ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಮೋಡಿ ಮುಕ್ಕಾಗಿಸಿದ ವಲಸೆ

ಇತರೆ ಹಿಂದುಳಿದ ವರ್ಗಗಳ ಮುಖಂಡರ ಸಾಮೂಹಿಕ ಪಕ್ಷಾಂತರದ ಪರಿಣಾಮ
Last Updated 15 ಜನವರಿ 2022, 4:32 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು, ರಾಜ್ಯದಲ್ಲಿ ಬಿಜೆಪಿಯ ಅತ್ಯಂತ ಜನಪ್ರಿಯ ನಾಯಕ ಮತ್ತು ಜನರನ್ನು ಸೆಳೆಯಬಲ್ಲ ವ್ಯಕ್ತಿ ಎಂದು ತೀರಾ ಇತ್ತೀಚಿನವರೆಗೆ ಹೇಳಲಾಗುತ್ತಿತ್ತು. ಬಿಜೆಪಿಯ ಅತ್ಯುನ್ನತ ನಾಯಕರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತಿಸ್ಪರ್ಧಿಯಾಗಬಲ್ಲ ನಾಯಕ ಎಂದೂ ಯೋಗಿ ಅವರನ್ನು ಬಿಂಬಿಸಲಾಗುತ್ತಿತ್ತು.ಯೋಗಿ ಆದಿತ್ಯನಾಥ ಅವರದ್ದು ಉಗ್ರ ಹಿಂದುತ್ವದ ಪ್ರತಿಪಾದನೆ.ಅವರು ತಮ್ಮ ಧಾರ್ಮಿಕ ಧ್ರುವೀಕರಣ ಉದ್ದೇಶದ ಉಗ್ರ ಭಾಷಣದ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಜನರನ್ನು ಒಗ್ಗೂಡಿಸಿ, ಚುನಾವಣೆ ಗೆಲುವಿಗೆ ನೆರವಾಗುತ್ತಿದ್ದರು ಎಂದು ಹೇಳಲಾಗುತ್ತಿತ್ತು. ಆದರೆ ಕಳೆದ ನಾಲ್ಕು ದಿನಗಳಲ್ಲಿ ಇದು ಬದಲಾಗಿದೆ.

ರಾಜ್ಯದ ಹಿಂದುಳಿದ ವರ್ಗಗಳ ಅತ್ಯಂತ ಪ್ರಭಾವಶಾಲಿ ನಾಯಕರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಆರಂಭವಾದ ನಂತರ, ಯೋಗಿ ಆದಿತ್ಯನಾಥ ಅವರ ಬಗ್ಗೆ ಇದ್ದ ಈ ಚಿತ್ರಣ ಬದಲಾಗುತ್ತಿದೆ. ಹಿಂದುಳಿದ ವರ್ಗಗಳು, ದಲಿತ ಮತ್ತು ಬ್ರಾಹ್ಮಣ ಸಮುದಾಯದ ಪ್ರಭಾವಿ ನಾಯಕರುಒಂದು ವಾರ ಅಥವಾ ಅದಕ್ಕಿಂತ ಹಿಂದಿನ ಕೆಲ ದಿನಗಳಲ್ಲಿ ಸಂಪುಟ ಮತ್ತು ಬಿಜೆಪಿಯನ್ನೂ ತೊರೆದಿದ್ದಾರೆ. ಬಿಜೆಪಿಯ ಪ್ರಬಲ ಎದುರಾಳಿ ಸಮಾಜವಾದಿ ಪಕ್ಷ ಸೇರುತ್ತಿದ್ದಾರೆ. ಈ ಬೆಳವಣಿಗೆಯ ನಂತರ ಯೋಗಿ ಆದಿತ್ಯನಾಥ ಅವರು ಬಿಜೆಪಿಗೆ ಮಾರಕ ಎಂಬರ್ಥದ ಮಾತುಗಳನ್ನು ಪಕ್ಷದ ನಾಯಕರು ಪಿಸುಗುಡುತ್ತಿದ್ದಾರೆ.

ನಾಲ್ಕೇ ದಿನದಲ್ಲಿ ಮೂವರು ಸಚಿವರೂ ಸೇರಿ 11 ಬಿಜೆಪಿ ಶಾಸಕರು ಪಕ್ಷವನ್ನು ತೊರೆದಿದ್ದಾರೆ. ಪಕ್ಷ ತೊರೆದವರೆಲ್ಲರೂ ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯದವರು. 2017ರ ವಿಧಾನಸಭಾ ಚುನಾವಣೆಯಲ್ಲಿ ಯಾದವರನ್ನು ಹೊರತುಪಡಿಸಿ ಬೇರೆ ಹಿಂದುಳಿದ ವರ್ಗಗಳ ಮತಗಳು ಮತ್ತು ಜಾಟವರನ್ನು ಹೊರತುಪಡಿಸಿ ಬೇರೆ ದಲಿತ ಸಮುದಾಯಗಳ ಮತಗಳು ಬಿಜೆಪಿಗೆ ಬೀಳುವಂತೆ ಮಾಡುವಲ್ಲಿ ಈ ನಾಯಕರೆಲ್ಲರೂ ಮಹತ್ವದ ಪಾತ್ರ ವಹಿಸಿದ್ದರು. ಈ ಕಾರಣದಿಂದಲೇ ಆ ಚುನಾವಣೆಯಲ್ಲಿ ಶೇ 40ಕ್ಕಿಂತಲೂ ಹೆಚ್ಚು ಮತಗಳನ್ನು ಪಡೆಯಲು ಸಾಧ್ಯವಾಗಿತ್ತು.

ಈಗ ಬಿಜೆಪಿ ತೊರೆದ ಆ ನಾಯಕರೆಲ್ಲರೂ ಯೋಗಿ ಆದಿತ್ಯನಾಥ ಅವರತ್ತಲೇ ಬೊಟ್ಟುಮಾಡುತ್ತಿದ್ದಾರೆ. ಯೋಗಿ ಅವರ ವರ್ತನೆಯ ಕಾರಣದಿಂದಲೇ ಪಕ್ಷ ಬಿಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ಸ್ವಾಮಿ ಪ್ರಸಾದ್ ಮೌರ್ಯ ಅವರಂತೂ ಈ ವಿಚಾರದಲ್ಲಿ ಅತ್ಯಂತ ಮೊನಚಾದ ಮಾತುಗಳನ್ನಾಡಿದ್ದಾರೆ. ‘ಕೆಳ ಜಾತಿಯ ನಾಯಕರನ್ನು, ಉಪಮುಖ್ಯಮಂತ್ರಿಯಾಗಿರುವ ಕೇಶವ್ ಪ್ರಸಾದ್ ಮೌರ್ಯ ಅವರನ್ನು ಸಹ ಯೋಗಿ ಆದಿತ್ಯನಾಥ ಅವರ ಎದುರಲ್ಲಿ ಸ್ಟೂಲಿನ ಮೇಲೆ ಕೂರಿಸಲಾಗುತ್ತಿತ್ತು’ ಎಂದು ತೀವ್ರ ಬೇಸರ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಎಲ್ಲಾ ಬೆಳವಣಿಗೆಗಳ ನಂತರ ಯೋಗಿ ಆದಿತ್ಯನಾಥ ದುರ್ಬಲ ನಾಯಕ ಮತ್ತು ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸಿ ಗೆಲ್ಲಲು, ಹೋರಾಟ ನಡೆಸಲು ಸಾಧ್ಯವಿಲ್ಲದ ವ್ಯಕ್ತಿ ಎಂದು ಬಿಂಬಿಸಲಾಗುತ್ತಿದೆ. ಮುಖಂಡರು ಪಕ್ಷ ತೊರೆಯುತ್ತಿರುವ ರೀತಿಯು, ಬಿಜೆಪಿ ತನ್ನ ಚುನಾವಣಾ ತಂತ್ರವನ್ನೇ ಬದಲಾಯಿಸುವಂತಹ ಒತ್ತಡ ಸೃಷ್ಟಿಸಿದೆ. ‘ಇದು ಯೋಗಿ ಆದಿತ್ಯನಾಥ ಅವರ ಜನಪ್ರಿಯತೆಯನ್ನೂ ಮುಕ್ಕಾಗಿಸಿದೆ. ಬಹುಶಃ ಯೋಗಿ ಅವರ ಬದಲಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಚುನಾವಣೆಯನ್ನು ಮುನ್ನಡೆಸುವ ಸಾಧ್ಯತೆ ಇದೆ’ ಎಂಬ ಪಿಸುಮಾತುಗಳು ಬಿಜೆಪಿ ಪಾಳಯದಲ್ಲಿ ಕೇಳುತ್ತಿವೆ.

ಆದರೆ, ಬಿಜೆಪಿಯ ಉತ್ತರ ಪ್ರದೇಶದ ಯಾವ ಮುಖಂಡನೂ ಈ ಮಾತನ್ನು ಬಹಿರಂಗವಾಗಿ ಹೇಳುತ್ತಿಲ್ಲ. ‘ಈ ಹೋರಾಟವನ್ನು ಮುನ್ನಡೆಸಲು ಯೋಗಿಜೀ ಅವರಿಂದ ಸಾಧ್ಯವಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಅವರು ಈಗ ಪಕ್ಷದ ಮುಂಚೂಣಿಯ ನಾಯಕರಾಗಲು ಸಾಧ್ಯವಿಲ್ಲ. ಈಗ ಮೋದಿಜೀ ಅವರೇ ರಾಜ್ಯ ಚುನಾವಣೆಯ ಮುಂದಾಳತ್ವವನ್ನು ವಹಿಸಿಕೊಳ್ಳಬೇಕಾದ್ದದ್ದು ಅನಿವಾರ್ಯ’ ಎಂದು ತಮ್ಮ ಹೆಸರು ಹೇಳಲಿಚ್ಛಿಸದ, ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

‘ಈ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಭಾರಿ ಪೈಪೋಟಿ ನೀಡಲಿದೆ. ನಾವು ಮತ್ತೆ ಅಧಿಕಾರಕ್ಕೆ ಬರಬೇಕಿದ್ದರೆ, ಮೋದಿಜೀ ಅವರೇ ಮತ್ತಷ್ಟು ರ‍್ಯಾಲಿಗಳನ್ನು ನಡೆಸಬೇಕಾಗುತ್ತದೆ’ ಎಂದೂ ಆ ನಾಯಕ ಹೇಳಿದ್ದಾರೆ.

ಹಲವು ಮುಖಂಡರು ಪಕ್ಷ ತೊರೆದಿರುವುದು ಉತ್ತರ ಪ್ರದೇಶದ ಬಿಜೆಪಿ ನಾಯಕತ್ವವನ್ನು ಅಲ್ಲಾಡಿಸಿದೆ. ಸ್ವತಃ ಆದಿತ್ಯನಾಥ ಅವರು ಇದರಿಂದ ಧೃತಿಗೆಟ್ಟಿದ್ದಾರೆ. ಇದರಿಂದಲೇ ಅವರು ಪಕ್ಷ ತೊರೆದಿರುವ ಸಚಿವರು ಮತ್ತು ಶಾಸಕರ ಹೆಸರು ಹೇಳಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ‘ಕುಟುಂಬ ರಾಜಕಾರಣದಲ್ಲಿ ನಂಬಿಕೆ ಇಟ್ಟವರು ನಿಜವಾಗಿಯೂ ಹಿಂದುಳಿದವರ ಮತ್ತು ದಲಿತರ ಹಿತೈಷಿಗಳಾಗಲು ಸಾಧ್ಯವಿಲ್ಲ’ ಎಂದು ಶುಕ್ರವಾರ ಗೋರಖಪುರದಲ್ಲಿ ನಡೆದ ಸಭೆಯಲ್ಲಿ ಯೋಗಿ ಹೇಳಿದ್ದಾರೆ. ಜತೆಗೆ ಈ ವರ್ಗಗಳ ಕಲ್ಯಾಣಕ್ಕಾಗಿ ತಮ್ಮ ಸರ್ಕಾರ ಏನೆಲ್ಲಾ ಮಾಡಿದೆ ಎಂಬುದನ್ನೂ ಯೋಗಿ ಪಟ್ಟಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT