ಫೇಸ್‌ಬುಕ್‌ನಿಂದ ಬಿಜೆಪಿ ಶಾಸಕ ರಾಜಾ ಸಿಂಗ್‌ಗೆ ನಿಷೇಧ

ದೆಹಲಿ: ಹಿಂಸೆ ಮತ್ತು ದ್ವೇಷದ ಕುರಿತ ಸಂಸ್ಥೆಯ ನೀತಿ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಫೇಸ್‌ಬುಕ್ ಆಡಳಿತ ಪಕ್ಷ ಬಿಜೆಪಿಯ ಸದಸ್ಯರೊಬ್ಬರನ್ನು ತನ್ನ ವೇದಿಕೆಯಿಂದ ನಿಷೇಧಿಸಿದೆ.
ಮಾರ್ಕ್ ಜುಕರ್‌ಬರ್ಗ್ ಕಂಪನಿ ಫೇಸ್‌ಬುಕ್, ವಿಶ್ವದ ಅತಿ ದೊಡ್ಡ ಮಾರುಕಟ್ಟೆಯಲ್ಲಿ ರಾಜಕೀಯ ವಿಷಯವನ್ನು ಹೇಗೆ ನಿಭಾಯಿಸುತ್ತದೆ ಎಂಬ ಚರ್ಚೆ ತೀವ್ರವಾಗಿ ನಡೆಯುತ್ತಿರುವ ನಡುವೆಯೇ ಫೇಸ್‌ಬುಕ್ ಈ ನಿರ್ಧಾರ ಕೈಗೊಂಡಿದೆ.
‘ಅಪಾಯಕಾರಿ ವ್ಯಕ್ತಿ ಮತ್ತು ಸಂಸ್ಥೆ’ ಎಂಬ ನೀತಿಯಡಿ ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ ಅವರನ್ನು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಿಂದ ನಿಷೇಧಿಸಿರುವುದಾಗಿ ಕಂಪನಿ ಗುರುವಾರ ತಿಳಿಸಿದೆ.
ಈ ಕುರಿತ ಪ್ರತಿಕ್ರಿಯೆಗಾಗಿ ಸಂಪರ್ಕಿಸಿದ ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ವಿಡಿಯೊ ಸಂದೇಶ ನೀಡಿರುವ ರಾಜಾ ಸಿಂಗ್. ‘ನನ್ನ ಬೆಂಬಲಿಗರು ಮತ್ತು ಇತರ ಪಕ್ಷದ ಕಾರ್ಯಕರ್ತರು ನನ್ನ ಹೆಸರು ಬಳಸಿಕೊಂಡು ಫೇಸ್‌ಬುಕ್ ಪುಟಗಳನ್ನು ತೆರೆದಿದ್ದಾರೆ. ನನ್ನ ಸ್ವಂತ ಖಾತೆ ತೆರೆಯಲು ನಾನು ಫೇಸ್‌ಬುಕ್ ಅನ್ನು ಸಂಪರ್ಕಿಸಲು ಚಿಂತಿಸಿದ್ದೇನೆ. ಎಲ್ಲ ಮಾನದಂಡಗಳನ್ನೂ ಪಾಲಿಸಿ ನಾನು ಸಾಮಾಜಿಕ ತಾಣವನ್ನು ಬಳಸಲು ಇಚ್ಚಿಸುತ್ತೇನೆ,’ ಎಂದು ಹೇಳಿದ್ದಾರೆ.
ಮುಸ್ಲಿಮರನ್ನು ದೇಶದ್ರೋಹಿಗಳು ಎಂದು ಕರೆದಿದ್ದ ರಾಜಾ ಸಿಂಗ್ ಅವರ ಪ್ರೊಫೈಲ್ ವಿರುದ್ಧ ‘ದ್ವೇಷ-ಭಾಷಣ ನಿಯಮ’ಗಳ ಅನ್ವಯ ಕ್ರಮ ಕೈಗೊಳ್ಳುವುದನ್ನು ಸಂಸ್ಥೆಯ ಸಾರ್ವಜನಿಕ ಅಧಿಕಾರಿ ಅಂಕಿ ದಾಸ್ ವಿರೋಧಿಸಿದ್ದರು ಎಂದು ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಇತ್ತೀಚೆಗೆ ವರದಿ ಮಾಡಿತ್ತು. ಹೀಗಾಗಿ, ವಿಶ್ವದ ಅತಿದೊಡ್ಡ ಸಾಮಾಜಿಕ ಜಾಲತಾಣವಾಗಿರುವ ಫೇಸ್‌ಬುಕ್ ಭಾರತದಲ್ಲಿ ಸಾರ್ವಜನಿಕ-ಸಂಬಂಧ ಮತ್ತು ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಬೆಳವಣಿಗೆ ನಂತರ ಫೇಸ್‌ಬುಕ್ ರಾಜಾ ಸಿಂಗ್ ಅವರನ್ನು ನಿಷೇಧಿಸಿದೆ.
ಪತ್ರ ಬರೆದಿದ್ದ ಸಚಿವ ರವಿಶಂಕರ್ ಪ್ರಸಾದ್
ಭಾರತದಲ್ಲಿ ಫೇಸ್‌ಬುಕ್ ಬಿಜೆಪಿ ಪರ ಧೋರಣೆ ಹೊಂದಿದೆ ಎಂಬ ಚರ್ಚೆಗಳ ನಡುವೆಯೇ ಸೆ. 1ರಂದು ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರಿಗೆ ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ಪತ್ರ ಬರೆದಿದ್ದರು. ‘ಫೇಸ್‌ಬುಕ್‌ನ ಕೆಲ ಸಿಬ್ಬಂದಿ ನಿರ್ಧಿಷ್ಟ ರಾಜಕೀಯ ಪಕ್ಷದವರೊಂದಿಗೆ ಸೇರಿ, ಪ್ರಧಾನ ಮಂತ್ರಿಯನ್ನೇ ನಿಂದಿಸುವ ಕೆಲಸ ಮಾಡುತ್ತಿದ್ದಾರೆ,’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.