ ಮೇರೆಗೆ ಪೂರೈಸಬೇಕು ಎಂದು ಸೂಚಿಸಿದೆ.

ದೆಹಲಿಯ ಪ್ರತಿ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಲಭ್ಯವಿರುವ ಹಾಸಿಗೆಗಳ ವಿವರ ನೀಡುವಂತೆ  ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರು ಸೂಚಿಸಿದರು. ಮಂಗಳವಾರ ಪ್ರಮಾಣಪತ್ರ ಸಲ್ಲಿಸಲು ತಿಳಿಸಲಾಗಿದೆ.  

ದೆಹಲಿ ಆಸ್ಪತ್ರೆಗಳಿಗೆ ಆಮ್ಲಜನಕವನ್ನು ಪೂರೈಸುತ್ತಿದ್ದ ಐನಾಕ್ಸ್ ಸಂಸ್ಥೆಗೆ ನಿರ್ದೇಶನ ನೀಡಿರುವ ಕೋರ್ಟ್, ಸ್ಥಗಿತಗೊಂಡಿರುವ ಆಮ್ಲಜನಕ ಪೂರೈಕೆಯನ್ನು ತಕ್ಷಣವೇ ಆರಂಭಿಸಿ ಎಂದಿದೆ. ಶೀಘ್ರದಲ್ಲಿ ದೆಹಲಿಗೆ 140 ಟನ್ ಆಮ್ಲಜನಕ ಪೂರೈಸಲು ತಿಳಿಸಿದೆ.

ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಕೆ ಮತ್ತು ಹಾಸಿಗೆಗಳ ಲಭ್ಯತೆ ಕುರಿತು ಕೇಂದ್ರವು ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ಸರ್ಕಾರದ ಪರ ವಕೀಲೆ ಮೋನಿಕಾ ಅರೋರಾ ತಿಳಿಸಿದರು. ಈ ಕುರಿತ ಮಾಹಿತಿಯನ್ನು ಪ್ರಮಾಣಪತ್ರದ ಮೂಲಕ ಸಲ್ಲಿಸಲಾಗುವುದು ಎಂದರು.

ಆಮ್ಲಜನಕ ಸಂಗ್ರಹಕ್ಕೆ ಒತ್ತು

ಮುಂಬೈ: ಕೋವಿಡ್ ರೋಗಿಗಳ ಚಿಕಿತ್ಸೆಗೆ ಬೇಕಾಗಿರುವ ಆಮ್ಲಜನಕ ಸಿಲಿಂಡರ್‌ ಸಂಗ್ರಹಿಸಲು ಮಹಾರಾಷ್ಟ್ರ ಸರ್ಕಾರ ಸಮರೋಪಾದಿಯಲ್ಲಿ ಕ್ರಮ ತೆಗೆದುಕೊಂಡಿದೆ. 

ಮಹಾರಾಷ್ಟ್ರವು ದಿನಕ್ಕೆ 1,250 ಟನ್‌ ಆಮ್ಲಜನಕ ಉತ್ಪಾದನೆ ಸಾಮರ್ಥ್ಯ ಹೊಂದಿದೆ ಎಂದು ರಾಜ್ಯದ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ. ರಾಜ್ಯವು ಭಿಲಾಯಿ ಮತ್ತು ಬಳ್ಳಾರಿಯಿಂದ 300 ಟನ್ ತರಿಸಿಕೊಳ್ಳುತ್ತಿದೆ. ರೈಲ್ವೆ ಮೂಲಕ ಇನ್ನಷ್ಟು ಆಮ್ಲಜನಕ ದಾಸ್ತಾನು ತರಿಸಿಕೊಳ್ಳಲಾಗುವುದು ಎಂದಿದ್ದಾರೆ.

‘ನಾವು 1,800 ಟನ್‌ಗೆ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶ ವಿದೆ. ಹೆಚ್ಚಿನ ರೋಗಿಗಳು ಆಸ್ಪತ್ರೆ ಸೇರುತ್ತಿರುವುದರಿಂದ ಆಮ್ಲಜನಕದ ಸೌಲಭ್ಯಕ್ಕೆ ಬೇಡಿಕೆ ತೀವ್ರವಾಗಿ ಹೆಚ್ಚುತ್ತಿದೆ’ ಎಂದು ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಟೋಪೆ ಹೇಳಿದರು.

ಪೂರೈಕೆಯಲ್ಲಿ ತಾರತಮ್ಯ ಆರೋಪ

ಜೈಪುರ: ಗುಜರಾತ್‌ಗೆ 1,200 ಟನ್ ಆಮ್ಲಜನಕವನ್ನು ಪೂರೈಸಲಾಗುತ್ತಿದ್ದು, ರಾಜಸ್ಥಾನಕ್ಕೆ ಕೇವಲ 124 ಟನ್ ದೊರೆತಿದೆ ಎಂದು ರಾಜಸ್ಥಾನ ಆರೋಗ್ಯ ಸಚಿವ ರಘು ಶರ್ಮಾ ಸೋಮವಾರ ಆರೋಪಿಸಿದ್ದಾರೆ.

ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ಭಿವಾಡಿಯಲ್ಲಿರುವ ದ್ರವ ಆಮ್ಲಜನಕ ಘಟಕವನ್ನು ಉಲ್ಲೇಖಿಸಿ ಮಾತನಾಡಿದ ಸಚಿವರು, ‘ಕಳೆದ
ಬಾರಿ ಆಮ್ಲಜನಕದ ಕೊರತೆ ಇರಲಿಲ್ಲ. ಈ ಬಾರಿ ಹೆಚ್ಚಿನ ಆಮ್ಲಜನಕದ ಅಗತ್ಯವಿರುವಾಗ, ಕೇಂದ್ರವು ಎಲ್ಲಾ ವೈದ್ಯಕೀಯ ಆಮ್ಲಜನಕ ಘಟಕಗಳು ಹಾಗೂ ಪೂರೈಕೆ ಜಾಲವನ್ನು ಸ್ವಾಧೀನಪಡಿಸಿಕೊಂಡಿದೆ’ ಎಂದು ಆರೋಪಿಸಿದ್ದಾರೆ.

***

ವಿವಿಧ ರಾಜ್ಯಗಳಲ್ಲಿ ಲಸಿಕೆ ಮತ್ತು ಆಮ್ಲಜನಕದ ಕೊರತೆಯಿದ್ದು, ಅವುಗಳ ಪೂರೈಕೆಗೆ ಕೇಂದ್ರ ಆದ್ಯತೆ ನೀಡಬೇಕು. ಅಗತ್ಯವಿದ್ದರೆ ಆಮದು ಮಾಡಿಕೊಳ್ಳಬೇಕು
- ಮಾಯಾವತಿ, ಬಿಎಸ್‌ಪಿ ನಾಯಕಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು